ಜಿಪಂ, ತಾಪಂನಲ್ಲೇ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲ..!

| Published : Apr 03 2025, 12:33 AM IST

ಜಿಪಂ, ತಾಪಂನಲ್ಲೇ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲ..!
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಮೂರು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲ. ಅದನ್ನು ಅಳವಡಿಸಿಕೊಳ್ಳುವುದಕ್ಕೆ ಅಧಿಕಾರಿ ವರ್ಗದವರೂ ಆಸಕ್ತಿ ತೋರಿಸಿಲ್ಲ. ತಮ್ಮ ಕೆಳಹಂತದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಯ ಇ- ಹಾಜರಾತಿಯನ್ನು ಕಡ್ಡಾಯಗೊಳಿಸಿ ಮೇಲ್ಮಟ್ಟದ ಅಧಿಕಾರಿಗಳು ಇ- ಹಾಜರಾತಿಗೆ ನಿರ್ಲಕ್ಷ್ಯ ವಹಿಸಿರುವುದು ಇದೀಗ ಬೆಳಕಿಗೆ ಬಂದಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ಮೂರು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲ. ಅದನ್ನು ಅಳವಡಿಸಿಕೊಳ್ಳುವುದಕ್ಕೆ ಅಧಿಕಾರಿ ವರ್ಗದವರೂ ಆಸಕ್ತಿ ತೋರಿಸಿಲ್ಲ. ತಮ್ಮ ಕೆಳಹಂತದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಯ ಇ- ಹಾಜರಾತಿಯನ್ನು ಕಡ್ಡಾಯಗೊಳಿಸಿ ಮೇಲ್ಮಟ್ಟದ ಅಧಿಕಾರಿಗಳು ಇ- ಹಾಜರಾತಿಗೆ ನಿರ್ಲಕ್ಷ್ಯ ವಹಿಸಿರುವುದು ಇದೀಗ ಬೆಳಕಿಗೆ ಬಂದಿದೆ.

ಸಾಮಾಜಿಕ ಕಾರ್ಯಕರ್ತ ಎಂ.ಚಾಮರಾಜು ಅವರು ಜಿಲ್ಲಾ ಪಂಚಾಯಿತಿ ಕಚೇರಿಯ ಎಲ್ಲಾ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಕರ್ತವ್ಯಕ್ಕೆ ಹಾಜರಾದಾಗ ಮತ್ತು ಕರ್ತವ್ಯದಿಂದ ತೆರಳುವಾಗ (ಬೆಳಗ್ಗೆ ಮತ್ತು ಸಂಜೆ) ನೀಡಿರುವ ಬಯೋಮೆಟ್ರಿಕ್ ಹಾಜರಾತಿಯ ಮಾಹಿತಿಯನ್ನು ಕೋರಿದಾಗ ಅಸಲಿ ಸಂಗತಿ ಬಯಲಾಗಿದೆ.

ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಈ ಹಿಂದೆ ಸರ್ಕಾರದ ಪಂಚತಂತ್ರ ತಂತ್ರಾಂಶವನ್ನು ೨೦೨೨ರಲ್ಲಿ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಸರ್ಕಾರದ ಪಂಚತಂತ್ರ ೨.೦ ತಂತ್ರಾಂಶವನ್ನು ಅಳವಡಿಸಲಾಗಿದೆ. ಈ ತಂತ್ರಾಂಶದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿಗೆ ಇ- ಹಾಜರಾತಿಯನ್ನು ಬಯೋಮೆಟ್ರಿಕ್‌ನಲ್ಲಿ ನಮೂದಿಸಲು ಅವಕಾಶ ಕಲ್ಪಿಸದಿರುವುದರಿಂದ ಬಯೋಮೆಟ್ರಿಕ್‌ನಲ್ಲಿ ನಮೂದಿಸಲು ಸಾಧ್ಯವಾಗಿರುವುದಿಲ್ಲ ಎಂದು ಜಿಪಂ ಉಪ ಕಾರ್ಯದರ್ಶಿ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿ ಎಂ.ಬಾಬು ನೀಡಿರುವ ಹಿಂಬರಹದಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಖಾಸಗಿಯಾಗಿ ಆಧಾರ್‌ಕಾರ್ಡ್ ಆಧಾರಿತ ಇ- ಹಾಜರಾತಿಯ ಬಯೋಮೆಟ್ರಿಕ್ ಅಳವಡಿಸಲು ಜಿಪಂ ಕಚೇರಿಯ ಎನ್‌ಐಸಿ ವಿಭಾಗಕ್ಕೆ ಪತ್ರ ಬರೆದು ಬಯೋಮೆಟ್ರಿಕ್‌ನ್ನು ಹೊಸದಾಗಿ ಖರೀದಿ ಮಾಡಲು ಹಣ ಪಾವತಿ ಮಾಡಿದ್ದು, ಬಯೋಮೆಟ್ರಿಕ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಜಿಪಂ ಕಾರ್ಯಾಲಯದ ಅಧಿಕಾರಿಗಳು, ಸಿಬ್ಬಂದಿ ಇ- ಹಾಜರಾತಿಯನ್ನು ಎನ್‌ಐಸಿ ವತಿಯಿಂದ ಬಯೋಮೆಟ್ರಿಕ್ (ಆಧಾರ್‌ಕಾರ್ಡ್ ಬೇಸ್) ವ್ಯವಸ್ಥೆಯನ್ನು ಕಲ್ಪಿಸಲು ವಾರ್ಷಿಕವಾಗಿ ತಗುಲುವ ೧೧,೮೦೦ ರು. ವೆಚ್ಚವನ್ನು ಭರಿಸಲು ಮುಖ್ಯ ಲೆಕ್ಕಾಧಿಕಾರಿಗಳಿಗೆ ಜಿಪಂ ಸಿಇಒ 2025ರ ಜ.16ರಂದು ಆದೇಶಿಸಿದ್ದಾರೆ.

