ಸಾರಾಂಶ
ಹೊನ್ನಾವರ: ರಕ್ತಕ್ಕೆ ಪರ್ಯಾಯ ಯಾವುದೂ ಇಲ್ಲ. ಅಂತೆಯೇ ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ತುರ್ತಾಗಿ ಬೇಕು ಎಂದಾಕ್ಷಣ ಸಿಗುವುದೂ ಇಲ್ಲ. ಹೀಗಾಗಿ, ರಕ್ತದಾನ ಮಹಾದಾನವಾಗಿದೆ ಎಂದು ಹೊನ್ನಾವರ ತಾಲೂಕು ಆಸ್ಪತ್ರೆಯ ಚರ್ಮರೋಗ ವೈದ್ಯ ಡಾ. ಶಿವಾನಂದ ಹೆಗಡೆ ಹೇಳಿದರು.
ಪಟ್ಟಣದ ಎಂ.ಪಿ.ಇ. ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನ ಆರ್.ಎಸ್. ಹೆಗಡೆ ಸಭಾಭವನದಲ್ಲಿ ಎಸ್.ಡಿ.ಎಂ. ಕಾಲೇಜಿನ ತಾಲೂಕು ವಿದ್ಯಾರ್ಥಿ ಒಕ್ಕೂಟ, ರೆಡ್ ಕ್ರಾಸ್ ಹಾಗೂ ತಾಲೂಕು ಆಸ್ಪತ್ರೆಯ ಸಹಯೋಗದಲ್ಲಿ ನಡೆದ ರಕ್ತದಾನ ಮಹತ್ವ ಜಾಗೃತಿ ಮತ್ತು ರಕ್ತದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ತಾಲೂಕು ಆಸ್ಪತ್ರೆಯ ಆಪ್ತಸಮಾಲೋಚಕ ವಿನಾಯಕ ಪಟಗಾರ ಮಾತನಾಡಿ, ನಾವು ದೇವರಿಗೆ ಹರಕೆ ತೀರಿಸಲು ಯಾವುದೋ ಮಾರ್ಗವನ್ನು ಅನುಸರಿಸಿ ಕೋಳಿ, ಕುರಿ, ಹಣ್ಣು ಮೊದಲಾದವುಗಳನ್ನು ನೀಡುತ್ತೇವೆ ಎಂದು ಹರಕೆ ಕಟ್ಟುತ್ತೇವೆ. ಆದರೆ, ರಕ್ತ ದಾನ ಮಾಡುತ್ತೇವೆ ಎಂದು ಹರಕೆಯನ್ನು ಕಟ್ಟಿಕೊಂಡರೆ ಒಳಿತಾಗುತ್ತದೆ. ಇದರಿಂದ ಒಂದು ಜೀವ ಉಳಿಯುತ್ತದೆ. ಇದರಿಂದ ದೇವರಿಗೂ ಪ್ರಿಯವಾಗುತ್ತದೆ ಎಂದು ಹೇಳಿದರು. ತಾಲೂಕಿನಲ್ಲಿ ರಕ್ತದಾನ ಮಾಡುವ ಮತ್ತು ಮಾಡಿಸುವ ಮೊದಲ ಕಾಲೇಜು ಎಂದರೆ ಎಸ್.ಡಿ.ಎಂ. ಆಗಿದೆ. ರಕ್ತದಾನದ ಬಗ್ಗೆ ಯುವ ಸಮುದಾಯ ಉತ್ಸಾಹ ತೋರಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಡಿ.ಎಲ್. ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಗೌಡ ಹಾಜರಿದ್ದರು.ವಿದ್ಯಾರ್ಥಿನಿ ಭಾಗ್ಯಶ್ರೀ ಪ್ರಾರ್ಥಿಸಿದರು. ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷ ಡಾ. ಎಂ.ಜಿ. ಹೆಗಡೆ ಸ್ವಾಗತಿಸಿದರು. ಒಕ್ಕೂಟದ ಸಲಹೆಗಾರ ಡಾ. ಸುರೇಶ್ ಎಸ್. ವಂದಿಸಿದರು. ಮಂಜುನಾಥ್ ಭಂಢಾರಿ ನಿರೂಪಿಸಿದರು.
ಬಳಿಕ ಹೊನ್ನಾವರ ತಾಲೂಕಾಸ್ಪತ್ರೆಗೆ ತೆರಳಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ರಕ್ತದಾನವನ್ನು ಮಾಡಿದರು.