ಅಮೆರಿಕದಲ್ಲಿ ಸಿಲುಕಿದ ಮಂಡ್ಯ ಯುವಕನ ಕೇಸಲ್ಲಿ ಆಶಾಕಿರಣ

| Published : Mar 13 2024, 02:05 AM IST

ಸಾರಾಂಶ

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿ, ತನ್ನದಲ್ಲದ ತಪ್ಪಿಗೆ ಬಂಧನಕ್ಕೆ ಒಳಗಾಗಿದ್ದಾನೆ ಎನ್ನಲಾದ ಮಂಡ್ಯದ ಯುವಕನ ಸದ್ಯದ ಸ್ಥಿತಿಗತಿ ಕುರಿತು ಸಂಪೂರ್ಣ ಮಾಹಿತಿ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿ, ತನ್ನದಲ್ಲದ ತಪ್ಪಿಗೆ ಬಂಧನಕ್ಕೆ ಒಳಗಾಗಿದ್ದಾನೆ ಎನ್ನಲಾದ ಮಂಡ್ಯದ ಯುವಕನ ಸದ್ಯದ ಸ್ಥಿತಿಗತಿ ಕುರಿತು ಸಂಪೂರ್ಣ ಮಾಹಿತಿ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

ಅಮೆರಿಕದಲ್ಲಿ ಬಂಧನಕ್ಕೆ ಒಳಗಾಗಿರುವ ಮಂಡ್ಯದ ಸಿದ್ದರಾಜು ವಿನಯ್‌ ಸಾಗರ್‌ ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬಂಧಿತನ ಚಿಕ್ಕಮ್ಮ ಬಿ.ಎಸ್‌.ಅನುಪಮಾ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಮಾ.13ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಉಪ ಸಾಲಿಸಿಟರ್‌ ಜನರಲ್‌ ಎಚ್‌.ಶಾಂತಿಭೂಷಣ್‌ ಅವರು, ಸಿದ್ದರಾಜು ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲು ಅಮೆರಿಕದಲ್ಲಿರುವ ಭಾರತದ ಪ್ರಾಧಿಕಾರಗಳೊಂದಿಗೆ ನಿರಂತರ ಸಮಾಲೋಚಿಸಲಾಗಿದೆ. ಯಾವ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಸ್ವೀಕರಿಸಲಾಗಿದೆ. ಮುಂದಿನ ವಿಚಾರಣೆ ವೇಳೆ ಎಲ್ಲ ಮಾಹಿತಿ ಒದಗಿಸಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಪ್ರಕರಣ ಕುರಿತು ಸಂಪೂರ್ಣ ಮಾಹಿತಿಯನ್ನು ಮಾ.13ರಂದು ನ್ಯಾಯಾಲಯಕ್ಕೆ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಪ್ರಕರಣದ ವಿವರ:

ಅಮೆರಿಕದ ಕೊಲೊರಡೋ ರಾಜ್ಯದ ಡೆನ್ವೆರ್‌ ವಿಶ್ವವಿದ್ಯಾಲಯದಲ್ಲಿ ಮಂಡ್ಯದ ಕೇತಗಾನಹಳ್ಳಿಯ ಸಿದ್ದರಾಜು ವಿನಯ್‌ ಸಾಗರ್‌ ಮಾಸ್ಟರ್‌ ಇನ್‌ ಇನ್ಫರ್ಮೇಷನ್‌ ಸಿಸ್ಟೆಮ್ಸ್‌ (ಎಂಐಎಸ್‌) ಕೋರ್ಸ್‌ ವ್ಯಾಸಂಗ ಮಾಡುತ್ತಿದ್ದಾರೆ. ಸಿದ್ದರಾಜು ಫಿಲೆಡೆಲ್ಫಿಯಾದಲ್ಲಿ ಸ್ನೇಹಿತ ಪ್ರಭಾಕರ್ ಜೊತೆಗೆ ಒಂದೇ ಕೊಠಡಿಯಲ್ಲಿ ನೆಲೆಸಿದ್ದರು. ಪ್ರಭಾಕರ್‌ ವಿರುದ್ಧ ಅಮೆರಿಕದ ಹುಡುಗಿಯೊಬ್ಬಳು ದೂರು ದಾಖಲಿಸಿದ್ದರು. ಅದರ ಬೆನ್ನಲ್ಲೇ ಪ್ರಭಾಕರ್‌ ತಲೆಮರೆಸಿಕೊಂಡಿದ್ದ.

