ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರ
ವಿಧಾನ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಅದ್ವಿತೀಯ ಗೆಲುವು ಸಾಧಿಸಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಗಾಂಧಿ ಮಂದಿರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಕರೆದಿದ್ದ ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿ, ಮೇಲ್ಮನೆಯಲ್ಲಿ ಕಾಂಗ್ರೆಸ್‌ಗೆ ಬಹುಮತದ ಕೊರತೆ ಇದೆ. ವಿಧಾನಸಭೆಯಲ್ಲಿ ಕೆಲವು ಬಿಲ್ ಪಾಸಾದರೂ ವಿಧಾನ ಪರಿಷತ್‌ನಲ್ಲಿ ಬಹುಮತವಿಲ್ಲದೇ ತೊಡಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರ ನೇತೃತ್ವದ ನಡೆದ ಸಭೆಯಲ್ಲಿ ಪರಿಷತ್‌ನ ಎಲ್ಲಾ ಸ್ಥಾನಗಳ ಗೆಲ್ಲಬೇಕೆಂಬ ದೃಢ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಹೆಚ್ಚು ಮತ ಕೊಡಿಸುವ ಹೊಣೆಗಾರಿಕೆ:
ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್ ಅರ್ಹ ಅಭ್ಯರ್ಥಿಯಾಗಿದ್ದು ಅವರ ಗೆಲುವಿಗೆ ಪೂರಕ ವಾತಾವರಣವಿದೆ. ಕಾರ್ಮಿಕ ಕ್ಷೇತ್ರದಿಂದ ಬಂದಿರುವ ಮಂಜುನಾಥ್‌ಗೆ ಅತಿ ಹೆಚ್ಚು ಪದವೀಧರರ ಬೆಂಬಲವಿದೆ. ಶಿಕ್ಷಕರ ಕ್ಷೇತ್ರದಿಂದ ಕೊಡಗಿನಿಂದ ಶಿಕ್ಷಕ ವೃತ್ತಿ ನಿರ್ವಹಿಸಿರುವ ಮಂಜುನಾಥ್ ಸ್ಪರ್ಧಿಸಿದ್ದಾರೆ. ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲುವ ನಿಟ್ಟಿನಲ್ಲಿ ಸಾಗರ ಕ್ಷೇತ್ರದಿಂದ ಹೆಚ್ಚು ಮತ ಕೊಡಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಪಕ್ಷದ ಪ್ರಮುಖರು ಅಹೋರಾತ್ರಿ ಪ್ರಚಾರ ಕಾರ್ಯ ಕೈಗೊಳ್ಳಲು ಕರೆ ನೀಡಿದರು.ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪನವರು ಮಾಡಿರುವ ಕೆಲಸ ನಮಗೆ ಮತ ಕೇಳಲು ಸಹಕಾರಿಯಾಗಿದೆ. ಗೋಪಾಲಕೃಷ್ಣ ಬೇಳೂರು ಶಾಸಕರಾದ ಮೇಲೆ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಬಗ್ಗೆ ಅನುಭವ ಇರುವ ಅಭ್ಯರ್ಥಿಗಳ ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಅವರಿಗೆ ಹೆಚ್ಚು ಮತ ಕೊಡಿಸುವುದು ನಮ್ಮ ಜವಾಬ್ದಾರಿ ಎಂದರು.
ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪ್ರಭಾವತಿ ಚಂದ್ರಕಾಂತ್ ಮಾತನಾಡಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಉಷಾ ಎನ್., ಮಧುಮಾಲತಿ, ರವಿಕುಮಾರ್, ಸುರೇಶಬಾಬು, ಮಕ್ಬೂಲ್ ಅಹ್ಮದ್, ಕೆ.ಹೊಳೆಯಪ್ಪ, ತಸ್ರೀಫ್, ಎನ್.ಲಲಿತಮ್ಮ, ಮೈಕಲ್ ಡಿಸೋಜ ಇನ್ನಿತರರಿದ್ದರು.