ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರವಿದೆ

| Published : May 03 2025, 12:16 AM IST

ಸಾರಾಂಶ

ಹಿಂದು ಸಂಘಟನೆಯ ಕಾರ್ಯಕರ್ತ ಸುಹಾಸ್‌ ಶೆಟ್ಟಿಯನ್ನು ಬಂಧಿಸುವಂತೆ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು.

ಸುಹಾಸ್‌ ಶೆಟ್ಟಿ ಹತ್ಯೆ । ಆರೋಪಿಗಳ ಬಂಧಿಸಲು ಬಿಜೆಪಿ ಆಗ್ರಹ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಹತ್ಯೆಯನ್ನು ಖಂಡಿಸಿ ಶುಕ್ರವಾರ ಚಿತ್ರದುರ್ಗ ನಗರದಲ್ಲಿ ಬಿಜೆಪಿ ವತಿಯಿಂದ ಓನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆಯನ್ನು ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹತ್ಯೆ ಮಾಡಿದವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಲಾಯಿತು.

ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುತ್ತಾ ಅರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿದ್ದು ಅವರಿಗೆ ರಕ್ಷಣೆ ನೀಡುತ್ತಿದೆ. ರಾಜ್ಯದಲ್ಲಿನ ಸರ್ಕಾರ ಹಿಂದೂಗಳ ವಿರೋಧಿ ಸರ್ಕಾರವಾಗಿದೆ. ಇಲ್ಲಿ ಹಿಂದೂಗಳು ನೆಮ್ಮದಿಯಾಗಿ ಬದುಕನ್ನು ನಡೆಸುವುದು ಇವರ ಆಡಳಿತದಲ್ಲಿ ಕಷ್ಠವಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕರ್ನಾಟಕ ಎನ್ನುವುದು ಆರೋಪಿಗಳ ಸ್ವರ್ಗವಾಗಿದೆ ಇಲ್ಲಿ ಏನೇ ಮಾಡಿದರು ಸಹಾ ಯಾರೂ ಕೇಳುವವರಿಲ್ಲ ಎನ್ನುವಂತಾಗಿದೆ. ರಾಜ್ಯದ ಆಡಳಿತವನ್ನು ನಡೆಸುತ್ತಿರುವ ರಾಜಕೀಯ ಪಕ್ಷದವರು ಸಹ ಇಂತಹ ಕೆಲಸ ಮಾಡುವವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ, ಆರೋಪಿಗಳನ್ನು ಬಂಧಿಸುವಲ್ಲಿ ಪೋಲಿಸರು ಮುಂದೆ ಹೋದರು ಸಹ ಅವರನ್ನು ರಾಜಕೀಯ ವ್ಯಕ್ತಿಗಳು ಹಿಂದಕ್ಕೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್ ಮಾತನಾಡಿ, ರಾಜ್ಯದಲ್ಲಿರುವ ಗೊಂಡಾ ಸರ್ಕಾರ ಹಿಂದೂಗಳನ್ನು ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ. ಸರ್ಕಾರ ಒಂದು ಜನಾಂಗವನ್ನು ಮಾತ್ರ ಓಲೈಕೆ ಮಾಡುವಲ್ಲಿ ಮುಂದಾಗಿದೆ. ಇದರಿಂದ ಆ ಕೋಮಿನ ಜನತೆ ಅರ್ಭಟ ಹೆಚ್ಚಾಗಿದೆ. ಇದನ್ನು ತಡೆಯುವವರಿಲ್ಲ ಎನ್ನುವಂತಾಗಿದೆ ಇದನ್ನು ನಿಲ್ಲಿಸುವವರೆಗೂ ಸಹಾ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಮಾಧ್ಯಮ ವಕ್ತಾರ ಛಲವಾದಿ ತಿಪ್ಪೇಸ್ವಾಮಿ, ಯುವ ಮುಖಂಡ ಹೇರಿಸ್ವಾಮಿ, ನಗರಸಭಾ ಮಾಜಿ ಸದಸ್ಯ ನಾಗರಾಜ್, ಕಿರಣ್, ಯಶವಂತ, ನಂದಿ ನಾಗರಾಜ್, ಚಂದ್ರಶೇಖರ್, ಮಹಾಂತೇಶ್ ಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.