ಪಂಚತಂತ್ರ ತಂತ್ರಾಂಶ ಸ್ಥಗಿತಗೊಂಡು ಮೂರು ವರ್ಷಗಳಾದರೂ ಅಧಿಕಾರಿಗಳು, ಸಿಬ್ಬಂದಿಯ ಇ- ಹಾಜರಾತಿ ನಮೂದಿಸಲು ಬಯೋಮೆಟ್ರಿಕ್ ಅಳವಡಿಸುವ ಪ್ರಕ್ರಿಯೆ ಇನ್ನೂ ಪತ್ರ ವ್ಯವಹಾರದ ಹಂತದಲ್ಲೇ ಇರುವುದು ಅಧಿಕಾರಿಗಳ ಉದಾಸೀನ ಧೋರಣೆಗೆ ಸಾಕ್ಷಿಯಾಗಿದೆ. ಸಾಮಾನ್ಯ ಬಯೋಮೆಟ್ರಿಕ್ ಅಳವಡಿಕೆ ಕಾರ್ಯವೇ ಆಮೆಗತಿಯಲ್ಲಿ ನಡೆಯುತ್ತಿರುವಾಗ ಇನ್ನು ಜಿಪಂ ಮತ್ತು ತಾಪಂ ಅಭಿವೃದ್ಧಿಯ ವೇಗ ಎಷ್ಟರಮಟ್ಟಿಗಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತಮ್ಮ ಕೆಳಹಂತದ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ಬಯೋಮೆಟ್ರಿಕ್ ಹಾಜರಾತಿಯ ಮೇಲೆ ಹದ್ದಿನ ಕಣ್ಣಿಡುವ, ಇ- ಹಾಜರಾತಿ ಆಧಾರದ ಮೇಲೆ ವೇತನ ಪಾವತಿಗೆ ಕ್ರಮ ವಹಿಸುವ ಜಿಪಂ, ತಾಪಂ ಅಧಿಕಾರಿಗಳು, ಸಿಬ್ಬಂದಿಗೆ ಬಯೋಮೆಟ್ರಿಕ್ ವ್ಯವಸ್ಥೆಯ ನಿರ್ಬಂಧವಿಲ್ಲದಿರುವುದು ಸೋಜಿಗದ ಸಂಗತಿಯಾಗಿದೆ. ಇ- ಹಾಜರಾತಿಯಿಂದ ಹೊರಗಿರುವ ಜಿಪಂ, ತಾಪಂ ಅಧಿಕಾರಿಗಳು, ಸಿಬ್ಬಂದಿಯ ಹಾಜರಾತಿಯ ಮೇಲೆ ಕಣ್ಣಿಡುವವರೇ ಇಲ್ಲದಂತಾಗಿದೆ. ಅವರು ಯಾವಾಗ ಕಚೇರಿಗೆ ಬರುತ್ತಾರೆ, ಯಾವಾಗ ಹೊರಗೆ ಹೋಗುತ್ತಾರೆಂಬುದು ಯಾರ ಅರಿವಿಗೂ ಬಾರದಂತೆ ನಡೆಯುತ್ತಲೇ ಇದೆ.

