ಸಾರಾಂಶ
ವಿರಾಜಪೇಟೆ : ಕಾಂಗ್ರೆಸ್ ಪಕ್ಷದಲ್ಲೂ ಬಣ ರಾಜಕೀಯ ಇದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಮಾಕುಟ್ಟದಲ್ಲಿ ಶುಕ್ರವಾರ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಣ ಕಿತ್ತಾಟ ಯಾರಲ್ಲಿ ಇಲ್ಲ ಹೇಳಿ, ಕಾಂಗ್ರೆಸ್‌ನಲ್ಲೂ ಇದೆ, ಬಿಜೆಪಿಯಲ್ಲೂ, ಜೆಡಿಎಸ್‌ನಲ್ಲೂ ಇದೆ. ಎಲ್ಲಾ ಪಕ್ಷಗಳಲ್ಲೂ ಬಣ ರಾಜಕೀಯ ಇದೆ. ನಮ್ಮ ಪಕ್ಷದಲ್ಲೂ ಬಣ ರಾಜಕೀಯ ಇದೆ ಎಂದರು.
ಅಧಿಕಾರ ಇರುವ ಪಕ್ಷದಲ್ಲಿ ಸಹಜವಾಗಿ ಭಿನ್ನಮತ ಇದ್ದೇ ಇರುತ್ತದೆ. ಆದರೆ ಅದನ್ನು ವರಿಷ್ಠರು ಕಾಲಕಾಲಕ್ಕೆ ಸರಿ ಮಾಡುತ್ತಾ ಹೋಗುತ್ತಾರೆ ಎಂದು ಹೇಳಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶತ್ರು ಸಂಹಾರ ಯಾಗ ಮಾಡುತ್ತಿರುವುದು ಅದು ಅವರ ಭಕ್ತಿ ಎಂದರು.
ಕಾಂಗ್ರೆಸ್‌ನ ದಲಿತ ಶಾಸಕರು, ಸಚಿವರು ನಡೆಸಲು ಉದ್ದೇಶಿಸಿದ್ದ ಪ್ರತ್ಯೇಕ ಸಭೆ ರದ್ದಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಭೆ ಬಂದ್ ಆಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ 13ರಂದು ರಾಜ್ಯಕ್ಕೆ ಬರುತ್ತಿದ್ದಾರೆ. ಅವರು ಬರುವುದಾಗಿ ಹೇಳಿರುವುದರಿಂದ ಸಭೆ ಮುಂದಕ್ಕೆ ಹೋಗಿದೆ, ಇದಕ್ಕೆ ಡಿ.ಕೆ.ಶಿವಕುಮಾರ್ ಅವರ ವಿರೋಧ ಏನೂ ಇಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಬಿಜೆಪಿ ಬೂತ್ ಮಟ್ಟದಲ್ಲಿ ಅಂಬೇಡ್ಕರ್ ಸಮಾವೇಶ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಒಳ್ಳೆಯ ಕೆಲಸವನ್ನು ಮಾಡುವುದಕ್ಕೆ ಯಾರಾದರೇನು. ಒಳ್ಳೆಯ ಕೆಲಸ ಮಾಡುವುದಾದರೆ ಮಾಡಲಿ. ಸಂವಿಧಾನವನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡುವುದರಲ್ಲಿ ತಪ್ಪೇನಿಲ್ಲ. ಸಂವಿಧಾನದ ಮಹತ್ವ, ಪ್ರಾಮುಖ್ಯತೆಯನ್ನು ತಿಳಿಸುವ ಕೆಲಸ ಮಾಡುವುದರಲ್ಲಿ ತಪ್ಪಿಲ್ಲ ಎಂದರು.
ಶ್ರೀರಾಮ ಸೇನೆ ವತಿಯಿಂದ ಏರ್ ಗನ್ ತರಬೇತಿ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದು, ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದೆ. ತನಿಖಾ ವರದಿ ಬಂದ ಬಳಿಕ ಕ್ರಮ ಆಗಲಿದೆ. ಪೊಲೀಸ್ ಇಲಾಖೆ ಇದೆ, ಸರ್ಕಾರ ಇದೆ. ಅದರ ಬಗ್ಗೆ ಗಮನ ಹರಿಸುತ್ತೇವೆ ಎಂದರು.