ಸಾರಾಂಶ
ಹುಬ್ಬಳ್ಳಿ: ಗಣೇಶೋತ್ಸವ ರೀತಿಯ ಸಾಂಸ್ಕೃತಿಕ- ಧಾರ್ಮಿಕ ಪರಂಪರೆಗಳು ಮನುಷ್ಯನ ವ್ಯಕ್ತಿತ್ವಕ್ಕೆ ಶ್ರೇಷ್ಠತೆ ತಂದುಕೊಡುತ್ತವೆ. ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಚಟುವಟಿಕೆಗಳು ಮಾನವ ಜನಾಂಗದ ಶ್ರೇಷ್ಠತೆಯನ್ನು ಸಾರುತ್ತವೆ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮೀಜಿ ಹೇಳಿದರು.
ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ವತಿಯಿಂದ ಹುಬ್ಬಳ್ಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ನೀಡಲಾಗುವ ಬಹುಮಾನ ವಿತರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಭಾರತದಲ್ಲಿ ಹಿಂದೂಗಳು ಅಸಂಖ್ಯಾತ ಹಬ್ಬಗಳನ್ನು ಅದ್ಭುತವಾಗಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಬೇರಾವ ದೇಶ- ಧರ್ಮದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹಬ್ಬಗಳ ಆಚರಣೆ ಇಲ್ಲ. ಹಿಂದೂ ಹಬ್ಬಗಳ ಆಚರಣೆಯಲ್ಲಿ ಅಪಾರ ವೈವಿಧ್ಯತೆ ಇದೆ. ಹಬ್ಬಕ್ಕೆ ತಯಾರಿಸುವ ಆಹಾರ ಪದಾರ್ಥಗಳು ಕೂಡ ವೈವಿಧ್ಯಮಯ. ಸ್ವಾದಿಷ್ಟಕರ ಆಗಿರುತ್ತವೆ ಎಂದು ಅವರು ಶ್ಲಾಘಿಸಿದರು.
ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದ ಗಣೇಶೋತ್ಸವ ಮಂಡಳಿ ಇಡೀ ದೇಶಕ್ಕೆ ಅನುಕರಣೀಯವಾಗುವಂತೆ ಮಾದರಿ ರೀತಿಯಲ್ಲಿ ಗಣೇಶ ವಿಗ್ರಹದ ವಿಸರ್ಜನೆ ಸಮಾರಂಭವನ್ನು ಈ ಬಾರಿ ನೆರವೇರಿಸಿದೆ. ಮುಂಬೈಗೆ ಪೈಪೋಟಿ ನೀಡುವ ರೀತಿಯಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಇಡೀ ಉತ್ತರ ಕರ್ನಾಟಕದ ಜನರು ಹುಬ್ಬಳ್ಳಿ ಗಣೇಶ ವಿಗ್ರಹಗಳ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.ಉದ್ಯಮಿ ವೀರೇಶ ಉಂಡಿ ಮಾತನಾಡಿ, ರಾಜ್ಯಕ್ಕೆ ಮಾದರಿ ಎನ್ನುವ ರೀತಿಯಲ್ಲಿ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಗಣೇಶೋತ್ಸವನ್ನು ಭಕ್ತರ ವಂತಿಗೆಯಿಂದಲೇ ಆಚರಿಸಿಕೊಂಡು ಬರಲಾಗಿದೆ. ಹುಬ್ಬಳ್ಳಿಯ ಈ ಮಹಾ ಉತ್ಸವಕ್ಕೆ ರಾಜ್ಯ ಸರ್ಕಾರವು ಅನುದಾನ ನೀಡುವ ಮೂಲ️ಕ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಡಳದ ಅಧ್ಯಕ್ಷ ಮೋಹನ ಲಿಂಬಿ️ಕಾಯಿ ಅವರು, ಸಮರ್ಥ ಹಾಗೂ ಯೋಗ್ಯ ಕಲಾವಿದರ ತಂಡ ಯಾವುದೇ ತಾರತಮ್ಯ ಇಲ್ಲದೆ ಬಹುಮಾನ ಆಯ್ಕೆ ಕಾರ್ಯ ನೆರವೇರಿಸಿದೆ ಎಂದು ಹೇಳಿದರು.ಸಾರ್ವಜನಿಕ ಗಣೇಶ ವಿಗ್ರಹಗಳ ವಿಸರ್ಜನೆಗೆ ಅನುವಾಗುವಂತೆ ಬಾವಿಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿರುವುದಕ್ಕಾಗಿ ಮಹಾನಗರ ಪಾಲಿಕೆಗೆ ಅವರು ಧನ್ಯವಾದಗಳನ್ನು ತಿಳಿಸಿದರು.
