ಸಾರಾಂಶ
ನಿಮ್ಹಾನ್ಸ್‌ನಲ್ಲಿ ನಡೆಯುತ್ತಿರುವ 3 ದಿನಗಳ ‘ನೊವಲ್ಕಾನ್ 2024 – ನ್ಯೂರೋ ಟೆಕ್ಕಾನ್’ ಸಮ್ಮೇಳನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಬೆಂಗಳೂರು
ವೈದ್ಯಕೀಯ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಮೆದುಳು ಸಂಬಂಧಿಸಿದ ಸಮಸ್ಯೆಗಳಿಗೆ ನಂಬಲು ಅಸಾಧ್ಯ ಎನಿಸುವ ಚಿಕಿತ್ಸೆ, ಪರಿಹಾರ ಕ್ರಮಗಳಿದ್ದು ರೋಗಿಗಳ ಜೀವನದಲ್ಲಿ ಸಾಕಷ್ಟು ಸುಧಾರಣೆ ಕಾಣುತ್ತದೆ ಎಂದು ಜಪಾನ್‌ನ ಖ್ಯಾತ ನರರೋಗ ತಜ್ಞ ಡಾ.ತಕಯೋಮಿ ತೈರಾ ಹೇಳಿದರು.ಮೆದುಳು ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮ್ಹಾನ್ಸ್‌ನಲ್ಲಿ ನಡೆಯುತ್ತಿರುವ 3 ದಿನಗಳ ‘ನೊವಲ್ಕಾನ್ 2024 – ನ್ಯೂರೋ ಟೆಕ್ಕಾನ್’ ಸಮ್ಮೇಳನದಲ್ಲಿ ಶನಿವಾರ ನರರೋಗ ತಜ್ಞ ಡಾ. ಶರಣ್ ಶ್ರೀನಿವಾಸ್ ಮತ್ತು ಡಾ.ಪ್ರತಿಭಾ ಶರಣ್ ಅವರ ‘ರೀಬೂಟಿಂಗ್ ದಿ ಬ್ರೈನ್’ ವೈದ್ಯಕೀಯ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ತಂತ್ರಜ್ಞಾನದಲ್ಲಿ ಅದ್ಭುತವಾದ ಪ್ರಗತಿಯಾಗಿದೆ. ತಲೆ ಬುರುಡೆಗೆ ರಂಧ್ರ ಕೊರೆಯದೆಯೇ ಮೆದುಳಿಗೆ ಸಂಬಂಧಿಸಿದ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮಾಡಬಹುದು. ನಿಷ್ಕ್ರೀಯವಾಗುವ ಮೆದುಳನ್ನು ಸೂಕ್ತ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಮೂಲಕ ಪುನಶ್ಚೇತನಗೊಳಿಸಬಹುದು. ಇಂತಹ ಹಲವಾರು ಯಶೋಗಾಥೆಗಳಿವೆ. ಪಾರ್ಶ್ವವಾಯು, ಪಾರ್ಕಿನ್‌ಸನ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ನುಡಿದರು.ಹುಟ್ಟಿನಿಂದ ಅಥವಾ ಅಪಘಾತದಿಂದ ಮೆದುಳು, ನರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಉಂಟಾದಾಗ ಜನರು ನಿರ್ಲಕ್ಷ್ಯ ತೋರದೆ ನಿಮ್ಹಾನ್ಸ್‌ನಂತಹ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಪ್ರಯತ್ನಿಸಬೇಕು. ಅತ್ಯದ್ಭುತ ಚಿಕಿತ್ಸಾ ಕ್ರಮಗಳಿಂದ ರೋಗಿಗಳು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಡಾ. ತೈರಾ ತಿಳಿಸಿದರು.
ಲೇಖಕ ಡಾ. ಶರಣ್ ಶ್ರೀನಿವಾಸ್ ಮಾತನಾಡಿ, 15 ವರ್ಷಗಳ ಅಧ್ಯಯನ, ಅನುಭವ ಆಧರಿಸಿ ಪುಸ್ತಕ ರಚಿಸಲಾಗಿದೆ. ಆರೋಗ್ಯ ವೃತ್ತಿಪರರು, ವಿದ್ಯಾರ್ಥಿಗಳು, ಮಾನವ ಅಪಘಾತದ ನಂತರ ನೆನಪಿನ ಶಕ್ತಿ ನಷ್ಟವಾಗಿ, ಕೆಲವೊಮ್ಮೆ ಪಾರ್ಶ್ವವಾಯುಗೆ ತುತ್ತಾದರೆ ಏನು ಮಾಡಬೇಕು ಎನ್ನುವುದರತ್ತಲೂ ಪುಸ್ತಕ ಬೆಳಕು ಚೆಲ್ಲುತ್ತದೆ ಎಂದರು. ಕಾರ್ಯಕ್ರಮದಲ್ಲಿ ಡಾ. ವಸಂತಂ ರಾಜಶೇಖರನ್, ಡಾ. ದ್ವಾರಕಾನಾಥ್ ಮತ್ತಿತರರು ಉಪಸ್ಥಿತರಿದ್ದರು.