ನಾಡಿನ ಯುವ ಸಮುದಾಯದ ಭವಿಷ್ಯಕ್ಕೆ ಆತಂಕ ಸೃಷ್ಟಿಸಿರುವ ಮಾದಕ ವಸ್ತು ಮಾಫಿಯಾವನ್ನು ಹೆಡೆಮುರಿಕಟ್ಟಲು ರಾಜ್ಯ ಮಟ್ಟದಲ್ಲಿ ರಚನೆಗೊಂಡ ಮಾದಕ ವಸ್ತು ನಿಗ್ರಹ ಕಾರ್ಯಪಡೆ (ಎಎನ್‌ಟಿಎಫ್) ಈಗ ತೆವಳುತ್ತಾ ಸಾಗುತ್ತಿದೆ.
ಗಿರೀಶ್ ಮಾದೇನಹಳ್ಳಿ
ಕನ್ನಡಪ್ರಭ ವಾರ್ತೆ ಬೆಂಗಳೂರುನಾಡಿನ ಯುವ ಸಮುದಾಯದ ಭವಿಷ್ಯಕ್ಕೆ ಆತಂಕ ಸೃಷ್ಟಿಸಿರುವ ಮಾದಕ ವಸ್ತು ಮಾಫಿಯಾವನ್ನು ಹೆಡೆಮುರಿಕಟ್ಟಲು ರಾಜ್ಯ ಮಟ್ಟದಲ್ಲಿ ರಚನೆಗೊಂಡ ಮಾದಕ ವಸ್ತು ನಿಗ್ರಹ ಕಾರ್ಯಪಡೆ (ಎಎನ್‌ಟಿಎಫ್) ಈಗ ತೆವಳುತ್ತಾ ಸಾಗುತ್ತಿದೆ.
ಒಂದೆಡೆ ಕಾರ್ಯಾಚರಣೆಗಿಳಿಯಲು ಪಡೆಗೆ ಕಾಯಂ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳಿಲ್ಲ. ಮತ್ತೊಂದೆಡೆ ದಂಧೆಕೋರರ ವಿರುದ್ಧ ಕಾನೂನು ಸಮರಕ್ಕೆ ಎಎನ್‌ಟಿಎಫ್‌ಗೆ ‘ಎಫ್‌ಐಆರ್’ ಎಂಬ ಅಸ್ತ್ರವನ್ನೇ ಸರ್ಕಾರ ನೀಡದ ಪರಿಣಾಮ ರಚನೆಗೊಂಡು ಒಂಬತ್ತು ತಿಂಗಳಾದರೂ ಕಾರ್ಯಪಡೆ ಕಾರ್ಯನಿರ್ವಹಿಸಲು ಆಗದೇ ತೆವಳುತ್ತಾ ಸಾಗುತ್ತಿದೆ.ಯಾವಾಗ ರಚನೆ?:
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಾದಕ ವಸ್ತು ಮಾರಾಟ ಜಾಲ ಶಾಲಾ-ಕಾಲೇಜು ಕಾರಿಡಾರ್‌ಗಳು ಹಾಗೂ ಓಣಿಗಳಿಗೂ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ‘ಡ್ರಗ್ಸ್ ಮುಕ್ತ’ ರಾಜ್ಯವಾಗಿಸಲು ಮಾದಕವಸ್ತುಗಳ ಮಾಫಿಯಾ ವಿರುದ್ಧ ಸಮರ ಸಾರಿರುವುದಾಗಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಘೋಷಿಸಿದ್ದರು. ಇದಕ್ಕಾಗಿ ರಾಜ್ಯ ಮಟ್ಟದಲ್ಲಿ ಮಾದಕ ವಸ್ತು ನಿಗ್ರಹ ಪಡೆ (ಎಎನ್‌ಟಿಎಫ್) ರಚಿಸುವುದಾಗಿ ಹೇಳಿದ ಸರ್ಕಾರ 2025ರ ಅಕ್ಟೋಬರ್ 29ರಂದು ಅಧಿಕೃತವಾಗಿ ಕಾರ್ಯಪಡೆಗೆ ಹಸಿರು ನಿಶಾನೆಯನ್ನು ತೋರಿತು. ಆದರೆ ಕಾರ್ಯಪಡೆ ರಚನೆಗೊಂಡು 9 ತಿಂಗಳಾದರೂ ಇನ್ನು ಶಿಶು ಅವಸ್ಥೆಯಲ್ಲಿ ಉಳಿದಿದೆ.ಕಾರ್ಯಪಡೆಗೆ ಕಾಯಂ ಮುಖ್ಯಸ್ಥರಿಲ್ಲ:
ರಾಜ್ಯ ಕಾಂಗ್ರೆಸ್ ಸರ್ಕಾರ ಕೋಮು ದಳ್ಳುರಿ ತಗ್ಗಿಸಲು ಹಾಗೂ ಮಾದಕ ವಸ್ತು ಮಾಫಿಯಾ ವಿರುದ್ಧ ಹೋರಾಟಕ್ಕೆ ಎರಡು ಕಾರ್ಯಪಡೆಗಳನ್ನು ರಚನೆ ಮಾಡಿದೆ. ಆದರೆ ಕೋಮು ದ್ವೇಷದ ವಿರುದ್ಧ ಕಾರ್ಯಪಡೆಗೆ ಮಂಗಳೂರು ಕೇಂದ್ರ ಸ್ಥಾನವಾಗಿದ್ದು, ಆ ಪಡೆಗೆ ಮುಖ್ಯಸ್ಥರಾಗಿ ಡಿಐಜಿ ಎನ್.ಪ್ರಕಾಶ್ ಗೌಡ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ 100ಕ್ಕೂ ಹೆಚ್ಚಿನ ಸಿಬ್ಬಂದಿಯನ್ನು ಸರ್ಕಾರ ನಿಯೋಜಿಸಿದೆ. ಆದರೆ ಎಎನ್‌ಟಿಎಫ್ ವಿಚಾರದಲ್ಲಿ ಸರ್ಕಾರ ಉದಾಸೀನತೆ ತೋರಿದೆ.ಡಿಐಜಿ, ಎಸ್ಪಿ, ಇಬ್ಬರು ಡಿವೈಎಸ್ಪಿ ಹಾಗೂ ನಾಲ್ವರು ಇನ್ಸ್‌ಪೆಕ್ಟರ್‌ಗಳು ಸೇರಿದಂತೆ 60 ಅಧಿಕಾರಿ-ಸಿಬ್ಬಂದಿಯನ್ನು ಎಎನ್‌ಟಿಎಫ್‌ಗೆ ಸರ್ಕಾರ ಮಂಜೂರು ಮಾಡಿದೆ. ಆದರೆ ಇದುವರೆಗೆ ಎಎನ್‌ಟಿಎಫ್‌ಗೆ ಕಾಯಂ ಮುಖ್ಯಸ್ಥರನ್ನು ಸರ್ಕಾರ ನೇಮಿಸಿಲ್ಲ. ಆರಂಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ (ಎಐಜಿಪಿ) ಸಂಜೀವ್ ಪಾಟೀಲ್ ಪ್ರಭಾರಿಯಾಗಿದ್ದರು. ಕಳೆದ ಜನವರಿಯಲ್ಲಿ ಡಿಐಜಿಯಾಗಿ ಮುಂಬಡ್ತಿ ಪಡೆದ ಎಸ್.ಗಿರೀಶ್ ಅವರು ಕಾರ್ಯಪಡೆ ಮುಖ್ಯಸ್ಥರಾಗಿ ನೇಮಕಗೊಂಡರು. ಆದರೆ ವೈದ್ಯಕೀಯ ಕಾರಣ ನೀಡಿ ಅವರು ಒಂದು ತಿಂಗಳು ರಜೆ ಮೇಲೆ ತೆರಳಿದರು. ರಜೆ ಮುಗಿಸಿ ಮರಳಿದ ಕೆಲವೇ ದಿನಗಳಲ್ಲಿ ಅವರಿಗೆ ಕೇಂದ್ರ ವಲಯ ಡಿಐಜಿ ಸ್ಥಾನವನ್ನು ನೀಡಿದ ಸರ್ಕಾರ, ಎಎನ್‌ಟಿಎಫ್ ಅನ್ನು ಗಿರೀಶ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿತು.
