ಸಾರಾಂಶ
ನಾರಾಯಣ ಹೆಗಡೆ
ಹಾವೇರಿ: ಜಿಲ್ಲೆಯ ನೀರಿನ ಬವಣೆ ನೀಗಿಸಲು ಬೇಡ್ತಿ- ವರದಾ ನದಿ ಜೋಡಣೆ ಆಗಲೇಬೇಕು. ಅದಕ್ಕಾಗಿ ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂಬ ಅಭಿಪ್ರಾಯ ಜಿಲ್ಲಾದ್ಯಂತ ವ್ಯಕ್ತವಾಗಿದೆ.ಮೂರು ದಶಕದ ಯೋಜನೆ ಈಗ ಮುನ್ನೆಲೆಗೆ ಬಂದಿರುವ ಹಿನ್ನೆಲೆ ಜಿಲ್ಲೆಯ ರೈತರು, ಮಠಾಧೀಶರು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರಿಂದಲೂ ಒಮ್ಮತದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕುಡಿಯುವ ನೀರಿಗೆ ಯಾರೂ ವಿರೋಧ ಮಾಡಬಾರದು, ಉತ್ತರ ಕನ್ನಡ ಜಿಲ್ಲೆಯ ಜನರೂ ಸಾಥ್ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಳಂಬ ಮಾಡದೇ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂಬುದು ಜಿಲ್ಲೆಯ ಜನರ ಹಕ್ಕೊತ್ತಾಯವಾಗಿದೆ. ನದಿ ಜೋಡಣೆ ಮಾಡಿ ರೈತರ ನೆರವಿಗೆ ಧಾವಿಸಿ
ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಬಯಲು ಭೂಮಿಗೆ ನೀರಾವರಿ ಅನುಕೂಲ ಮಾಡಿಕೊಡಲು ವರದಾ ಮತ್ತು ಬೇಡ್ತಿ ನದಿಗಳನ್ನು ಜೋಡಣೆ ಮಾಡಿ ರೈತ ಸಮೂಹದ ನೆರವಿಗೆ ಧಾವಿಸಬೇಕು ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಒತ್ತಾಯಿಸಿದ್ದಾರೆ.ಹಾವೇರಿ ಜಿಲ್ಲೆಯ ಜೀವನದಿ ವರದಾ ನದಿಗೆ ಬೇಡ್ತಿ ನದಿಯನ್ನು ಜೋಡಿಸುವುದಕ್ಕೆ ಸಂಬಂಧಿಸಿದಂತೆ ಹಿಂದೆ ಕೇಂದ್ರದ ಜಲಸಂಪನ್ಮೂಲ ಇಲಾಖೆ ಅಧ್ಯಯನ ಕೈಗೊಂಡು ಯೋಜನೆಗೆ ಪೂರಕ ಅಂಶಗಳನ್ನು ದಾಖಲಿಸಿದೆ. 2010ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಸಹ ಬರೆಯಲಾಗಿತ್ತು. ಕೇಂದ್ರ ಜಲಶಕ್ತಿ ಮಂತ್ರಾಲಯದಡಿ ಇರುವ ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆಯ ಶಿಫಾರಸಿನಂತೆ ಭಾರತದ ಮಹತ್ವಾಕಾಂಕ್ಷೆಯ 30 ನದಿಗಳ ಜೋಡಣೆಯಲ್ಲಿ ವರದಾ ಮತ್ತು ಬೇಡ್ತಿ ನದಿಗಳ ಜೋಡಣೆಯೂ ಒಂದಾಗಿದೆ. ಉತ್ತರ ಕರ್ನಾಟಕದ ಹಾವೇರಿ, ಗದಗ, ಧಾರವಾಡ, ಕೊಪ್ಪಳ, ರಾಯಚೂರು ಸೇರಿದಂತೆ ಸುತ್ತಲಿನ ಜಿಲ್ಲೆಗಳ ಜನ ಮತ್ತು ರೈತರಿಗೆ ಅನುಕೂಲವಾಗುವ ಈ ಯೋಜನೆಯ ಜಾರಿಗೆ ಕೇಂದ್ರ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಇತ್ತೀಚಿಗೆ ತಾಲೂಕಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ವರದಾ ಮತ್ತು ಬೇಡ್ತಿ ನದಿಗಳ ಜೋಡಣೆಗೆ ಸಂಬಂಧಿಸಿದಂತೆ ಮನವಿ ಮಾಡಲಾಗಿತ್ತು. ವಿಧಾನಸಭೆ ಅಧಿವೇಶನದಲ್ಲಿ ಸಹ ಈ ಕುರಿತು ಧ್ವನಿ ಎತ್ತಲಾಗಿದೆ. ಪರಿಣಾಮ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿದೆ. ಜತೆಗೆ ಜನಾಭಿಪ್ರಾಯಕ್ಕೆ ಸ್ಪಂದಿಸಿ ಸಂಸದ ಬಸವರಾಜ ಬೊಮ್ಮಾಯಿ ಅವರು ಸಹ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಜಿಲ್ಲೆಯ ನೀರಿನ ಬವಣೆ ನೀಗಿಸಲು ಈ ಯೋಜನೆ ಜಾರಿಯಾಗಬೇಕಿದೆ. ಯೋಜನೆ ವಿಳಂಬಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣ
ಬೇಡ್ತಿ ವರದಾ ನದಿ ಜೋಡಣೆ ಈಗಾಗಲೇ ಪೂರ್ಣಗೊಂಡು ನೀರು ಹರಿಸಲು ಆರಂಭವಾಗಬೇಕಾಗಿತ್ತು. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ 30 ವರ್ಷಗಳ ವಿಳಂಬಕ್ಕೆ ಕಾರಣ. ರಾಷ್ಟ್ರೀಯ ನದಿ ಜೋಡಣೆ ವಿಷಯದಲ್ಲಿ ಸ್ಪಷ್ಟವಾದ ನಿಲುವು ಇದೆ. ಎಲ್ಲವನ್ನೂ ಪರಿಶೀಲಿಸಿ ಇದನ್ನು ಹೆಸರಿಸಲಾಗಿದೆ ಎಂದು ವರದಾ ಬೇಡ್ತಿ ಹೋರಾಟ ಸಮಿತಿಯ ಅಧ್ಯಕ್ಷ ಸೋಮಶೇಖರ ಕೋತಂಬರಿ ತಿಳಿಸಿದರು.ನಮ್ಮ ಮಂತ್ರಿಗಳು, ಶಾಸಕರು ಅದರಲ್ಲೂ ಸಂಸದರ ವಿಶೇಷ ಕಾಳಜಿ ಬೇಕು. ಇದಕ್ಕಾಗಿ ದೊಡ್ಡ ಆಂದೋಲನವೇ ಬೇಕಾಗಿಲ್ಲ. ಸಮುದ್ರಕ್ಕೆ ಹರಿದು ಹೋಗುವ ನೀರನ್ನು ರೈತರ ಜಮೀನಿಗೆ ಕೊಡುವುದು, ಹಲವು ಜಿಲ್ಲೆಗಳ ಜನರ ಕುಡಿಯುವ ನೀರಿನ ಬವಣೆ ಇಂಗಿಸುವುದು ಎಂದರೆ ಅದು ಈ ಸರ್ಕಾರಗಳ ಮೊದಲ ಆದ್ಯತೆಯಾಗಬೇಕು. ಇದಕ್ಕಾಗಿ 3 ದಶಕಗಳಿಂದ ಬೇಡಿಕೆ ಇದ್ದರೂ ಗಣನೆಗೆ ತೆಗೆದುಕೊಳ್ಳದೆ ಇರುವುದು ವಿಷಾದದ ಸಂಗತಿ.
