ತಾಳೆ ಎಣ್ಣೆಗೆ ಭಾರಿ ಬೇಡಿಕೆ ಇದೆ

| Published : Jul 07 2025, 11:48 PM IST

ಸಾರಾಂಶ

ಭೇರ್ಯ: ತಾಳೆ ಎಣ್ಣೆಗೆ ಭಾರಿ ಬೇಡಿಕೆ ಇದೆ, ರೈತರು ತಾಳೆ ಬೇಸಾಯ ಕೈಗೊಳ್ಳುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯಿಂದ ತಾಳೆ ಬೆಳೆ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ, ಆಸಕ್ತ ರೈತರು ಇದರಸದುಪಯೋಗ ಪಡೆಯಿರಿ ಎಂದು ಮಿರ್ಲೆ ಹೋಬಳಿಯ ಸಹಾಯಕ‌ ತೋಟಗಾರಿಕೆ ಅಧಿಕಾರಿ ರಾಜೇಶ್ ಹೇಳಿದರು.

ಭೇರ್ಯ: ತಾಳೆ ಎಣ್ಣೆಗೆ ಭಾರಿ ಬೇಡಿಕೆ ಇದೆ, ರೈತರು ತಾಳೆ ಬೇಸಾಯ ಕೈಗೊಳ್ಳುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯಿಂದ ತಾಳೆ ಬೆಳೆ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ, ಆಸಕ್ತ ರೈತರು ಇದರಸದುಪಯೋಗ ಪಡೆಯಿರಿ ಎಂದು ಮಿರ್ಲೆ ಹೋಬಳಿಯ ಸಹಾಯಕ‌ ತೋಟಗಾರಿಕೆ ಅಧಿಕಾರಿ ರಾಜೇಶ್ ಹೇಳಿದರು.

ಭೇರ್ಯ ಗ್ರಾಪಂ ಆವರಣದಲ್ಲಿ ತಾಳೆ ಬೆಳೆ ಬೆಳೆಯುವ ಬಗ್ಗೆ ಹಾಗೂ ತಂಬಾಕು ಪರ್ಯಾಯ ಬೆಳೆ ಬಗ್ಗೆ ಸ್ಥಳೀಯ ಗ್ರಾಪಂ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೌಷ್ಟಿಕಾಂಶದ ದೃಷ್ಟಿಯಿಂದಲೂ ತಾಳೆ ಎಣ್ಣೆಯು ವಿಟ ಮಿನ್ ಎ ಮತ್ತು ಇ ಸತ್ವವನ್ನು ಹೇರಳ ವಾಗಿ ಹೊಂದಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವು ತಾಳೆ ಬೇಸಾಯವನ್ನು ರೈತರ ಜಮೀನಿನಲ್ಲಿ ಪ್ರೋತ್ಸಾಹಿಸುತ್ತಿದೆ. ಇಂದು ಈ ಬೆಳೆಯು ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿ ಹೊರಹೊಮ್ಮುತ್ತಿದೆ ಎಂದರು.

ತಾಳೆ ಬೆಳೆಗಾರರಿಗೆ ಹಲವು ಸೌಲಭ್ಯ: ತಾಳೆ ಬೆಳೆಗಾರರಿಗೆ ಇಲಾಖೆಯಿಂದ ಹಲವು ಸೌಲಭ್ಯ ದೊರೆಯುತ್ತಿದ್ದು, ತಾಳೆ ಬೆಳೆಯ ವಿಸ್ತರಣೆ ಕಾರ್ಯಕ್ರಮದಡಿ, 9x9x9 ಮೀಟರ್ ಅಂತರದಲ್ಲಿ ತ್ರಿಕೋನ ವಿನ್ಯಾಸ ದಲ್ಲಿ ತಾಳೆ ಸಸಿಗಳ ಪ್ರದೇಶ ವಿಸ್ತರಣೆ ಕೈಗೊಂಡರೆ ಸಹಾಯಧನ ದೊರೆಯಲಿದೆ.ಮೊದಲ ನಾಲ್ಕು ವರ್ಷಗಳ ನಿರ್ವಹಣೆ ಮಾಡಿದರೆ ನಾಲ್ಕು ವರ್ಷಗಳಲ್ಲಿ ವಿಸ್ತರಣೆ ಕೈಗೊಂಡು ಈಗಾಗಲೇ ಅಭಿವೃದ್ದಿ ಪಡಿಸಿರುವ ತಾಳೆ ತೋಟಗಳಿಗೆ ಪ್ರತಿ ಹೆಕ್ಟೇರ್ಗೆ ರು. 10,500 ಸಹಾಯಧನವನ್ನು ರಾಸಾಯನಿಕ ಹಾಗೂ ಸಾವಯವ ಗೊಬ್ಬರದ ರೂಪದಲ್ಲಿ ಸರ್ಕಾರಿ ಅನುಮೋದಿತ ಖಾಸಗಿ ಪಾಲುದಾರ ಸಂಸ್ಥೆಯವರ ಸಹಯೋಗದೊಂದಿಗೆ ವಿತರಿಸಲಾಗುವುದು ಎಂದರು.

ನರೇಗಾ ಯೋಜನೆ ಮೂಲಕ ರೈತರ ಜಮೀನಿನಲ್ಲಿ ವಿವಿದ ತೋಟಗಾರಿಕೆ ಬೆಳೆಗಳನ್ನು ಬೆಳೆಯ ಬಹುದಾಗಿದ್ದು ಇದರಲ್ಲಿ ಮಾವು, ಸಪೋಟ, ತೆಂಗು, ಅಂಗಾಂಶ ಬಾಳೆ, ಪರಂಗಿ, ನುಗ್ಗೆ, ನಿಂಬೆ, ಹಾಗೂ ಇನ್ನಿತರೆ ಬಹುವಾರ್ಷಿಕ ಬೆಳೆಯ ಬಹುದಾಗಿದೆ ಎಂದರು.

ಅರ್ಜಿಯೊಂದಿಗೆ ರೈತರು ಜಾಬ್ ಕಾರ್ಡ್, ಪಹಣಿ ( ಆರ್.ಟಿ.ಸಿ.), ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ನೀಡ ಬೇಕು ಎಂದು ಮನವಿ ಮಾಡಿದರು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹೊರ ತಂದಿರುವ ತಾಳೆ ಬೆಳೆ ಬಗ್ಗೆ ಪ್ರೋತ್ಸಾಹಿಸುವ ಕರಪತ್ರಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಕೆ.ಮಂಜಪ್ಪ ಬಿಡುಗಡೆ ಮಾಡಿದರು.

ಗ್ರಾಪಂ ಸದಸ್ಯ ಬಿ.ಕೆ. ಶಿವಕುಮಾರ್, ಪಿಡಿಓ ಮಮತ, ಲೆಕ್ಕಾಧಿಕಾರಿ ಬಿ.ಎಸ್. ಅಶ್ವಿನಿ, ಡಿಇಓ ಜಯಂತ್, ಸ್ವಚ್ಚತಾ ವಾಹನದ ಸಾರಥಿದಿವ್ಯ, ಪೌರ ಕಾರ್ಮಿಕರಾದ ಚೆನ್ನ, ನಾಗರಾಜ, ರೈತರಾದ ತನು, ನಜೀರ್, ರಾಜೇಗೌಡ ಇದ್ದರು.