ಮಹಾಮಂಡಳದ ಉಪಾಧ್ಯಕ್ಷರಾದ ಅಲ್ತಾಫ್ ಕಿತ್ತೂರ, ಶಾಂತರಾಜ ಪೋಳ, ಗೌರವ ಕಾರ್ಯದರ್ಶಿ ಎಸ್.ಎಸ್. ಕಮಡೊಳ್ಳಿಶೆಟ್ಟರ್, ಮಹಿಳಾ ವಿಭಾಗದ ಅಧ್ಯಕ್ಷೆ ಸಂಗೀತಾ ಇಜಾರದ ವೇದಿಕೆ ಮೇಲೆ ಉಪಸ್ಥಿತರಿದ್ದರು. ಅನಿಲ️ ಕವಿಶೆಟ್ಟಿ ಸ್ವಾಗತಿಸಿದರು. ಸಂತೋಷ ಶೆಟ್ಟಿ, ಅನಿತಾ ಜಡಿ ಪ್ರಾರ್ಥಿಸಿದರು. ಮಂಡಳದ ಗೌರವದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ವಂದಿಸಿದರು. ಸವಿತಾ ಚಂದನಮಟ್ಟಿ, ಗಾಯಿತ್ರಿ ನೆಲ್ಲಿಕೊಪ್ಪ, ಶೋಭಾ ಕಂಪ್ಲಿ, ಶ್ರೀನಿಧಿ ದೇಶಪಾಂಡೆ ನಿರೂಪಿಸಿದರು.ಪ್ರತಿಭಾ ಪುರಸ್ಕಾರ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಗಣ್ಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಡಾ. ರಮೇಶ ಮಹಾದೇವಪ್ಪನವರ (ಭಾವೈಕ್ಯತೆ ಸೇವೆ), ಕೀರ್ತಿ ಲಿಂಗರಾಜ ಕುಂದಗೋಳ (ಸಾಹಸ), ಕನ್ನಡಪ್ರಭ ಛಾಯಾಗ್ರಾಹಕ ಈರಣ್ಣ ನಾಯ್ಕರ (ನಟನೆ, ಛಾಯಾಗ್ರಹಣ), ನಾಗೇಂದ್ರಸಾ ಮಹಾದೇವಸಾ ಮೆಹರವಾಡೆ (ಸಮಾಜ ಸೇವೆ), ಗೌರಿ ಚಂದ್ರಶೇಖರ ನಾಯಕ (ಸಮಾಜ ಸೇವೆ), ಸೌರಭ ಕಮ್ಮಾರ (ಪ್ರಾಣಿ ಸಂರಕ್ಷಣೆ), ಡಾ. ಗಂಗಾಧರಯ್ಯ ಚಂದ್ರಶೇಖರ ಹಿರೇಮಠ (ವೈದ್ಯಕೀಯ), ರಾಘವೇಂದ್ರ ವದ್ದಿ (ಚನಲ️ಚಿತ್ರ), ಡಾ. ನಾಗಲಿಂಗ ಮುರಗಿ (ತಬಲಾ), ಫಿಜಾಅಂಜುಮ್ ಬುಕ್ಕಿಟಗಾರ (ವಚನ ಸಾಹಿತ್ಯ) ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಲಾವಿದರಿಗೆ ಸನ್ಮಾನ: ಬಹುಮಾನಗಳ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ ಕಲಾವಿದರಾದ ಬಸವರಾಜ ಸಜ್ಜನ, ಈರಣ್ಣ ಪಾಳೇದ, ಅಶೋಕ ಬೆಳ್ಳಿಗಟ್ಟಿ, ವಿಶ್ವನಾಥ ಹಿತ್ತಾಳೆ, ಹರೀಶ ಭರಾಡೆ, ಚಂದ್ರಶೇಖರ ಗಾಣಿಗೇರ, ಸಂತೋಷ ಕಟ್ಟಿ, ಮೋಹನ ಪತ್ತಾರ, ಮೌನೇಶ ಅರ್ಕಸಾಲಿ, ಜಯಾ ಮುರಗೋಡ, ಚಿದಾನಂದ ಪೂಜಾರ, ರಾಜಶೇಖರ ಕರಕಣ್ಣವರ, ಅನಿಲ️ ಬೇವಿನಕಟ್ಟಿ, ಸಂತೋಷ ಕಾಟವೆ ಅವರನ್ನು ಸನ್ಮಾನಿಸಲಾಯಿತು.