ರೈತರು ಬರದಿಂದಾಗಿ ದುಡಿಯಲು ಕೆಲಸವಿಲ್ಲದೆ ಗುಳೆ ಹೋಗುವ ಸಂದರ್ಭಗಳು ಮೇಲಿಂದ ಮೇಲೆ ಉದ್ಭವಿಸುತ್ತವೆ. ಇದೆಲ್ಲವನ್ನು ತಡೆಯಲು ನೀರಾವರಿ ಸೌಲಭ್ಯ ನೀಡುವಲ್ಲಿ ಸರ್ಕಾರಗಳೇಕೆ ಹಿಂದೇಟು ಹಾಕಬೇಕು. ಈಗಾಗಲೇ ಬಹಳ ತಡವಾಗಿದೆ. ಇನ್ನು ಇದಕ್ಕೆ ಅವಕಾಶವಿಲ್ಲದಂತೆ ಈ ಯೋಜನೆ ಮಂಜೂರು ಮಾಡಿ ಕಾಮಗಾರಿ ಆರಂಭಿಸಬೇಕು.ಇದರಿಂದ ಸರ್ಕಾರಕ್ಕೂ ಲಾಭ. ಈ ಭಾಗದ ರೈತರು ನೆಮ್ಮದಿಯಿಂದ ಕೃಷಿಗೆ ಮುಂದಾಗುತ್ತಾರೆ. ರೈತರ ಮಕ್ಕಳು ದೂರದ ದೊಡ್ಡ ಪಟ್ಟಣಗಳಿಗೆ ಗುಳೆ ಹೋಗಿ ಕೈಕಾಸಿಗೆ ಕಾಲ ಕಳೆಯುಂತಾಗಿದೆ. ನೀರಾವರಿ ಯೋಜನೆಗಳನ್ನು ಸಾಕಾರ ಮಾಡಿ. ರೈತ ಮಕ್ಕಳ ದುಡಿಮೆಗೆ ಶಕ್ತಿ ಕೊಡಿ.
ಈ ಯೋಜನೆಯನ್ನು ವಿರೋಧಿಸುತ್ತಿರುವವರಿಗೆ ಯೋಜನೆಯ ಸರಿಯಾದ ಜ್ಞಾನವಿಲ್ಲ. ವಿರೋಧಕ್ಕಾಗಿ ಇದು ವಿರೋಧವಾಗಿದೆ. ಸರ್ಕಾರ ನಿರ್ಧರಿಸಿ ಕಾಮಗಾರಿ ಆರಂಭಿಸಲಿ. ಸಮುದ್ರಕ್ಕೆ ಹೋಗುವ ನೀರನ್ನು ರೈತರ ಭೂಮಿಗೆ ನೀಡಲು ಮುಂದಾಗುವುದು ಅಪರಾಧವೇ? ರೈತರ ಹಿತ ಕಾಪಾಡುವ ಯಾರೂ ಇಂತಹ ತರಲೆ ಮಾಡುವುದಿಲ್ಲ. ಸರ್ಕಾರವೂ ಇಂಥವರ ಮಾತಿಗೆ ಗಮನ ಕೊಡದೇ ಯೋಜನೆಯನ್ನು ಸಾಕಾರ ಮಾಡಲಿ. ರೈತ ಜನ ಬಂಡೇಳುವವರೆಗೆ ಸರ್ಕಾರ ಕಾಯುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.ಸರ್ಕಾರ ಮೊದಲ ಆದ್ಯತೆ ನೀಡಲಿ
ರೈತರಿಗೆ ಒಳ್ಳೆಯದಾಗುವ ಯೋಜನೆಗಳಿಗೆ ಸರ್ಕಾರಗಳು ಮೊದಲ ಆದ್ಯತೆ ನೀಡಬೇಕು ಎಂದು ಜಿಪಂ ಮಾಜಿ ಸದಸ್ಯರು, ಕೃಷಿಕರೂ ಆಗಿರುವ ಬಸವರಾಜ ಹಾದಿಮನಿ ತಿಳಿಸಿದರು.30 ವರ್ಷಗಳಿಂದ ಬೇಡಿಕೆ ಇರುವ ವರದಾ ಬೇಡ್ತಿ ನೀರಾವರಿ ಯೋಜನೆಯನ್ನು ಸಾಕಾರ ಮಾಡಲು ಇನ್ನೂ ಕಾಯಬೇಕೆ? ಏನೆಲ್ಲ ಯೋಜನೆಗಳು ಸರ್ಕಾರದಿಂದ ಬರುತ್ತವೆ, ಹೋಗುತ್ತವೆ. ಆದರೆ ಅನ್ನದಾತನ ಕೈ ಹಿಡಿಯುವ ಯೋಜನೆಗಳು ಮಾತ್ರ ಸಕಾಲಿಕವಾಗಿ ಸಿಗುವುದಿಲ್ಲ. ಅಷ್ಟೇ ಅಲ್ಲ, ಬೀದಿಗಿಳಿದು ಹೋರಾಡಿ, ಚೀರಾಡಿದರೂ ಕಣ್ಣೆತ್ತಿ ನೋಡದ ಸರ್ಕಾರಗಳು ರೈತರ ಹಿತ ಕಾಪಾಡಬಲ್ಲವೆ ಎಂಬುದೇ ಯಕ್ಷಪ್ರಶ್ನೆಯಾಗಿದೆ.
ರಾಜ್ಯ ಕೇಂದ್ರ ಸರ್ಕಾರಗಳ ಇಚ್ಛಾಶಕ್ತಿಗೆ ಮಾತ್ರ ಒಳ್ಳೆಯ ಕೆಲಸ ಆಗಬಲ್ಲದು. ರೈತರ ಹಿತದಲ್ಲಿ ಇಡೀ ನಾಡಿನ ಹಿತ ಇದೆ ಎಂಬ ಅರಿವು ಎಲ್ಲರಿಗೂ ಬೇಕು. ಇನ್ನೂ ಅವೈಜ್ಞಾನಿಕವಾದ ವಿಚಾರ ಇಟ್ಟುಕೊಂಡು ವಿರೋಧ ಮಾಡುವವರ ಬಗ್ಗೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಇನ್ನೂ ಹಿಂದೇಟು ಹಾಕದೇ ಬೇಡ್ತಿ ವರದಾ ಜಾರಿಯಾಗಲಿ ಎಂದು ಒತ್ತಾಯಿಸಿದರು.ಹೋರಾಟ ತೀವ್ರ: ಈ ಯೋಜನೆ ಸಂಬಂಧ ಪಕ್ಷಾತೀತ ಹೋರಾಟ ನಡೆಯುತ್ತಿದೆ. ಇದು ರಾಜಕೀಯ ತಿರುವು ಪಡೆಯಬಾರದು. ಕೇಂದ್ರ, ರಾಜ್ಯ ಸರ್ಕಾರಗಳು ಸೇರಿ ಈ ಯೋಜನೆ ಕಾರ್ಯಗತಗೊಳಿಸಿ ರೈತರಿಗೆ ನೀರು ಒದಗಿಸಬೇಕು. ಈ ನಿಟ್ಟಿನಲ್ಲಿ ರೈತ ಸಂಘ ಮತ್ತು ಹಸಿರುಸೇನೆಯಿಂದ ಹೋರಾಟ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.ಮಠಾಧೀಶರ ಸಹಕಾರ: ನಾಡಿನ ಒಳಿತಿಗಾಗಿ ಮಠಗಳು ಇರೋದು. ಈ ಹೋರಾಟಕ್ಕೆ ಜಿಲ್ಲೆಯ ಎಲ್ಲ ಮಠಗಳು, ಮಠಾಧೀಶರ ಸಹಕಾರ ಇದ್ದೇ ಇರುತ್ತದೆ. ಈ ಜನಪರ ಹೋರಾಟ ಯಶಸ್ವಿಯಾಗಲಿ ಎಂದು ಸದಾಶಿವ ಸ್ವಾಮೀಜಿ ತಿಳಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))