ಹೊನ್ನಾಳಿಯ ಲಿಂಗಾಪುರದಲ್ಲಿ ಕುಡಿವ ನೀರಿಗೂ ತೊಂದರೆ

| Published : Jan 12 2024, 01:45 AM IST

ಹೊನ್ನಾಳಿಯ ಲಿಂಗಾಪುರದಲ್ಲಿ ಕುಡಿವ ನೀರಿಗೂ ತೊಂದರೆ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ನಾಲೆಯಲ್ಲಿ ಕಳೆದ ತಿಂಗಳಿಂದ ನೀರು ಬಾರದ್ದರಿಂದ ಜನರು, ಜಾನುವಾರುಗಳಿಗೂ ನೀರಿನ ಸಮಸ್ಯೆಯಾಗಿದ್ದು, ಮಹಿಳೆಯರು ಬಟ್ಟೆ ತೊಳೆಯಲು, ಜಾನುವಾರುಗಳಿಗೆ ನೀರು ಕುಡಿಸಲು ಮೂರು ಕಿಲೋಮೀಟರ್ ದೂರದ ತುಂಗಭದ್ರ ನದಿಗೆ ಹೋಗುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ನಿರ್ಲಕ್ಷತನದಿಂದ ಉಂಟಾಗಿರುವ ನೀರಿನ ಸಮಸ್ಯೆಯನ್ನು ತಕ್ಷಣ ಬಗೆಹರಿಸಿದಿದ್ದರೆ ಗ್ರಾಪಂ ಮುಂದೆ ಧರಣಿ ಕೂರಲಾಗುವುದು.

ಗ್ರಾಮ ಪಂಚಾಯಿತಿ ಎದುರು ಖಾಲಿ ಕೊಡ ಹಿಡಿದು ಮಹಿಳೆಯರಿಂದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಲಿಂಗಾಪುರ ಗ್ರಾಮದ ಒಂದನೇ ವಾರ್ಡ್‌ನಲ್ಲಿ ಕಳೆದ ಆರು ತಿಂಗಳಿಂದ ನೀರಿನ ಸಮಸ್ಯೆ ಉಂಟಾಗಿ ಗ್ರಾಪಂಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಉಪಯೋಗವಾಗಿಲ್ಲವೆಂದು ಗ್ರಾಮದ ಮಹಿಳೆಯರು ಖಾಲಿ ಕೊಡ ಹಿಡಿದು ಲಿಂಗಾಪುರ ಗ್ರಾಮ ಪಂಚಾಯಿತಿ ಎದುರು ಕುಡಿಯುವ ನೀರಿಗಾಗಿ ಪ್ರತಿಭಟಿಸಿದರು.

ಲಿಂಗಾಪುರ ಗ್ರಾಮದ ಮುಖ್ಯರಸ್ತೆ, ಎಕೆ ಕಾಲನಿ, ಅಗಸೆ ಬಾಗಿಲು ಮುಖ್ಯರಸ್ತೆ ಆಂಜನೇಯ ದೇವಸ್ಥಾನ ಕೇರಿ, ಧನರಾಜಪ್ಪ ಮನೆಯ ಬೀದಿ ಸೇರಿ ಗ್ರಾಮದ ಹಲವು ಕೇರಿಗಳಲ್ಲಿ ಬೆಳಗಿನಿಂದ ಸಂಜೆವರೆಗೆ ಸಾಲು ಸಾಲು ಕೊಡಗಳ ಇಟ್ಟು ಕಾದರೂ ಎರಡು ಕೊಡ ಕುಡಿಯುವ ನೀರು ಸಿಗುತ್ತಿಲ್ಲ. ಗ್ರಾಮದ ಕೆಲವರು ನಲ್ಲಿಗೆ ಮೋಟಾರ್ ಅಳವಡಿಸಿ ಜಾನುವಾರು ಮೈ ತೊಳೆಸಿ, ಮನೆಯ ಹಿತ್ತಲಿನ ಅಡಕೆ ಗಿಡ ತರಕಾರಿ ಗಿಡಗಳಿಗೆ ನೀರು ಬಿಡುತ್ತಾರೆ. ಮೋಟಾರ್ ಹಾಕುವುದು ನಿಲ್ಲಿಸಿದರೆ ಮಾತ್ರ 1-2 ಕೊಡ ನೀರು ಸಿಗುತ್ತದೆ ಇಲ್ಲದಿದ್ದರೆ ಖಾಲಿ ಕೊಡವೇ ಗತಿ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹಿಳೆಯರು ದೂರಿದರು.

