ಎಐ ಪರಿಣಾಮಗಳ ಅಧ್ಯಯನದ ಅಗತ್ಯತೆಯಿದೆ: ಶಾಸಕ ದರ್ಶನ್‌ ಧ್ರುವನಾರಾಯಣ

| Published : Aug 31 2025, 01:07 AM IST

ಸಾರಾಂಶ

ಪ್ರತಿನಿಧಿ ಪತ್ರಿಕೆ ವರದಿಗಾರ ಪ್ರತಾಪ್ ಕೋಡಿನರಸೀಪುರ ಅವರಿಗೆ 2024ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ನಂಜನಗೂಡು

ಬದಲಾದ ಕಾಲಘಟ್ಟದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಹಲವು ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಗಳಾಗಿದ್ದು, ಪತ್ರಿಕೋದ್ಯಮದಲ್ಲಿಯೂ ಎಐ ಆಧಾರಿತ ಚಟುವಟಿಕೆಗಳು ನಡೆಯುತ್ತಿದ್ದು, ಇದರಿಂದ ಸಮಾಜದ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಬೇಕಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ಪಟ್ಟಣದ ಶ್ರಾವಣ ಕಲ್ಯಾಣ ಮಂಟಪದಲ್ಲಿ ಶನಿವಾರ ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಮತ್ತು ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಎಐ ಬಳಕೆಯಿಂದಾಗಿ ಕೆಲಸ ಕಾರ್ಯಗಳು ತ್ವರಿತವಾಗುತ್ತಿದ್ದರೂ ಸಹಾ ಭವಿಷ್ಯದಲ್ಲಿ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕಿದೆ ಎಂದರು.

ಮೈಸೂರು ಜಿಲ್ಲೆಯಲ್ಲಿನ ಪತ್ರಿಕೋದ್ಯಮದ ಬಗ್ಗೆ ಸಮಾಜದಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಚುನಾಯಿತಯ ಜನಪ್ರತಿನಿಧಿಯಾಗಿ ನಾನು ಸಮರ್ಥವಾಗಿ ಕರ್ತವ್ಯ ನಿರ್ವಹಿಸಲು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮಾಧ್ಯಮದಲ್ಲಿನ ವರದಿಗಳು ನೆರವಾಗಿವೆ. ಇನ್ನು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರಿಗೆ ನಿವೇಶನ ಒದಗಿಸುವ ಸಂಬಂಧ ತಹಸೀಲ್ದಾರ್‌ ಜೊತೆ ಸಭೆ ನಡೆಸಿ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ನೆರವು ಒದಗಿಸಲಾಗುವುದು, ಇನ್ನು ವಿಶೇಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ರಾಮೀಣ ಪತ್ರಕರ್ತರ ಹಿತಕ್ಕೆ ನೆರವಾಗಿದ್ದು, ಉಚಿತ ಬಸ್ ಪಾಸ್ ಸೇರಿದಂತೆ ಹಲವು ಸವಲತ್ತುಗಳನ್ನು ಒದಗಿಸಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ದಕ್ಷಿಣ ಕಾಶಿ ಎಂಬ ಹಿರಿಮೆಯ ನಂಜನಗೂಡಿನಲ್ಲಿ ತಿರುಮಲಾಂಬ ಮೊದಲ ಮಹಿಳಾ ಪತ್ರಕರ್ತೆಯಾಗಿ ಗುರುತಿಸಿಕೊಂಡಿದ್ದರು, ಇದು ಈ ನೆಲದ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ. ಸಮಾಜದಲ್ಲಿ ಪತ್ರಕರ್ತರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ಸಮಾಜದ ಪ್ರಗತಿಗೆ ನೆರವಾಗಬೇಕಿದೆ, ಸರ್ಕಾರ ಮತ್ತು ಸಮಾಜದ ಜನರ ನಡುವೆ ಸೇತುವೆಯಾಗಿ ಪತ್ರಕರ್ತರು ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.

ಪ್ರತಿನಿಧಿ ಪತ್ರಿಕೆ ವರದಿಗಾರ ಪ್ರತಾಪ್ ಕೋಡಿನರಸೀಪುರ ಅವರಿಗೆ 2024ನೇ ಸಾಲಿನ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹುಲ್ಲಹಳ್ಳಿ ಮೋಹನ್, ಮಾಜಿ ಅದ್ಯಕ್ಷ ಸಿ.ಕೆ. ಮಹೇಂದ್ರ, ನಗರಸಭಾಧ್ಯಕ್ಷ ಶ್ರೀಕಂಠಸ್ವಾಮಿ, ಜೆಎಸ್ಎಸ್ ಮಹಾ ವಿದ್ಯಾಪೀಠದ ತೋಟಗಾರಿಕೆ ವಿಭಾಗದ ನಿರ್ದೇಶಕ ಎನ್. ಎಂ. ಶಿವಶಂಕರಪ್ಪ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಡಿ. ರಂಗಸ್ವಾಮಿ, ಉಪಾಧ್ಯಕ್ಷ ಜಿ.ಎಂ. ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಎನ್.ಪಿ. ದೀಪಕ್ ಪ್ರಸಾದ್, ಸಹ ಕಾರ್ಯದರ್ಶಿ ಟಿ.ಕೆ. ಬಸವರಾಜು, ಖಜಾಂಚಿ ಭಾಗ್ಯರಾಜ್, ಕಾರ್ಯಕಾರಿಣಿ ಸದಸ್ಯರಾದ ಮಧು, ಕೆಂಪೇಗೌಡ, ಹುಲ್ಲಹಳ್ಳಿ ಶ್ರೀನಿವಾಸ್, ಎಂ.ಪ್ರಕಾಶ್, ಹೆಡಿಯಾಲ ಮಹದೇವಸ್ವಾಮಿ, ಕೃಷ್ಣಪ್ಪ ಗೌಡ, ಪತ್ರಕರ್ತರಾದ ಮಹದೇವ ಪ್ರಸಾದ್, ಚಿನ್ನಸ್ವಾಮಿ, ಗಂಗಾಧರ್, ಸತ್ಯನಾರಾಯಣ, ಮಹದೇವಸ್ವಾಮಿ, ಚಂದ್ರಶೇಖರ್, ರಾಘವೇಂದ್ರ, ಬಸವರಾಜು, ನಂಜುಂಡ ನಾಯಕ, ಸೇರಿದಂತೆ ಪತ್ರಕರ್ತರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.