ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಯಕ ಕಾರ್ಯನಿರ್ವಾಹಕ ಎಂಜಿನಿಯರ್
ಕನ್ನಡಪ್ರಭ ವಾರ್ತೆ ಹಳಿಯಾಳಶಿಬಿರಾರ್ಥಿಗಳು ತಮ್ಮ ಸ್ವಯಂ ಉದ್ಯೋಗ ಆರಂಭಿಸುವಾಗ ಪ್ರಚಲಿತ ಮಾರುಕಟ್ಟೆಯ ಬೇಡಿಕೆ, ಗ್ರಾಹಕರ ಮನಸ್ಥಿತಿಯನ್ನು ತಿಳಿದು ಹೆಜ್ಜೆಯಿಡಬೇಕು. ಗ್ರಾಹಕರೊಂದಿಗೆ ನೀವು ಮಾಡಿದ ಮೊದಲ ಸಂಪರ್ಕ ಹಾಗೂ ನಿಮ್ಮ ಮೊದಲ ವಹಿವಾಟು ಅವರ ಮನದಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂದು ಗಣೇಶಗುಡಿ ಕೆಪಿಸಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಂದ್ರ ಘೋಷಣಟ್ಟಿ ಹೇಳಿದರು.
ಪಟ್ಟಣದ ಕೆನರಾಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ ಎಲೆಕ್ಟ್ರಿಕ್ ಮೋಟಾರ್ ರಿವೈಂಡಿಂಗ್, ರಿಪೇರಿ ಮತ್ತು ಸರ್ವಿಸಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.ಆಧುನಿಕ ತಂತ್ರಜ್ಞಾನದ ಯುಗದಲ್ಲಿ ರಿಪೇರಿ ಮತ್ತು ಸರ್ವಿಸಿಂಗ್ ಕ್ಷೇತ್ರಕ್ಕೆ ವಿಪುಲವಾದ ಉದ್ಯೋಗವಕಾಶಗಳಿದ್ದು, ಇಂದು ಮಾರುಕಟ್ಟೆಯಲ್ಲಿ ಪರಿಣಿತರು ಹಾಗೂ ಕೌಶಲ್ಯವನ್ನು ಹೊಂದಿರುವ ಕುಶಲಕರ್ಮಿಗಳಿಗೆ ಮತ್ತು ತಂತ್ರಜ್ಞರಿಗೆ ಬಾರಿ ಬೇಡಿಕೆಯಿದೆ ಎಂದರು.
ಇದು ಪೈಪೋಟಿ ಹಾಗೂ ಗುಣಮಟ್ಟದ ಕಾಲ. ಹೀಗಿರುವಾಗ ಉತ್ತಮ ಗುಣಮಟ್ಟದ ಸೇವೆ ನೀಡುವವರಿಗೆ ಗ್ರಾಹಕರು ಪ್ರಥಮ ಆದ್ಯತೆ ನೀಡುತ್ತಾರೆ. ನಿಮ್ಮ ಸೇವೆ ಮಾರುಕಟ್ಟೆಯಲ್ಲಿ ಭಿನ್ನವಾಗಿದೆ, ಗುಣಮಟ್ಟದಾಗಿದೆ ಹಾಗೂ ಗ್ರಾಹಕರು ಬಯಸಿದ ನಿಗದಿತ ಕಾಲಮಿತಿಯಲ್ಲಿಯೇ ಸೇವೆ ಒದಗಿಸಲಾಗುತ್ತದೆ ಎಂಬ ಚಿತ್ರಣ ಒಮ್ಮೇ ಗ್ರಾಹಕರ ಮನದಲ್ಲಿ ಅಥವಾ ಮಾರುಕಟ್ಟೆಯಲ್ಲಿ ಬಿಂಬಿಸಿದರೇ ಸಾಕು ಗ್ರಾಹಕರು ಮತ್ತು ಮಾರುಕಟ್ಟೆ ವ್ಯವಸ್ಥೆಯು ನಿಮ್ಮನ್ನು ಅರಸಿಕೊಂಡು ಬರುತ್ತದೆ ಎಂದರು.
ಸಮಾರಂಭದಲ್ಲಿ ಸಂಸ್ಥೆಯಲ್ಲಿ ತರಬೇತಿ ಪಡೆದು ಯಶಸ್ವಿ ಉದ್ಯಮಿಯಾಗಿರುವ ಆಕಾಶ್ ಪೋಕಲೆ ಅವರು ತಮ್ಮ ಅನುಭವ ಹಂಚಿಕೊಂಡರು. ತರಬೇತಿಯಲ್ಲಿ ಪಡೆದ ಜ್ಞಾನ ಮತ್ತು ಕೌಶಲ್ಯ ಮಾರುಕಟ್ಟೆಯಲ್ಲಿ ಹೇಗೆ ಸಹಾಯಕಾರಿಯಾಯಿತು ಹಾಗೂ ತಮಗೆ ಎದುರಾದ ಸಮಸ್ಯೆ-ತೊಡಕುಗಳನ್ನು ಒಂದೊಂದಾಗಿ ವಿವರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ ಮಾತನಾಡಿದರು. ತರಬೇತಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ 25 ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಂಸ್ಥೆಯ ಕೊಂಡು ಕೋಕರೆ ಕಾರ್ಯಕ್ರಮ ನಿರ್ವಹಿಸಿದರು.