ಈ ಬೆಳವಣಿಗೆ ಬಗ್ಗೆ ಮಾಹಿತಿ ತಿಳಿಯದ ಸಿದ್ದರಾಜು ಅನಾರೋಗ್ಯ ಎದುರಿಸುತ್ತಿದ್ದ ತನ್ನ ಪೋಷಕರನ್ನು ಕಾಣಲು ಭಾರತಕ್ಕೆ ಮರಳಲು ತೀರ್ಮಾನಿಸಿದ್ದರು. 2024ರ ಫೆ.1ರಂದು ವಿಮಾನ ನಿಲ್ದಾಣಕ್ಕೆ ತಲುಪಿದಾಗ ಅನಿರೀಕ್ಷಿತವಾಗಿ ಅಮೆರಿಕದ ಪೊಲೀಸರು ಬಂಧಿಸಿದ್ದರು. ಪ್ರಭಾಕರ್‌ ಜೊತೆಗೆ ಒಡನಾಟದಲ್ಲಿದ್ದ ಕಾರಣಕ್ಕೆ ಬಂಧಿಸಲ್ಪಟ್ಟ ಸಿದ್ದರಾಜುನನ್ನು ಡಗ್ಲಾಸ್‌ ರಾಷ್ಟ್ರದ ಜಿಲ್ಲಾ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಸಿದ್ದರಾಜು ಬಗ್ಗೆ ಮಾಹಿತಿ ನೀಡಲು 2024ರ ಫೆ.10ರಂದು ಮನವಿ ಸಲ್ಲಿಸಿದ್ದರೂ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಆಕ್ಷೇಪಿಸಿ ಆತನ ಚಿಕ್ಕಮ್ಮ (ಅರ್ಜಿದಾರೆ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿದ್ಯಾರ್ಥಿ ಬಗ್ಗೆ ಕೇಂದ್ರ ನಿರ್ಲಕ್ಷ್ಯ:ಅರ್ಜಿದಾರೆಯ ಪರ ವಕೀಲ ಡಿ.ಮೋಹನ್‌ ಕುಮಾರ್‌, ಪ್ರಭಾಕರ್‌ ತಲೆಮರೆಸಿಕೊಂಡಿರುವ ಕಾರಣಕ್ಕೆ ಸಿದ್ದರಾಜುನನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ. ಅಲ್ಲಿನ ಕಾನೂನು ಪ್ರಕಾರ ಪ್ರಭಾಕರ್‌ ಸಿಗುವವರೆಗೂ ಸಿದ್ದರಾಜುನನ್ನು ಬಿಡುಗಡೆ ಮಾಡುವುದಿಲ್ಲವಂತೆ. ವಿನಾಕಾರಣ ವಿದೇಶದಲ್ಲಿ ಬಂಧನಕ್ಕೆ ಒಳಗಾಗಿರುವ ಪ್ರಜೆಯನ್ನು ಭಾರತಕ್ಕೆ ಕರೆತರುವುದು ಕೇಂದ್ರ ಸರ್ಕಾರದ ಕರ್ತವ್ಯ. ಸಿದ್ದರಾಜು ತಂದೆ-ತಾಯಿ ಅನಕ್ಷರಸ್ಥರಾಗಿದ್ದಾರೆ. ಅವರು ವೀಸಾ, ಪಾಸ್‌ಪೋರ್ಟ್‌ ಹೊಂದಿಲ್ಲ. ಇದರಿಂದ ಅವರಿಗೆ ಅಮೆರಿಕಕ್ಕೆ ತೆರಳಿ ಮಗನ ಪರಿಸ್ಥಿತಿ ವಿಚಾರಿಸಲು ಸಾಧ್ಯವಿಲ್ಲದಂತಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಭಾರತೀಯ ಪ್ರಜೆ ಕುಲಭೂಷಣ್‌ ಜಾಧವ್‌ಗೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಕೋರ್ಟ್‌ನಿಂದ ತಡೆಯಾಜ್ಞೆ ಪಡೆದುಕೊಂಡಿದೆ. ಆದರೆ, ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ ಸಿದ್ದರಾಜು ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದೆ. ಆದ್ದರಿಂದ ಸಿದ್ದರಾಜು ಬಂಧನ ಕುರಿತಂತೆ ಪರಿಶೀಲಿಸಬೇಕು. ಆತನ ಸದ್ಯದ ಪರಿಸ್ಥಿತಿ ಬಗ್ಗೆ ಅರ್ಜಿದಾರರು/ಪೋಷಕರಿಗೆ ಮಾಹಿತಿ ನೀಡಬೇಕು. ಪ್ರಕರಣದಿಂದ ಸಿದ್ದರಾಜು ಅವರನ್ನು ಪಾರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.

ಸಸ್ಯಾಹಾರ ಕೇಳಿದರೆ ಸೌತೆಕಾಯಿ ಕೊಡ್ತಾರೆ!

ಇತ್ತೀಚೆಗೆ ಮಧ್ಯರಾತ್ರಿ ವೇಳೆ ಜೈಲಿನಿಂದ ಕರೆ ಮಾಡಿದ್ದ ಸಿದ್ದರಾಜು, ಜೈಲಿನಲ್ಲಿ ಗೋಮಾಂಸದಿಂದ ಸಿದ್ಧಪಡಿಸಿದ ಆಹಾರ ನೀಡಲಾಗುತ್ತಿದೆ. ಸಸ್ಯಾಹಾರಿಯಾದ ಕಾರಣ ಸಸ್ಯಾಹಾರ ಪೂರೈಸಲು ಕೋರಲಾಗಿತ್ತು. ಆದರೆ, ಸೌತೆಕಾಯಿ ಮಾತ್ರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಆತನಿಗೆ ಸಸ್ಯಾಹಾರ ಪೂರೈಸಲು ಅಮೆರಿಕದ ಜೈಲು ಪ್ರಾಧಿಕಾರಕ್ಕೆ ಕೋರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಮೆಮೊ ಸಲ್ಲಿಸಿ ಹೈಕೋರ್ಟ್‌ಗೆ ಕೋರಿದ್ದಾರೆ. ಈ ಕುರಿತು ಗಮನ ಹರಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠ ಮೌಖಿಕವಾಗಿ ಸೂಚಿಸಿದೆ.