ರಾಣಿಬೆನ್ನೂರು: ಈಗಿರುವ ಕ್ರೀಡಾಂಗಣದಲ್ಲಿ ಬಸ್ ನಿಲ್ದಾಣ ಮಾಡುವುದು ಸೂಕ್ತವಾದರೂ ಅದಕ್ಕಿಂತ ಮೊದಲು ಹೊಸ ಜಾಗೆಯಲ್ಲಿ ಸುಸ್ಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಬೇಕು. ನಗರದ ಮುಸಲ್ಮಾನ ಸಮಾಜದ ಖಬರಸ್ಥಾನ ಎದುರಿಗಿರುವ ಜಾಗೆ ಕುರಿತು ಚಿಂತನೆ ಮಾಡಬೇಕು. ಈಗಿರುವ ಕೆಇಬಿ ಗ್ರೀಡ್ ಜಾಗೆಯನ್ನು ಪರಿಶೀಲಿಸಬಹುದು. ನಗರದ ಹೊರವಲಯದಲ್ಲಿ ಯಾವುದಾದರೂ ಸೂಕ್ತ ಜಾಗೆಯಲ್ಲಿ ನಿರ್ಮಿಸುವುದು ಉತ್ತಮ. ಇವು ನಗರದ ನಗರಸಭೆ ಗುಡ್ಡದ ಸ್ಮಾರಕ ಭವನದಲ್ಲಿ ಸೋಮವಾರ ನೂತನ ಬಸ್ ನಿಲ್ದಾಣ ಸ್ಥಳ ಗುರುತಿಸುವಿಕೆ ಕುರಿತು ಕರೆಯಲಾಗಿದ್ದ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾದ ಪ್ರಮುಖ ಅಂಶಗಳು.ಸಭೆಯ ಪ್ರಾರಂಭದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ರಾಣಿಬೆನ್ನೂರು ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರಿಯಾಗಿದ್ದು ಇಲ್ಲಿ ಒಂದು ಹೈಟೆಕ್ ಬಸ್ ನಿಲ್ದಾಣದ ಅವಶ್ಯಕತೆಯಿದೆ. ಒಂದು ವರ್ಷದ ಹಿಂದೆ ಬಸ್ ನಿಲ್ದಾಣ ಸ್ಥಳಾಂತರ ಮಾಡಲು ನಿರ್ಣಯಿಸಲಾಗಿತ್ತು. ಬಸ್ ನಿಲ್ದಾಣ ಹಾಗೂ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗೆ ಪರಿಶೀಲಿಸಲು ಕೆಎಸ್‌ಆರ್‌ಟಿಸಿ ಹಾಗೂ ಒಲಂಪಿಕ್ ಅಸೋಸಿಯೇಶನ್ ಅಧಿಕಾರಿಗಳು ನಗರಕ್ಕೆ ಭೇಟಿ ನೀಡಿದ್ದರು. ಆಗ ಈಗಿರುವ ಕ್ರೀಡಾಂಗಣವನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಿ ಆ ಜಾಗೆಯಲ್ಲಿ ಬಸ್ ನಿಲ್ದಾಣ ನಿರ್ಮಿಸುವುದು ಸೂಕ್ತ ಎಂಬ ಸಲಹೆಯನ್ನು ಅಧಿಕಾರಿಗಳು ನೀಡಿದರು. ಈ ಹಿನ್ನೆಲೆಯಲ್ಲಿ ನಗರದ ವಿವಿಧ ಸಂಘ, ಸಂಸ್ಥೆಗಳು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಸಭೆ ಕರೆಯಲಾಗಿದೆ. ಈಗಿರುವ ಕ್ರೀಡಾಂಗಣದಲ್ಲಿ ಒಳಾಂಗಣ ಮತ್ತು ಹೊರಾಂಗಣ ನಿರ್ಮಿಸಲು ಜಾಗೆ ಸಾಲುವುದಿಲ್ಲ. ಇದು ಬಸ್ ನಿಲ್ದಾಣಕ್ಕೆ ಅನುಕೂಲವಾಗಲಿದೆ. ಆದ್ದರಿಂದ ಸಾರ್ವಜನಿಕರು ಇದರ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ತಿಳಿಸುವಂತೆ ಕೋರಿದರು.ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ.ಪಿ.ಲಿಂಗನಗೌಡ್ರ ಮಾತನಾಡಿ, ನಗರಸಭಾ ಕ್ರೀಡಾಂಗಣವು ನಗರದ ಮಧ್ಯವರ್ತಿ ಸ್ಥಳದಲ್ಲಿದ್ದು ಈ ಜಾಗೆಯಲ್ಲಿ ಬಸ್ ನಿಲ್ದಾಣ ಮಾಡುವುದು ಒಳ್ಳೆಯದು. ಇದರ ಜೊತೆಗೆ ಸುಸಜ್ಜಿತವಾದ ಕ್ರೀಡಾಂಗಣ ಮಾಡಿಕೊಡಬೇಕು ಎಂದರು.ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ನಿಯೋಜಿತ ಬಸ್ ನಿಲ್ದಾಣ ಜಾಗೆಯು ಮಿನಿವಿಧಾನಸೌಧ, ನೆಹರು ಮಾರುಕಟ್ಟೆ, ರಾಷ್ಟ್ರೀಯ ಹೆದ್ದಾರಿ, ಕೋರ್ಟ್, ರೈಲ್ವೆ ಸ್ಟೇಷನ್, ನಗರಸಭೆಗೆ ಹತ್ತಿರವಿದೆ. ಹೀಗಾಗಿ ಕ್ರೀಡಾಂಗಣದ ಜಾಗೆಯಲ್ಲಿ ಬಸ್ ನಿಲ್ದಾಣ ಮಾಡುವುದು ಸೂಕ್ತ ಎಂದರು. ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಾ.ಎಸ್.ಎಲ್. ಪವಾರ ಮಾತನಾಡಿ, ಬ್ರಿಟಿಷರ ಕಾಲದಿಂದಲೂ ಈಗಿರುವ ಕ್ರೀಡಾಂಗಣದ ಜಾಗೆಯನ್ನು ಕ್ರೀಡಾ ಉದ್ದೇಶಕ್ಕೆ ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಉದಯೋನ್ಮುಖ ಕ್ರೀಡಾಪಟುಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಕ್ರೀಡಾಂಗಣ ನಿರ್ಮಿಸಲಾಗಿದೆ. ಮೇಲಾಗಿ ಇದಕ್ಕೆ ಹೊಂದಿಕೊಂಡಂತೆ ನಗರಸಭಾ ಪ್ರೌಢಶಾಲೆಯಿದ್ದು ಅದನ್ನು ಹಾಗೂ ಕ್ರೀಡಾಂಗಣವನ್ನು ಬಸ್ ನಿಲ್ದಾಣಕ್ಕಾಗಿ ಅದನ್ನು ಸ್ಥಳಾಂತರಿಸುವುದು ಸರಿಯಲ್ಲ. ನಗರದ ಹೊರವಲಯದ ಯಾವುದಾದರೂ ಸೂಕ್ತ ಜಾಗೆಯಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದರು. ನಗರಸಭಾ ಪ್ರೌಢಶಾಲೆಯ ನಿವೃತ್ತ ಸಿಬ್ಬಂದಿ ಈಶ್ವರ ಹಾವನೂರ ಮಾತನಾಡಿ, ಬಸ್ ನಿಲ್ದಾಣ ನಿರ್ಮಿಸಲು ಕ್ರೀಡಾಂಗಣ ಸ್ಥಳಾಂತರ ಮಾಡಬಾರದು. ಬೇಕಾದರೆ ನಗರದ ಮಧ್ಯವರ್ತಿ ಸ್ಥಳದಲ್ಲಿಯೇ ಇರುವ ಮುಸಲ್ಮಾನ ಸಮಾಜದ ಖಬರಸ್ಥಾನ ಎದುರಿಗಿರುವ ಜಾಗೆ ಕುರಿತು ಚಿಂತನೆ ಮಾಡಬೇಕು ಎಂದರು.ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ನಗಸರಭೆ ಕ್ರೀಡಾಂಗಣ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳಿಗೆ ಬೇಕು. ನಗರದ ಹಲಗೇರಿ ರಸ್ತೆಯಲ್ಲಿರುವ ಕೆಇಬಿ ಗ್ರೀಡ್ ಜಾಗೆಯಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕು. ಮೊದಲು ಕ್ರೀಡಾಂಗಣ ಉದ್ಘಾಟನೆ ಮಾಡಿ ನಂತರ ಬಸ್ ನಿಲ್ದಾಣ ಮಾಡೋಣ ಎಂದರು.ರಾಣಿಬೆನ್ನೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಹಾವೇಮುಲ ಅಧ್ಯಕ್ಷ ಮಂಜನಗೌಡ ಪಾಟೀಲ, ರುಕ್ಮಿಣಿ ಸಾವಕಾರ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಸುಧೀರ ಕುರವತ್ತಿ ವೇದಿಕೆಯಲ್ಲಿದ್ದರು. ನಗರಸಭಾ ಮಾಜಿ ಸದಸ್ಯ ಪ್ರಕಾಶ ಪೂಜಾರ, ರೈತ ಮುಖಂಡ ಹನುಮಂತಪ್ಪ ಕಬ್ಬಾರ, ವರ್ತಕ ಜಿ.ಜಿ. ಹೊಟ್ಟಿಗೌಡ್ರ, ಕನ್ನಡಪರ ಹೋರಾಟಗಾರ ಗಣೇಶ ಗೋಣಿಬಸಮ್ಮನವರ ಮತ್ತಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.