ಸಾರಾಂಶ
ಹುಬ್ಬಳ್ಳಿ:
ಔಷಧೀಯ ಸಂಪತ್ತಿನ ಗಿರಿಧಾಮವಾಗಿರುವ ಕಪ್ಪತಗುಡ್ಡದ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಕಪ್ಪತಗುಡ್ಡ ನಂದಿವೇರಿ ಸಂಸ್ಥಾನಮಠದ ಶಿವಕುಮಾರ ಶ್ರೀ ಕರೆ ನೀಡಿದರು.ಅವರು ಇಲ್ಲಿನ ಬಿವಿಬಿ ಕಾಲೇಜಿನ ಬಯೋಟಿಕ್ ಸಭಾಂಗಣದಲ್ಲಿ ಕಪ್ಪತಗುಡ್ಡ ನಂದಿವೇರಿ ಸಂಸ್ಥಾನಮಠ, ರಾಜ್ಯ ಔಷಧೀಯ ಸಸ್ಯಗಳ ಪ್ರಾಧಿಕಾರ, ಗದಗ ಮತ್ತು ಧಾರವಾಡ ಜಿಲ್ಲಾ ಆಯುಷ್ ಇಲಾಖೆ, ಕೆಎಲ್‌ಇ ತಾಂತ್ರಿಕ ವಿವಿ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ, ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆಎಲ್‌ಇ ಔಷಧ ವಿಜ್ಞಾನ ಮಹಾವಿದ್ಯಾಲಯದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಔಷಧೀಯ ಸಸ್ಯಗಳ ಕಾರ್ಯಾಗಾರದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಪ್ಪತಗುಡ್ಡವನ್ನು ಬಗೆದು ತಿನ್ನುವವರ ಸಂಖ್ಯೆ ಹೆಚ್ಚಿದೆ. ಅದನ್ನು ತಡೆಗಟ್ಟಿ, ಆಯುರ್ವೇದ ಸಸ್ಯ ಸಂಪತ್ತನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಿದೆ. ಕಪ್ಪತಗುಡ್ಡದಲ್ಲಿ 400ಕ್ಕೂ ಹೆಚ್ಚು ಜಾತಿಯ ಔಷಧೀಯ ಸಸ್ಯಗಳಿವೆ. ಅವುಗಳನ್ನು ಉಳಿಸಿ, ಬೆಳೆಸಿ, ಬಳಸಬೇಕು ಎಂದರು.ಕೆಎಲ್‌ಇ ತಾಂತ್ರಿಕ ವಿವಿ ಕುಲಸಚಿವ ಬಸವರಾಜ ಅನಾಮಿ ಮಾತನಾಡಿ, ಬೆಂಕಿ ಅನಾಹುತ, ಗಣಿಗಾರಿಕೆಯಿಂದ ಕ್ರಮೇಣ ಕಪ್ಪತ್ತಗುಡ್ಡದ ಸಸ್ಯ ಸಂಪತ್ತು ನಾಶ ಆಗುತ್ತಿದೆ. ಅದನ್ನು ತಡೆಯಲು ಎಲ್ಲರೂ ಸಂಕಲ್ಪ ಮಾಡೋಣ. ಮನೆಗೊಂದು ಔಷಧ ಗುಣವುಳ್ಳ ಗಿಡ, ಊರಿಗೊಂದು ಔಷಧ ವನ ಬೆಳೆಸಬೇಕು. ಆಯುರ್ವೇದ ಔಷಧಿ ತಡವಾಗಿ ಪರಿಹಾರ ನೀಡಿದರೂ ಆರೋಗ್ಯಕ್ಕೆ ಉತ್ತಮ. ಸುತ್ತಮುತ್ತಲೂ ಸಾಕಷ್ಟು ಔಷಧಿಯ ಗಿಡಗಳಿವೆ. ಅವುಗಳು ಪ್ರಯೋಜನೆ ಪಡೆಯಬೇಕು ಎಂದರು.
ಬಹುಮಾನ ವಿತರಣೆ:ಕಾರ್ಯಾಗಾರದಲ್ಲಿ ಆಯುರ್ವೇದ ಹಾಗೂ ಔಷಧ ಕುರಿತು ಭಿತ್ತಿಪತ್ರ ಪ್ರದರ್ಶನ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಆಯುರ್ವೇದ ವಿಭಾಗದಲ್ಲಿ ನೀಲಾ ಹಿರೇಮಠ (ಪ್ರಥಮ), ಸೃಷ್ಟಿ ನರಗುಂದ (ದ್ವಿತೀಯ), ಕಾವೇರಿ ಗುಗ್ಯಾಳ (ತೃತೀಯ), ಹರ್ಷದಾ ಪಿ (ಸಮಾಧಾನಕರ) ಹಾಗೂ ಔಷಧ ವಿಭಾಗದಲ್ಲಿ ನೇಹಾ ಮಾಳಿ (ಪ್ರಥಮ), ಅಕ್ಷತಾ ಹೆಬ್ಬಳ್ಳಿ (ದ್ವಿತೀಯ), ಚೇತನ್ ಉಪ್ಪಾರ (ತೃತೀಯ), ಶಿವರಾಜ ಸಂಗಣ್ಣವರ (ಸಮಾಧಾನಕರ) ಬಹುಮಾನ ಪಡೆದರು.ಇದೇ ವೇಳೆ ಕಾರ್ಯಾಗಾರದಲ್ಲಿ ಭಾಗವಹಿಸಿದ ಜನರೊಂದಿಗೆ ಸಂವಾದ ನಡೆಯಿತು. ಡಾ. ಜಗನ್ನಾಥ ರಾವ್ ಆರ್, ಡಾ. ನಾಗಭೂಷಣ ಎಂ.ಬಿ, ಡಾ. ಸುಬ್ರಹ್ಮಣ್ಯ ಕುಮಾರ, ಡಾ. ಪತಂಜಲಿ ಶರ್ಮ, ಡಾ. ಪ್ರಶಾಂತ ಎ.ಎಸ್, ಡಾ. ಎಂ.ಎಸ್. ಉಪ್ಪಿನ್, ರಾಜೇಂದ್ರ ಶಿರೋಳ, ರುದ್ರಣ್ಣ ಗುಳಗುಳಿ, ಬಿ.ಎಸ್. ಪಾಟೀಲ ಯತ್ನಳ್ಳಿ, ದೇವರಡ್ಡಿ ಅಗಸನಕೊಪ್ಪ, ಎಂ.ವಿ. ಚಿತ್ತವಾಡಗಿ, ಸಿ.ಸಿ. ಹಿರೇಮಠ ಸೇರಿದಂತೆ ಹಲವರಿದ್ದರು.ರೈತರೊಂದಿಗೆ ಕಂಪನಿಗಳ ಒಡಂಬಡಿಕೆ:
ಕಾರ್ಯಾಗಾರದಲ್ಲಿ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿ ರೈತರಿಗೆ ಮಾಹಿತಿ ನೀಡಿದವು. ಆಯುರ್ವೇದ ಹಾಗೂ ಔಷಧೀಯ ಸಸ್ಯಗಳನ್ನು ಬೆಳೆಯಲು ಹಲವು ರೈತರೊಂದಿಗೆ ಒಡಂಬಡಿಕೆ ಮಾಡಿಕೊಂಡವು. ಒಂದಲಗ ಸಸ್ಯ ಬೆಳೆಯಲು ಗದಗ ರೈತ ಪವಾರ ಜತೆಗೆ ಹಿಮಾಲಯ ಕಂಪನಿ, ಅಶ್ವಗಂಧ ಬೆಳೆಯಲು ಗದಗ ರೈತ ರಾಜೇಂದ್ರ ಶಿರೋಳ ಜತೆಗೆ ಹಿಮಾಲಯ ಕಂಪನಿ ಹಾಗೂ ನ್ಯಾಚುರಲ್ ರೆಮಿಡೀಸ್ ಕಂಪನಿ, ರಸನಾ ಬೆಳೆ ಬೆಳೆಯಲು ಸಂಜಯ ಕೆ.ಆರ್. ಪೇಟೆ ಅವರೊಂದಿಗೆ ಅಮೃತ ನೋನಿ ಕಂಪನಿ ಒಡಂಬಡಿಕೆ ಮಾಡಿಕೊಂಡವು.