ಆದರೆ ರಾಜಧಾನಿಯ ಅಸುಪಾಸಿನ ಜಿಲ್ಲೆಗಳನ್ನೇ ಒಳಗೊಂಡಿರುವ ಕೇಂದ್ರ ವಲಯದ ನಿರ್ವಹಣೆಯ ಕಾರ್ಯದೊತ್ತಡದ ಮಧ್ಯೆ ಎಎನ್‌ಟಿಎಫ್ ವಿದ್ಯಮಾನಗಳಿಗೆ ಸಮಯ ನೀಡುವುದು ಡಿಐಜಿ ಅವರಿಗೆ ಸವಾಲಾಗಿದೆ. ಅದೇ ರೀತಿ ಅಪರಾಧ ತನಿಖಾ ದಳ (ಸಿಐಡಿ)ದ ಎಸ್ಪಿ ಲೋಕೇಶ್ ಜಗಲಾಸರ್ ಅವರಿಗೂ ಎಎನ್‌ಟಿಎಫ್ ಪ್ರಭಾರ ವಹಿಸಲಾಗಿದೆ. ಎಸ್ಪಿ ಅವರಿಗೆ ಸಿಐಡಿ ತನಿಖೆ ಕೆಲಸಗಳ ನಡುವೆ ಎಎನ್‌ಟಿಎಫ್ ಗೆ ಸಮಯ ಮೀಸಲು ತ್ರಾಸದಾಯಕವಾಗಿದೆ. ಈ ಕಾರ್ಯಭಾರ ಮಧ್ಯೆಯೂ ಎಎನ್‌ಟಿಎಫ್ ಸಜ್ಜುಗೊಳಿಸಲು ಇಬ್ಬರು ಶ್ರಮಿಸುತ್ತಿದ್ದಾರೆ. ಇತ್ತೀಚಿಗೆ ಕಾರ್ಯಪಡೆಗೆ ಇಬ್ಬರು ಡಿವೈಎಸ್ಪಿಗಳು ವರದಿ ಮಾಡಿಕೊಂಡರೆ, ಮೂವರ ಪೈಕಿ ಓರ್ವ ಇನ್ಸ್‌ಪೆಕ್ಟರ್ ಮಾತ್ರ ಕಾರ್ಯಪಡೆ ಸೇರಿದ್ದಾರೆ. ಸದ್ಯ ರಾಜ್ಯ ಪೊಲೀಸ್ ಕೇಂದ್ರ ಕಾರ್ಯಾಲಯದಲ್ಲಿ ಎಎನ್‌ಟಿಎಫ್ ಕೇಂದ್ರ ಕಚೇರಿ ತೆರೆಯಲಾಗಿದೆ. ಕಬ್ಬನ್ ಪಾರ್ಕ್ ಸಮೀಪದಲ್ಲಿರುವ ಹಳೆಯೇ ಕೇಂದ್ರ ವಿಭಾಗದ ಡಿಸಿಪಿ ಕಚೇರಿಯನ್ನು ಎಎನ್‌ಟಿಎಫ್ ನೀಡಲಾಗಿದ್ದು, ಹಳೇ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದು ಸಿದ್ಧಗೊಳಿಸಲಾಗುತ್ತಿದೆ.ಎಫ್‌ಐಆರ್ ಅಧಿಕಾರಕ್ಕೆ ಮನವಿ:
ಡ್ರಗ್ಸ್ ಮಾಫಿಯಾ ವಿರುದ್ಧ ಗುಪ್ತಚರ ಮಾದರಿಯಲ್ಲಿ ಮಾಹಿತಿ ಸಂಗ್ರಹಿಸುವ ಕಾರ್ಯವನ್ನಷ್ಟೇ ಎಎನ್‌ಟಿಎಫ್ ನಿರ್ವಹಿಸಬೇಕಿದೆ. ಹೀಗಾಗಿ ಡ್ರಗ್ಸ್ ದಂಧೆಕೋರರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವ ಅಧಿಕಾರವನ್ನು ಈ ಪಡೆಗೆ ಸರ್ಕಾರ ನೀಡಿಲ್ಲ. ಇದು ಸಹ ಕಾರ್ಯಪಡೆಯ ಕಾರ್ಯಾಚರಣೆ ಮೇಲೆ ಅಡ್ಡಪರಿಣಾಮ ಬೀರಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವ ಠಾಣಾಧಿಕಾರಿ ನೀಡುವಂತೆ ಸರ್ಕಾರಕ್ಕೆ ಎಎನ್‌ಟಿಎಫ್ ಮನವಿ ಸಲ್ಲಿಸಿದೆ.