ಗ್ರಾಮದ ರೈತ ಮುಖಂಡ ಧನರಾಜಪ್ಪ ಪಿಡಿಒಗೆ ಮನವಿ ನೀಡಿ ಮಾತನಾಡಿ, ಭದ್ರಾ ನಾಲೆಯಲ್ಲಿ ಕಳೆದ ತಿಂಗಳಿಂದ ನೀರು ಬಾರದ್ದರಿಂದ ಜನರು, ಜಾನುವಾರುಗಳಿಗೂ ನೀರಿನ ಸಮಸ್ಯೆಯಾಗಿದ್ದು, ಮಹಿಳೆಯರು ಬಟ್ಟೆ ತೊಳೆಯಲು, ಜಾನುವಾರುಗಳಿಗೆ ನೀರು ಕುಡಿಸಲು ಮೂರು ಕಿಲೋಮೀಟರ್ ದೂರದ ತುಂಗಭದ್ರ ನದಿಗೆ ಹೋಗುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ನಿರ್ಲಕ್ಷತನದಿಂದ ಉಂಟಾಗಿರುವ ನೀರಿನ ಸಮಸ್ಯೆಯನ್ನು ತಕ್ಷಣ ಬಗೆಹರಿಸಿದಿದ್ದರೆ ಗ್ರಾಪಂ ಮುಂದೆ ಧರಣಿ ಕೂರುವುದಾಗಿ ಎಚ್ಚರಿಸಿದರು.

ಎರಡು ದಿನಗಳಲ್ಲಿ ನೀರಿನ ಸಮಸ್ಯೆ ಇತ್ಯರ್ಥ:

ಗ್ರಾಪಂ ಅಭಿವೃದ್ಧಿ ಅಧಿಕಾರಿ ಪರಮೇಶ್ ಕೊಳ್ಳೂರು ಮಾತನಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಗ್ರಾಮದ ಕೆಳ ಭಾಗದಲ್ಲಿ ನಲ್ಲಿಗಳು ತೆರೆದು ನೀರು ಪೋಲಾಗುತ್ತಿದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಪೋಲಾಗುವ ನೀರು ಬಂದ್ ಮಾಡಿಸಿದರೆ ನೀರು ಮೇಲ್ಭಾಗಕ್ಕೆ ಬರಲಿದೆ. ರೈತರು ಗ್ರಾಮ ಪಂಚಾಯಿತಿಗೆ ಬೀಗ ಹಾಕುವುದರಿಂದ ಸಮಸ್ಯೆ ಬಗೆಹರಿಯಲ್ಲ. ನಿಮ್ಮ ಸಮಸ್ಯೆಗಳು ಏನೇ ಇರಲಿ ಪತ್ರದ ಮೂಲಕ ಕೊಟ್ಟರೆ ಸ್ಥಳೀಯ ಗ್ರಾಪಂ ಸದಸ್ಯರೊಂದಿಗೆ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುತ್ತೇವೆ. ಇನ್ನೆರಡು ದಿನದಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

ಪ್ರತಿಭಟನೆ ವೇಳೆ ಗ್ರಾಮದ ಮಹಿಳೆಯರಾದ ಸಾವಿತ್ರಮ್ಮ, ಮಂಜುಳಾ, ಸರೋಜಮ್ಮ, ಮಲ್ಲಿಕಮ್ಮ ಗ್ರಾಮಸ್ಥರಾದ ನಾಗರಾಜ ವೀರೇಂದ್ರ ಪಾಟೀಲ್ , ಬಾಲಚಂದ್ರ ಉಮೇಶ್ , ರಾಘವೇಂದ್ರ, ಹನುಮಂತಪ್ಪ ಗಣೇಶ ಚಂದ್ರಪ್ಪ ಮತ್ತಿತರರಿದ್ದರು.

ನೀರುಗಂಟಿಯಿಂದ ಉಡಾಫೆ ಉತ್ತರ

ಅಡುಗೆ, ಬಟ್ಟೆ ತೊಳೆಯಲು ,ಸ್ನಾನ ಮಾಡಲೂ ನೀರಿಲ್ಲ. ತೋಟದ ಜಮೀನಿನ ಕೊಳವೆ ಬಾವಿಯಿಂದ ನೀರು ತಂದು ಮಕ್ಕಳಿಗೆ ಅಡುಗೆ ಮಾಡಿ ಶಾಲೆಗೆ ಕಳಿಸಿ ಕೂಲಿ ಮಾಡಲು ಹೋಗುತ್ತೇವೆ. ನೀರುಗಂಟಿಗೆ ಯಾಕಪ್ಪ ನಮ್ಮ ಕೇರಿಯಲ್ಲಿ ನೀರು ಬರುತ್ತಿಲ್ಲ ಎಂದು ಕೇಳಿದರೆ ನಾನೇನ್ ಮಾಡ್ಲಿ ರೀ.. ನೀರ್ ಬಂದ್ರೆ ಹಿಡಿದುಕೊಳ್ಳಿ... ಬರ್ಲಿಲ್ಲ ಅಂದ್ರೆ.... ಗ್ರಾಮ ಪಂಚಾಯಿತಿಗೆ ಹೋಗಿ ಕೇಳ್ರಿ! ಎಂದು ಉಡಾಫೆ ಉತ್ತರ ಕೊಡುತ್ತಾರೆ.

ಪ್ರೇಮಾ, ಗ್ರಾಮದ ಮಹಿಳೆ

------------------