ಸಿಎಂ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿಲ್ಲ: ಚಲುವರಾಯಸ್ವಾಮಿ

| Published : Oct 09 2024, 01:32 AM IST

ಸಾರಾಂಶ

ಎಐಸಿಸಿ ಅಧ್ಯಕ್ಷರಾಗಲಿ, ಕೆಪಿಸಿಸಿ ಅಧ್ಯಕ್ಷರಾಗಲಿ ಸಿಎಂ ಬದಲಾವಣೆ ಕುರಿತು ಹೇಳಿಯೇ ಇಲ್ಲ. ಹೈಕಮಾಂಡ್‌ ಕೂಡ ಅವರನ್ನು ರಾಜೀನಾಮೆ ನೀಡಿ ಎಂದು ತಿಳಿಸಿಲ್ಲ. ಮತ್ತೇಕೆ ಸಿಎಂ ಬದಲಾವಣೆಯ ಪ್ರಶ್ನೆ.

ಹುಬ್ಬಳ್ಳಿ:

ಮುಖ್ಯಮಂತ್ರಿ ಸ್ಥಾನಕ್ಕೆ ಯಾರಿಂದಲೂ ಪೈಪೋಟಿ ನಡೆಯುತ್ತಿಲ್ಲ. ಪೈಪೋಟಿ ನಡೆಯಲು ಮುಖ್ಯಮಂತ್ರಿ ಸ್ಥಾನವೇನೂ ಖಾಲಿಯಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ಕುರಿತು ಚರ್ಚೆ ನಡೆಯುತ್ತಿಲ್ಲ. ಸಿಎಂ ಸ್ಥಾನಕ್ಕೆ ಪೈಪೋಟಿಯೂ ಇಲ್ಲ ಎಲ್ಲವೂ ಮಾಧ್ಯಮಗಳ ಸೃಷ್ಟಿ ಎಂದರು.

ಸತೀಶ ಜಾರಕಿಹೊಳಿ ಅವರು ರೇಸ್‌ನಲ್ಲಿದ್ದಾರಲ್ಲ ಎಂಬ ಪ್ರಶ್ನೆಗೆ, ಎಲ್ಲವೂ ಮಿಡಿಯಾದವರೇ ಸೃಷ್ಟಿಸಿದ್ದು. ಅವರೇನಾದರೂ ಮಿಡಿಯಾದವರನ್ನು ಕರೆದು ನಾನು ಸಿಎಂ ರೇಸ್‌ನಲ್ಲಿದ್ದೇನೆ ಎಂದು ಹೇಳಿದ್ದಾರೆಯೇ? ದೆಹಲಿಗೆ ಹೋಗಿ ಬಂದವರೆಲ್ಲರೂ ಲಾಬಿ ನಡೆಸುತ್ತಿದ್ದಾರೆ ಎಂಬಂತಾಗಿದೆ ಈಗ ಎಂದರು.

ಎಐಸಿಸಿ ಅಧ್ಯಕ್ಷರಾಗಲಿ, ಕೆಪಿಸಿಸಿ ಅಧ್ಯಕ್ಷರಾಗಲಿ ಸಿಎಂ ಬದಲಾವಣೆ ಕುರಿತು ಹೇಳಿಯೇ ಇಲ್ಲ. ಹೈಕಮಾಂಡ್‌ ಕೂಡ ಅವರನ್ನು ರಾಜೀನಾಮೆ ನೀಡಿ ಎಂದು ತಿಳಿಸಿಲ್ಲ. ಮತ್ತೇಕೆ ಸಿಎಂ ಬದಲಾವಣೆಯ ಪ್ರಶ್ನೆ. ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದ ಅವರು, ಬಿಜೆಪಿಯವರು ಒಂದು ಬಾರಿಯೂ 113 ಸ್ಥಾನ ಗೆದ್ದಿಲ್ಲ. ಅವರು ಅಧಿಕಾರ ಸಿಕ್ಕರೆ ಐದು ವರ್ಷ ಆಡಳಿತ ನಡೆಸಿದ ಉದಾಹರಣೆಯೇ ಇಲ್ಲ. ಅಧಿಕಾರ ಇದ್ದಾಗ ಪೂರ್ಣ ಮಾಡಲ್ಲ. ಅಧಿಕಾರ ಇಲ್ಲದಾಗ ಅಧಿಕಾರ ಬೇಕು ಎನ್ನುವುದು ಬಿಜೆಪಿಯವರ ಜಾಯಮಾನ ಎಂದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಜಾತಿ ಜನಗಣತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಈಗಾಗಲೇ ಸಿಎಂ ಹೇಳಿದ್ದಾರೆ. ಸಚಿವ ಸಂಪುಟದಲ್ಲಿ ಈ ಕುರಿತು ಸುದೀರ್ಘವಾಗಿ, ಮುಕ್ತವಾಗಿ ಚರ್ಚೆ ನಡೆಯುತ್ತದೆ. ಆ ಬಳಿಕ ಏನು ಮಾಡಬೇಕು ಎಂಬುದನ್ನು ನಿರ್ಧಾರವಾಗಲಿದೆ ಎಂದರು.