ದೇಹಕ್ಕೆ ಸಾವಿದೆ, ಜ್ಞಾನಕ್ಕಿಲ್ಲ; ಸದಾನಂದಸ್ವಾಮಿ

| Published : Nov 11 2024, 11:53 PM IST

ಸಾರಾಂಶ

ಕೊಳ್ಳೇಗಾಲದ ಮೊರಾರ್ಜಿ ಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ಮಾಸಾಚರಣೆ ಕಾರ್ಯಕ್ರಮದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.

ಕೊಳ್ಳೇಗಾಲ: ಮಾನವನ ಈ ದೇಹಕ್ಕೆ ಸಾವಿದೆ. ಆದರೆ ಜ್ಞಾನಕ್ಕೆ ಎಂದಿಗೂ ಸಾವಿಲ್ಲ ಎನ್ನುವುದನ್ನು ಬಸವಾದಿ ಶರಣರು ಹೇಳಿದ್ದಾರೆ. ಕನ್ನಡಕ್ಕೆ ಷಟ್‌ ಶಾಸ್ತ್ರಗಳನ್ನು ಬರೆದವರು ನಿಜಗುಣ ಶಿವಯೋಗಿಗಳು. ಹಲವಾರು ತತ್ವಜ್ಞಾನಿಗಳು ಬಂದು ಹೋಗಿದ್ದಾರೆ, ಆದರೆ ಜ್ಞಾನದ ಸಂಪತ್ತು ಎಂದರೆ ಅದು ನಿಜಗುಣ ಶಿವಯೋಗಿಗಳು ಮಾತ್ರ ಎಂದು ಶಿಕ್ಷಕ ಸದಾನಂದಸ್ವಾಮಿ ಹೇಳಿದರು.

ಮೊರಾರ್ಜಿ ಶಾಲೆಯಲ್ಲಿ ಜೆಎಸ್‌ಬಿ ಪ್ರತಿಷ್ಠಾನ ಆಯೋಜಿಸಿದ್ದ ಕನ್ನಡ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಿಜಗುಣರು ಜ್ಞಾನದ ಸಂಪತ್ತು, ನಿಜಗುಣರು ಕರ್ನಾಟಕದ ದಕ್ಷಿಣ ಭಾಗದಲ್ಲಿ ಚಾಮರಾಜನಗರ ಜಿಲ್ಲೆಯ, ಕೊಳ್ಳೆಗಾಲ ತಾಲೂಕಿನ ಚಿಲಕವಾಡಿ ಗ್ರಾಮದ ಸುತ್ತುಮುತ್ತಿನ ಪ್ರದೇಶಕ್ಕೆ ಸಾಮಂತರಾಗಿದ್ದವರು. ಅವರು ಅಧಿಕಾರದಿಂದ ರಾಜರಾಗಿದ್ದರೂ ಶಿವಭಕ್ತರಾಗಿ, ಜಂಗಮಪ್ರೇಮಿಯಾಗಿ, ಪ್ರಜಾಪ್ರಿಯರೂ ಆಗಿದ್ದರು. ವೇದ, ಉಪನಿಷತ್ತು, ಶಾಸ್ತ್ರ, ಪುರಾಣ, ಇತಿಹಾಸ ಎಲ್ಲವನ್ನೂ ಚೆನ್ನಾಗಿ ಅಭ್ಯಾಸ ಮಾಡಿದ್ದರು. ಅವರೊಬ್ಬ ಪರೋಪಕಾರಿಯಾಗಿದ್ದರು ಎಂದು ಸ್ಮರಿಸಿದರು.

ನಿಜಗುಣ ಶಿವಯೋಗಿ ಕನ್ನಡದಲ್ಲಿ ವಿವೇಕಚಿಂತಾಮಣಿ, ಕೈವಲ್ಯಪದ್ದತಿ, ಪುರಾತನರ ತ್ರಿವಿಧಿ, ಅನುಭವಸಾರ, ಪರಮಾರ್ಥಪ್ರಕಾಶಿಕೆ, ಪರಮಾನುಭವಬೋಧ, ಪರಮಾರ್ಥಗೀತೆ ಎಂಬ ಏಳು ಗ್ರಂಥಗಳನ್ನು ಬರೆದಿದ್ದಾರೆ. ಸಂಸ್ಕೃತದಲ್ಲಿ ಆತ್ಮತರ್ಕಚಿಂತಾಮಣಿ ಮತ್ತು ದರ್ಶನಸಾರ ಎಂಬ ಗ್ರಂಥಗಳನ್ನು ಬರೆದರೆಂದು ನಂಬಲಾಗಿದೆ. ಆದರೆ ಅವು ಉಪಲಬ್ಧವಿಲ್ಲ. ಕೆಲವು ತಮಿಳು, ತೆಲುಗು, ಮರಾಠಿ ಭಾಷೆಗಳಗೆ ಅನುವಾದವಾಗಿವೆ ಎಂದರು. ಜೆಎಸ್‌ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿಕುಮಾರ್, ಪ್ರಾಂಶುಪಾಲ ಬಿ ಗಿರೀಶ, ಸಹ ಶಿಕ್ಷಕರಾದ ಮಹೇಶ್ವರಿ, ರಾಶರಾಜು, ಶಿಲ್ಪ, ಯಲ್ಲಪ್ಪ, ಮಲ್ಲೇಶ, ದೀಪ್ತಿ, ನಮಿತಾ, ಶಿವನಂದಯ್ಯ, ಬಸವರಾಜು ಇದ್ದರು.