ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿರುವುದನ್ನು ಸಹಿಸಿಕೊಳ್ಳಲಾಗದೆ ಕುಮಾರಸ್ವಾಮಿ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆದು ಕಾಲಹರಣ ಮಾಡುವ ಬದಲು, ಕೇಂದ್ರ ಸಚಿವರಾಗಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಯತ್ತ ಗಮನಹರಿಸಬೇಕು.

ಕೆ.ಎಂ.ದೊಡ್ಡಿ:

ಡಿ.ಕೆ.ಶಿಕುಮಾರ್ ಅವರು ನೇರವಾಗಿ ಮಾತನಾಡುವ ವ್ಯಕ್ತಿ. ಸ್ಟಿಂಗ್ ಆಪರೇಷನ್ ಅನ್ನು ಮುಖ್ಯಮಂತ್ರಿ ಅವರೇ ಮಾಡಿಸಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯಲ್ಲಿ ಯಾವುದೇ ಆಧಾರವಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಡಿ.ಕೆ.ಶಿವಕುಮಾರ್ ಅವರು ಅಡ್ಡದಾರಿಯಲ್ಲಿ ರಾಜಕೀಯ ಮಾಡುವವರಲ್ಲ. ಡಿಕೆಶಿ ನೇರವಾಗಿ ಮಾತನಾಡುವ ವ್ಯಕ್ತಿ. ಆಧಾರವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿರುವುದನ್ನು ಸಹಿಸಿಕೊಳ್ಳಲಾಗದೆ ಕುಮಾರಸ್ವಾಮಿ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆದು ಕಾಲಹರಣ ಮಾಡುವ ಬದಲು, ಕೇಂದ್ರ ಸಚಿವರಾಗಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ತರುವ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ಪ್ರಯತ್ನಿಸಬೇಕು. ಜಿಲ್ಲೆಯ ರೈತರು, ಯುವಕರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ಅವರ ಜವಾಬ್ದಾರಿಯಾಗಿದೆ. ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಸಮಯ ವ್ಯಯಿಸುವ ಬದಲು ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಲಿ ಎಂದು ಒತ್ತಾಯಿಸಿದರು.

ಜಿಪಂ, ತಾಪಂ ಕ್ಷೇತ್ರಗಳ ಮೀಸಲಾತಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುವಂತೆ ನಿಗದಿಪಡಿಸಲಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆರೋಪಕ್ಕೆ ತಿರುಗೇಟು ನೀಡಿದ ಶಾಸಕರು, ನಮ್ಮ ಮನೆ, ನಮ್ಮ ಕುಟುಂಬದ ಮತವನ್ನೇ ನಾವು ನಮಗೆ ಬೇಕಾದಂತೆ ಹಾಕಿಕೊಳ್ಳುತ್ತೇವೆ ಎಂಬ ರೀತಿಯಲ್ಲಿ ಮೀಸಲಾತಿ ನಿಗದಿಪಡಿಸಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.

ಒಂದು ತಾಪಂ ವ್ಯಾಪ್ತಿಯಲ್ಲಿ ಆರರಿಂದ ಏಳು ಗ್ರಾಮಗಳಿದ್ದರೆ, ಒಂದು ಜಿಲ್ಲಾಪಂ ವ್ಯಾಪ್ತಿಯಲ್ಲಿ ಸುಮಾರು 30ರಿಂದ 35 ಗ್ರಾಮಗಳಿರುತ್ತವೆ. ಇಷ್ಟೊಂದು ಗ್ರಾಮಗಳನ್ನು ಒಳಗೊಂಡ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುವಂತೆ ಮೀಸಲಾತಿ ನಿಗದಿಪಡಿಸುವುದು ಹೇಗೆ ಸಾಧ್ಯ? ಎಂಬುದನ್ನು ವಿಜಯೇಂದ್ರ ಅರ್ಥಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದರು.

ರಾಜಕೀಯದಲ್ಲಿ ಅನುಭವ ಹೊಂದಿರುವವರು ಈ ರೀತಿಯ ಹೇಳಿಕೆಗಳನ್ನು ನೀಡುವುದಿಲ್ಲ. ತಂದೆ ಹೆಸರಿನಲ್ಲಿ ರಾಜಕೀಯಕ್ಕೆ ಬಂದು, ವಿಷಯದ ಸಂಪೂರ್ಣ ಅರಿವಿಲ್ಲದೆ ಏನೇನೋ ಮಾತನಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.