ಮಂದಿರ ನಿರ್ಮಾಣದಲ್ಲಿ ಪೇಜಾವರ ಶ್ರೀಗಳ ಪ್ರಯತ್ನ ಬಹಳ ಇದೆ: ಕಾಣಿಯೂರು ಶ್ರೀ

| Published : Jan 21 2024, 01:32 AM IST

ಸಾರಾಂಶ

ಮೂರ್ತಿ ರಾಮನಂತಿಲ್ಲ ಎಂಬ ದಿಗ್ವಿಜಯ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ದಿಗ್ವಿಜಯ ಸಿಂಗ್ ರಾಮನನ್ನು ನೋಡಿದ್ದಾರಾ? ನೋಡಿದ್ದರೆ ರಾಮ ಹೇಗಿದ್ದ ಎಂದು ಹೇಳಲಿ. ಬೇಕಾದರೆ ಅದೇ ತರ ಮಾಡೋಣ ಎಂದು ತಿರುಗೇಟು ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ರಾಮ ಮಂದಿರ ನಿರ್ಮಾಣದಲ್ಲಿ ಪೇಜಾವರ ಶ್ರೀಗಳ ಪ್ರಯತ್ನ ಬಹಳ ಇದೆ. ಟೆಂಟ್‌ನ ಒಳಗೆ ರಾಮನ ವಿಗ್ರಹ ಪ್ರತಿಷ್ಠಾಪನೆ ಮಾಡಿದವರೇ ಪೇಜಾವರ ಶ್ರೀಗಳು. ಅನೇಕರ ಪ್ರಯತ್ನದಿಂದ ಈಗ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮನ ಪ್ರತಿಮೆ ಮುಖ ಬಹಳ ಸುಂದರವಾಗಿದೆ. ಮಂದಸ್ಮಿತ ದೇಹ ಲಕ್ಷಣಗಳು ಆಕರ್ಷಕವಾಗಿದೆ. ರಾಮ ದೇವರನ್ನೇ ಕಣ್ಣಾರೆ ನೋಡಿದಂತಾಗುತ್ತದೆ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾ ವಲ್ಲಭ ತೀರ್ಥರು ಹೇಳಿದರು.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನದ ಹಿನ್ನೆಲೆ ಶ್ರೀಗಳು ಅಯೋಧ್ಯೆಗೆ ತೆರಳಿದರು.

ಅಯೋಧ್ಯೆಗೆ ಆಹ್ವಾನ ಬಂದಿರುವುದು ಖುಷಿ ತಂದಿದೆ. ನಾನು ಈಗಲೇ ಅಯೋಧ್ಯೆಗೆ ಹೊರಟಿದ್ದೇನೆ. ಆಹ್ವಾನದ ಬಗ್ಗೆ ಮೊದಲು ಗೊಂದಲ ಇತ್ತು. ಪ್ರಾಣ ಪ್ರತಿಷ್ಠೆ ವೇಳೆ ಆಹ್ವಾನ ಬರಬಹುದೆಂದು ನಿರೀಕ್ಷೆ ಮಾಡಿರಲಿಲ್ಲ. ಟ್ರಸ್ಟ್‌ನಿಂದ ಆಹ್ವಾನ ಬಂದ ಬಳಿಕ ಖಚಿತಗೊಂಡಿತು. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಬೇಕು ಎಂಬ ಬಯಕೆ ಇತ್ತು ಎಂದರು.

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ರಾಮನ ಪ್ರತಿಮೆ ಕರ್ನಾಟಕದಲ್ಲಿ ಆಗಿದ್ದು ಅನ್ನೋದು ಸಂತೋಷದ ವಿಚಾರ.ಇನ್ನು ಮುಂದೆ ಅಲ್ಲಿ ಶಾಶ್ವತವಾಗಿ ಆ ಪ್ರತಿಮೆ ಇರಲಿದೆ. ನಮ್ಮ ರಾಜ್ಯದ ಶಿಲ್ಪಿ ಕೆತ್ತಿರುವ ಪ್ರತಿಮೆ ಸುಂದರವಾಗಿ ಮೂಡಿಬಂದಿದೆ. ಅಯೋಧ್ಯೆಗೆ ಹೋದಾಗಲೆಲ್ಲ ಇದನ್ನು ನಾವು ನೆನಪು ಮಾಡಿಕೊಳ್ಳಬಹುದು ಎಂದು ಹೇಳಿದರು.* ಆಹ್ವಾನ ಇದ್ದು ಹೋಗದವರ ಬಗ್ಗೆ ಮಾತನಾಡಲ್ಲ:

ಆಹ್ವಾನ ಇದ್ದು ಹೋಗದವರ ಬಗ್ಗೆ ನೋ ಕಮೆಂಟ್ಸ್. ಅವರಿಗೆ ದೇವರೇ ಬುದ್ಧಿ ಕೊಡಬೇಕು. ದೇವರೇ ಅವರನ್ನು ಕರೆಸಿಕೊಳ್ಳುತ್ತಾರೆ ಎಂದಷ್ಟೇ ಹೇಳಬಹುದು. ರಾಮದೇವರು ಯಾರಿಗೂ ಕನಸಲ್ಲಿ ಬಂದು ಬರಬೇಡ ಎಂದು ಹೇಳಿರುವುದಿಲ್ಲ. ಅದೆಲ್ಲ ಕೇವಲ ಅವರವರ ಕಲ್ಪನೆ ಎಂದು ಶ್ರೀಗಳು ಹೇಳಿದರು.* ದಿಗ್ವಜಯ್‌ ಸಿಂಗ್‌ ರಾಮನನ್ನು ನೋಡಿದ್ದಾರಾ?:ಮೂರ್ತಿ ರಾಮನಂತಿಲ್ಲ ಎಂಬ ದಿಗ್ವಿಜಯ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ದಿಗ್ವಿಜಯ ಸಿಂಗ್ ರಾಮನನ್ನು ನೋಡಿದ್ದಾರಾ? ನೋಡಿದ್ದರೆ ರಾಮ ಹೇಗಿದ್ದ ಎಂದು ಹೇಳಲಿ. ಬೇಕಾದರೆ ಅದೇ ತರ ಮಾಡೋಣ. ಹಿಂದುಗಳು ಒಗ್ಗಟ್ಟಾಗುತ್ತಿದ್ದಾರೆ, ಅದನ್ನು ಸಹಿಸಲು ಆಗುತ್ತಿಲ್ಲ. ಹಿಂದು ವೋಟು ಬ್ಯಾಂಕ್ ಬಗ್ಗೆ ಆತಂಕಗೊಂಡು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.ರಾಮನ ಬೊಂಬೆ ಇಟ್ಟರು ಎಂದು ಯಾರೋ ಹೇಳಿಕೆ ನೀಡಿದ್ದಾರೆ. ಇವೆಲ್ಲ ನಿರಾಶೆಯ ಪ್ರತೀಕಗಳು ಅಷ್ಟೇ. ಎಲ್ಲರಿಗೂ ಒಳಗಿನಿಂದ ರಾಮನ ಬಗ್ಗೆ ಭಕ್ತಿ ಇರುತ್ತದೆ. ಆದರೆ ಬೇರೊಂದು ಪಕ್ಷದ ಕಾಲದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂಬ ನಿರಾಸೆ ಇರಬಹುದು. ಇದಕ್ಕೆಲ್ಲ ತಲೆ ಕೆಡಿಸಬೇಕಾಗಿಲ್ಲ ಎಂದು ಕಾಣಿಯೂರು ಶ್ರೀಗಳು ಹೇಳಿದರು.