ಸಾರಾಂಶ
ಕಾಲುಬಾಯಿ ರೋಗ ಲಸಿಕಾ ಅಭಿಯಾನ ನ. 3ರಿಂದ ಪ್ರಾರಂಭವಾಗಿದ್ದು, ಡಿ. 2ರ ವರೆಗೆ ಒಂದು ತಿಂಗಳು ನಡೆಯಲಿದೆ. ಆದರೆ ಸಿಬ್ಬಂದಿ ಕೊರತೆಯಿಂದ ಇದರ ಸಫಲತೆಯ ಬಗ್ಗೆಯೇ ಸಂಶಯ ವ್ಯಕ್ತವಾಗುತ್ತಿದೆ.
ಶಿವಕುಮಾರ ಕುಷ್ಟಗಿ
ಗದಗ: ಕೃಷಿ ಪ್ರಧಾನವಾದ ಗದಗ ಜಿಲ್ಲೆಯಲ್ಲಿ ಕೃಷಿ ಪೂರಕ ಚಟುವಟಿಕೆಗಳ ಆಧಾರಸ್ತಂಭಗಳಾದ ಜಾನುವಾರುಗಳ ಆರೈಕೆ ಮಾಡುವ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯೇ ಸಿಬ್ಬಂದಿ ಕೊರತೆಯಿಂದ ನರಳುತ್ತಿದ್ದು, ಇನ್ನು ಲಕ್ಷಾಂತರ ಸಂಖ್ಯೆಯಲ್ಲಿರುವ ಜಾನುವಾರುಗಳನ್ನು ಆರೈಕೆ ಮಾಡುವುದು ಕಷ್ಟಸಾಧ್ಯವಾಗಿದೆ.ಜಿಲ್ಲಾದ್ಯಂತ ಪ್ರಸಕ್ತ ಸಾಲಿನ ರಾಷ್ಟ್ರೀಯ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 8ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ನ. 3ರಿಂದ ಪ್ರಾರಂಭವಾಗಿದ್ದು, ಡಿ. 2ರ ವರೆಗೆ ಒಂದು ತಿಂಗಳು ನಡೆಯಲಿದೆ. ಆದರೆ ಸಿಬ್ಬಂದಿ ಕೊರತೆಯಿಂದ ಇದರ ಸಫಲತೆಯ ಬಗ್ಗೆಯೇ ಸಂಶಯ ವ್ಯಕ್ತವಾಗುತ್ತಿದೆ. 268 ಹುದ್ದೆಗಳು ಖಾಲಿ: ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ 11 ಹೋಬಳಿ ಮಟ್ಟದ ಪಶು ಆಸ್ಪತ್ರೆಗಳು, 62 ಪಶು ಚಿಕಿತ್ಸಾಲಯ, 8 ಪ್ರಾಥಮಿಕ ಪಶು ಚಿಕಿತ್ಸಾಲಯ ಕೇಂದ್ರಗಳು, 5 ಸಂಚಾರಿ ಚಿಕಿತ್ಸಾಲಯಗಳು ಒಂದು ಪಾಲಿಕ್ಲಿನಿಕ್ ಹಾಗೂ ಉಪನಿರ್ದೇಶಕರ ಕಚೇರಿದಂತೆ ಸೇರಿದಂತೆ ಒಟ್ಟು 88 ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಗೆ 384 ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ ಕೇವಲ 117 ಹುದ್ದೆ ಮಾತ್ರ ಭರ್ತಿ ಇವೆ. ಇನ್ನುಳಿದ 268 ಹುದ್ದೆಗಳು ಖಾಲಿ ಉಳಿದಿವೆ. ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಶೇ 65ಕ್ಕಿಂತಲೂ ಹೆಚ್ಚಿನ ಹುದ್ದೆಗಳ ಖಾಲಿ ಇರುವುದು ಜಿಲ್ಲೆಯ ಪಶು ಸಂಪತ್ತಿಗೆ ಕುತ್ತಾಗಿ ಪರಿಣಮಿಸುತ್ತಿದೆ.ಜಾನುವಾರುಗಳ ವಿವರ: ಜಿಲ್ಲೆಯಲ್ಲಿ 192669 ದನ, ಎಮ್ಮೆಗಳು, 593619 ಕುರಿ ಮತ್ತು ಆಡುಗಳು, 10039 ಹಂದಿಗಳು ಸೇರಿದಂತೆ ಒಟ್ಟು 796327 ಜಾನುವಾರುಗಳಿವೆ, 381664 ಕೋಳಿಗಳಿವೆ. ಇದರೊಟ್ಟಿಗೆ ಬೇರೆ ಬೇರೆ ಜಿಲ್ಲೆಗಳಿಂದ ನಿತ್ಯವೂ ಕುರಿ, ಆಡುಗಳನ್ನು ಮೇಯಿಸಲು ಸಾವಿರಾರು ಕುರಿಗಾಹಿಗಳು ಬರುವ ಹಿನ್ನೆಲೆ ಸರಾಸರಿ 1 ಲಕ್ಷಕ್ಕೂ ಅಧಿಕ ಕುರಿ ಮತ್ತು ಆಡುಗಳು ಜಿಲ್ಲೆಯಲ್ಲಿ ಇರುವುದು ಸಾಮಾನ್ಯ. ಇಷ್ಟೊಂದು ಸಂಖ್ಯೆಯ ಜಾನುವಾರುಗಳ ಆರೈಕೆ ಮತ್ತು ಲಸಿಕಾ ಕಾರ್ಯಕ್ಕೆ ತೊಂದರೆಯಂತೂ ಖಂಡಿತವಾಗಿ ಆಗುತ್ತಿದೆ.ಸಿಬ್ಬಂದಿ ನೇಮಿಸಲಿ: ರೈತರು ಜಾನುವಾರುಗಳ ಬಳಕೆಗಿಂತ ಟ್ರ್ಯಾಕ್ಟರ್ ಬಳಕೆ ಹೆಚ್ಚಳ ಮಾಡಿರುವುದರಿಂದ ಎತ್ತುಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಎಮ್ಮೆ, ಆಕಳುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಜಾನುವಾರುಗಳಿಗೆ ಎದುರಾಗುವ ಆರೋಗ್ಯ ಸಮಸ್ಯೆ ಸೂಕ್ತ ಚಿಕಿತ್ಸೆ ನೀಡಲು ಸಿಬ್ಬಂದಿ ಇಲ್ಲ. ಸರ್ಕಾರ ಕೂಡಲೇ ಸಿಬ್ಬಂದಿಯನ್ನು ನೇಮಕ ಮಾಡಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಇರುವ ಸಿಬ್ಬಂದಿ ಕೊರತೆಯನ್ನು ನೀಗಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ರೈತ ಮುಖಂಡ ಅಣ್ಣಪ್ಪ ಮಾನೆ ತಿಳಿಸಿದರು.
ಯೋಜನೆ: ನಮ್ಮ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಆದರೆ ಕಾಲುಬಾಯಿ ಬೇನೆ ಲಸಿಕೆಗೆ ಯಾವುದೇ ತೊಂದರೆಯಾಗದ ರೀತಿ ಇರುವ ಸಿಬ್ಬಂದಿ ಹಾಗೂ ಇನ್ನಿತರರ ಸಹಕಾರದಿಂದ ಲಸಿಕಾ ಕಾರ್ಯವನ್ನು ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಪಶುಪಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಚ್.ಬಿ. ಹುಲಗಣ್ಣವರ ತಿಳಿಸಿದರು.;Resize=(128,128))
;Resize=(128,128))
;Resize=(128,128))