ಭಾರತದ ಯುವಶಕ್ತಿಗೆ ಜಗತ್ತಿನಲ್ಲಿ ವಿಪುಲ ಅವಕಾಶ: ಜೋಶಿ

| Published : Aug 11 2025, 12:31 AM IST

ಸಾರಾಂಶ

ಮಹಿಳೆಯರು ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ಕೆಲಸ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಅದರಲ್ಲೂ ಎಂಬ್ರಾಯ್ಡಿಂಗ್‌ನಲ್ಲಿ ಬಹ‍ಳಷ್ಟು ಅವಕಾಶಗಳಿದ್ದು, ಅವುಗಳನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು.

ಹುಬ್ಬಳ್ಳಿ: ಜಗತ್ತಿನಲ್ಲಿ ದುಡಿಯವ ವರ್ಗ ಕ್ಷಿಣಿಸಿದೆ. ಆದರೆ, ಭಾರತದಲ್ಲಿ ಶೇ. 65ರಷ್ಟು ಜನ ದುಡಿಯುವ ತಾಕತ್ತು ಹೊಂದಿದ್ದು, ಮುಂಬರುವ ದಿನಗಳಲ್ಲಿ ಭಾರತಕ್ಕೆ ದೊಡ್ಡ ಅವಕಾಶ ತೆರೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿನ ಕೇಂದ್ರ ಸಚಿವರ ಕಚೇರಿ ಸಭಾಭವನದಲ್ಲಿ ಭಾನುವಾರ ನಡೆದ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ಕೆಲಸ ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಅದರಲ್ಲೂ ಎಂಬ್ರಾಯ್ಡಿಂಗ್‌ನಲ್ಲಿ ಬಹ‍ಳಷ್ಟು ಅವಕಾಶಗಳಿದ್ದು, ಅವುಗಳನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜಗತ್ತಿನಲ್ಲಿ ಬೇಡಿಕೆ: ಟೆಕ್ಸ್‌ಟೈಲ್ಸ್‌ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಶಿಗ್ಗಾಂವಿ ಬಳಿ ಟೆಕ್ಸ್‌ಟೈಲ್ಸ್ ಪಾರ್ಕ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಅದರಂತೆ ಕೇಂದ್ರ ಸರ್ಕಾರದಿಂದ ಕಲಬುರಗಿಯಲ್ಲಿ ಮೆಗಾ ಟೆಕ್ಸ್‌ಟೈಲ್ಸ್ ಪಾರ್ಕ್‌ ನಿರ್ಮಾಣವಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ದೊರೆಕಿಸುವ ಉದ್ದೇಶದಿಂದ ಡ್ರೋನ್ ತರಬೇತಿ ಸಹ ನೀಡಲು ಉದ್ದೇಶಿಸಲಾಗಿದೆ. ಆ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಮತ್ತಷ್ಟು ಒತ್ತು ನೀಡುತ್ತಿದ್ದು, ಅವುಗಳನ್ನು ಸದುಪಯೋಗ ಪಡೆದು ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಬೇಕು ಎಂದರು.

ಗ್ರಾಮ ವಿಕಾಸ ಸೊಸೈಟಿ ಹಾಗೂ ವಿವಿಧ ಕಂಪನಿಗಳ ಸಹಯೋಗದಲ್ಲಿ ಮಹಿಳೆಯರಿಗೆ ವೃತ್ತಿಪರ ತರಬೇತಿ ಒದಗಿಸಲು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 14 ಕೇಂದ್ರಗಳನ್ನು ತೆರೆಯಲಾಗಿತ್ತು. ಇಲ್ಲಿ 11,040 ಮಹಿಳೆಯರು ತರಬೇತಿ ಪಡೆದಿದ್ದು, ಇದರಲ್ಲಿ 7,522 ಮಹಿಳೆಯರಿಗೆ ಉದ್ಯೋಗವಕಾಶ ದೊರೆತಿದೆ. ತರಬೇತಿ ಪಡೆದ ಮಹಿಳೆಯರಿಂದ ಸಿದ್ಧಪಡಿಸಿದ 33,120 ಉಡುಪುಗಳನ್ನು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗಿದೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಮಹಿಳೆ ಆರ್ಥಿಕವಾಗಿ ಸಬಲೀಕರಣವಾದರೆ ಇಡೀ ಮನೆ ಸಬಲಗೊಳ್ಳುತ್ತದೆ. ಹೀಗಾಗಿ ಮಹಿಳೆಯರಿಗೆ ವಿಶೇಷ ಜವಾಬ್ದಾರಿಯನ್ನು ಸಮಾಜ ನೀಡಿದೆ. ಅವಳ ಸ್ವಾವಲಂಬಿ ಬದುಕಿಗೆ ಇಂತಹ ಯೋಜನೆ ಪೂರಕವಾಗಿದೆ. ತಾವೇ ಉದ್ಯೋಗಿಯಾಗದೇ ಉದ್ಯೋಗದಾತರಾಗಬೇಕು ಎಂದರು.

ಮೇಯರ್ ಜ್ಯೋತಿ ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿಯಡಿ 378 ಮಹಿಳಾ ಅಭ್ಯರ್ಥಿಗಳಿಗೆ ಉಚಿತ ಹೊಲಿಗೆ ಯಂತ್ರ ಮತ್ತು ಪ್ರಮಾಣಪತ್ರ ವಿತರಿಸಿದರು.

ಕಾರ್ಯಕ್ರಮದಲ್ಲಿ ಉಪಮೇಯರ್ ಸಂತೋಷ ಚವ್ಹಾಣ, ಈಶ್ವರಗೌಡ ಪಾಟೀಲ, ಅಸ್ಮಿತಾ ಇದ್ದರು.