ಸಾರಾಂಶ
ಹಾವೇರಿ: ರಾಜ್ಯದಲ್ಲಿ ಕೆಆರ್‌ಎಸ್ ಪಕ್ಷ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಕನಸು ಹೊಂದಿದೆ. ಈ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿದ್ದು ಸಾಮಾಜಿಕ ಮತ್ತು ಜನಪರ ಕಳಕಳಿ ಇರುವ ಪ್ರಾಮಾಣಿಕ ಹೊಸ ಪಕ್ಷಗಳ ಅವಶ್ಯಕತೆ ರಾಜ್ಯದಲ್ಲಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್. ಆರ್. ಹಿರೇಮಠ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರುದ್ಯೋಗ, ಬಡತನ, ಅಸಮಾನತೆ, ಅಸ್ಪೃಶ್ಯತೆ ನಿವಾರಣೆ ಮಾಡುವ ಮೂಲಕ ರಾಷ್ಟ್ರವನ್ನು ಕಟ್ಟಬೇಕಿದ್ದ ರಾಜಕೀಯ ಪಕ್ಷಗಳು ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ನೈತಿಕತೆಯನ್ನು ಕಳೆದುಕೊಂಡಿವೆ. ಹಣಬಲ ಹಾಗೂ ತೋಳುಬಲ ಇದ್ದವರು ಇಂದು ರಾಜಕೀಯ ಕ್ಷೇತ್ರವನ್ನು ಆಕ್ರಮಿಸಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಧೈರ್ಯದಿಂದ ಒಂದು ಹೊಸ ಪಕ್ಷವನ್ನು ಕಟ್ಟಿ, ನ್ಯಾಯ ಮತ್ತು ಸತ್ಯದ ಪರವಾಗಿ ರವಿ ಕೃಷ್ಣಾರೆಡ್ಡಿ ಕೆಲಸ ಮಾಡುತ್ತಿದ್ದಾರೆ ಎಂದರು. ರಾಜ್ಯದಲ್ಲಿ ನಿರುದ್ಯೋಗ, ಅಸಮಾನತೆ, ಭ್ರಷ್ಟಾಚಾರ, ದುರಾಡಳಿತದಂತಹ ಗಂಭೀರ ಸಮಸ್ಯೆಗಳಿದ್ದು ಇವುಗಳನ್ನು ಹೋಗಲಾಡಿಸಿ ಒಂದು ಹೊಸ ಸಮಾಜವನ್ನು ಕಟ್ಟಬೇಕಾಗಿದೆ. ಅದು ಕೇವಲ ಒಬ್ಬರಿಂದ ಸಾಧ್ಯವಿಲ್ಲ, ಜನರು ಅದಕ್ಕೆ ಕೈಜೋಡಿಸಬೇಕು. ಸಮಾಜ ಪರಿವರ್ತನಾ ಸಮುದಾಯ ತುಂಗಭದ್ರ ಮಾಲಿನ್ಯ ಮತ್ತು ಇತರೆ ಅಕ್ರಮಗಳ ವಿರುದ್ಧ ಯಾವ ರೀತಿ ಹೋರಾಟ ಮಾಡಿದೆಯೋ ಅದೇ ರೀತಿ ಜನಕೇಂದ್ರಿತವಾದಂತ ಕೆಲಸವನ್ನು ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮಾಡುತ್ತಿದೆ. ಮುಂಬರುವ ಶಿಗ್ಗಾಂವಿ ಉಪಚುನಾವಣೆಯಲ್ಲಿ ಸ್ಪರ್ಧಿಸಲಿರುವ ರವಿ ಕೃಷ್ಣಾರೆಡ್ಡಿ ಅವರಿಗೆ ನಮ್ಮ ಬೆಂಬಲವನ್ನು ಘೋಷಿಸಿದ್ದು, ಜನರು ಕೂಡ ಅವರನ್ನು ಬೆಂಬಲಿಸಬೇಕು ಎಂದರು. ರಾಣಿಬೆನ್ನೂರಿನ ವೈದ್ಯ ಡಾ.ಎಸ್.ಎಲ್. ಪವಾರ ಮಾತನಾಡಿ, ಇಂದು ನಾಡಿಗೆ ರವಿ ಕೃಷ್ಣಾರೆಡ್ಡಿ ಅವರಂತಹ ನಾಯಕರ ಅವಶ್ಯಕತೆ ಬಹಳ ಇದ್ದು, ಅವರು ನಮ್ಮ ಜಿಲ್ಲೆಗೆ ಬಂದು ಸ್ಪರ್ಧಿಸುತ್ತಿರುವುದು ಬಹಳ ಆಶಾದಾಯಕ ಬೆಳವಣಿಗೆ. ಇಂತಹ ಸಂದರ್ಭದಲ್ಲಿ ನಾವು ಅವರಿಗೆ ಬೆಂಬಲಿಸುವುದು ಅಗತ್ಯವಾಗಿದೆ ಹಾಗೆಯೇ ಶಿಗ್ಗಾಂವಿಯ ಜನರು ಸಹ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ, ಸಿ.ಎನ್. ದೀಪಕ್, ಅಮರನಾಥ ಬೂತೆ, ಎಂ.ಸಿ. ಹಾವೇರಿ, ಚರಣರಾಜ ರೊಡ್ಡನವರ ಇತರರು ಇದ್ದರು. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ: ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ಭೂಮಿ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ರೈತರ ಜಮೀನುಗಳನ್ನು ಕಿತ್ತುಕೊಂಡು ಅವರಿಗೆ ಕೊಡುತ್ತಾರೆ ಅಂದರೆ, ರೈತರ ಪರ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಹಿಂದೆ ಯಡಿಯೂರಪ್ಪನವರು ಭೂಮಿ ನೀಡಲು ಮುಂದಾದಾಗ ವಿಪಕ್ಷದಲ್ಲಿದ್ದ ಸಿದ್ದರಾಮಯ್ಯ, ಎಚ್.ಕೆ.ಪಾಟೀಲ ವಿರೋಧ ಮಾಡಿದ್ದರು. ಇದೀಗ ಅವರೇ ಅಧಿಕಾರದಲ್ಲಿದ್ದುಕೊಂಡು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಭೂಮಿ ನೀಡಲು ಮುಂದಾಗಿದ್ದಾರೆ. ಇಂತಹ ಕೀಳುಮಟ್ಟಕ್ಕೆ ಇಳಿದಿರುವ ಸರ್ಕಾರಕ್ಕೆ ನಾಚಿಕೆ ಇಲ್ಲದಾಗಿದೆ ಎಂದು ಸರ್ಕಾರದ ವಿರುದ್ಧ ಎಸ್.ಆರ್. ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.