ಗ್ರಾಪಂ ಅಧಿಕಾರಿಗಳು, ಸಿಬ್ಬಂದಿಗೆ ಬಯೋಮೆಟ್ರಿಕ್ ಕಡ್ಡಾಯ:

ಜಿಪಂ, ತಾಪಂ ಅಧಿಕಾರಿಗಳು, ಸಿಬ್ಬಂದಿ ಬಯೋಮೆಟ್ರಿಕ್‌ನಿಂದ ವಿನಾಯಿತಿ ಪಡೆದು ನಿರಾಳವಾಗಿದ್ದರೆ, ಗ್ರಾಪಂ ಅಧಿಕಾರಿಗಳು ಮತ್ತು ನೌಕರರು ಕಚೇರಿ ವೇಳೆಗೆ ಸರಿಯಾಗಿ ಹಾಜರಾಗಿ ಬಯೋಮೆಟ್ರಿಕ್‌ ನೀಡುವುದು ಕಡ್ಡಾಯ. ಈ ನೀತಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬಂತಾಗಿದೆ.

ಗ್ರಾಮ ಪಂಚಾಯಿತಿಗಳಲ್ಲಿನ ಸರ್ಕಾರಿ ನೌಕರರಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಕಾರ್ಯದರ್ಶಿ (ಗ್ರೇಡ್-೧, ಗ್ರೇಡ್-೨), ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಕಡ್ಡಾಯವಾಗಿ ನಿತ್ಯ ಪಂಚತಂತ್ರ ೨.೦ ತಂತ್ರಾಂಶದಲ್ಲಿ ಬಯೋಮೆಟ್ರಿಕ್ ಹಾಜರಾತಿ ದಾಖಲಿಸುವುದು ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಪಿಡಿಒ ಹುದ್ದೆಯು ಕಾರ್ಯಕಾರಿ ಹುದ್ದೆಯಾಗಿದ್ದು ಬಯೋಮೆಟಿಕ್ ಹಾಜರಾತಿ ದಾಖಲಿಸಲು ಮಿದು (ಪ್ಲೆಕ್ಸಿ) ಸಮಯ ಸೌಲಭ್ಯ ಲಭ್ಯವಿರುತ್ತದೆ. ಆದರೆ, ನಿತ್ಯ ಬಯೋಮೆಟ್ರಿಕ್ ದಾಖಲಿಸುವುದು ಕಡ್ಡಾಯವಾಗಿದೆ. ಗ್ರಾಪಂ ಕಾರ್ಯದರ್ಶಿ (ಗ್ರೇಡ್-೧ ಮತ್ತು ಗ್ರೇಡ್-೨), ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಕರ್ತವ್ಯದ ಅವಧಿಯಲ್ಲಿ ಗ್ರಾಪಂ ಕಾರ್ಯಾಲಯದಲ್ಲಿ ಲಭ್ಯವಿದ್ದು, ಕಾರ್ಯನಿರ್ವಹಿಸುವುದು. ತಾಪಂ ಇಒಗಳು ಗ್ರಾಪಂನ ಎಲ್ಲಾ ಸರ್ಕಾರಿ ನೌಕರರ ಬಯೋಮೆಟ್ರಿಕ್ ಹಾಜರಾತಿಯನನ್ನು ಕಡ್ಡಾಯವಾಗಿ ಪಂಚತಂತ್ರ ೨.೦ ತಂತ್ರಾಂಶದ ಮೂಲಕ ಪಡೆದು ಪ್ರತಿ ಮಾಹೆ ವೇತನ ಪಾವತಿಸಲು ಕ್ರಮ ವಹಿಸುವಂತೆ ಸೂಚಿಸಿದೆ.

ಪಿಡಿಒಗಳೂ ಕೂಡ ಗ್ರಾಪಂ ಕರವಸೂಲಿಗಾರರು, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಸ್ವಚ್ಛತಾಗಾರರು, ನೀರುಗಂಟಿಗಳು, ಗ್ರಂಥಪಾಲಕರ ಬಯೋಮೆಟ್ರಿಕ್ ಹಾಜರಾತಿ ಆಧಾರದ ಮೇಲೆ ವೇತನ ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ.