ಸಿಯುಕೆ ಸುತ್ತೋಲೆಯಲ್ಲಿ ಯಾವುದೇ ಗೊಂದಲವಿಲ್ಲ

| Published : Mar 29 2024, 12:52 AM IST

ಸಾರಾಂಶ

ಪಿಎಚ್‍ಡಿ ಶಿಕ್ಷಣದಲ್ಲಿ ಶೈಕ್ಷಣಿಕ ಮಾನದಂಡ ಮತ್ತು ನಿಬಂಧನೆ ಎತ್ತಿಹಿಡಿಯಲು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಬದ್ಧವಾಗಿದ್ದು ಆ ನಿಟ್ಟಿನಲ್ಲಿ ಐದು ವರ್ಷಗಳ ಕಾಲಮಿತಿ ಮುಗಿಸಿದವರ ಪಿಎಚ್‍ಡಿ ನೋಂದಣಿಯು ಸ್ವಯಂಚಾಲಿತವಾಗಿ ರದ್ದುಗೊಳ್ಳುವ ಕುರಿತು ಇದೇ ಮಾ.22ರಂದು ಸುತ್ತೋಲೆ ಹೊರಡಿಸಿತ್ತು. ಅದಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯವು ಈ ಕೆಳಗಿನ ಸ್ಪಷ್ಟೀಕರಣ ನೀಡಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ ಆಳಂದ

ಪಿಎಚ್‍ಡಿ ಶಿಕ್ಷಣದಲ್ಲಿ ಶೈಕ್ಷಣಿಕ ಮಾನದಂಡ ಮತ್ತು ನಿಬಂಧನೆ ಎತ್ತಿಹಿಡಿಯಲು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಬದ್ಧವಾಗಿದ್ದು ಆ ನಿಟ್ಟಿನಲ್ಲಿ ಐದು ವರ್ಷಗಳ ಕಾಲಮಿತಿ ಮುಗಿಸಿದವರ ಪಿಎಚ್‍ಡಿ ನೋಂದಣಿಯು ಸ್ವಯಂಚಾಲಿತವಾಗಿ ರದ್ದುಗೊಳ್ಳುವ ಕುರಿತು ಇದೇ ಮಾ.22ರಂದು ಸುತ್ತೋಲೆ ಹೊರಡಿಸಿತ್ತು. ಅದಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯವು ಈ ಕೆಳಗಿನ ಸ್ಪಷ್ಟೀಕರಣ ನೀಡಿದೆ.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವ್ಯವಹಾರಗಳ ನಿರ್ವಹಣೆಗೆ ಸಂಬಂದಿಸಿದ ಆರ್ಡಿನೆನ್ಸ್ ನಂ.54, ಸೆಕ್ಷನ್ 28(1)(ಡಿ) ಪ್ರಕಾರ, ಪಿಎಚ್‌ಡಿ ಅಭ್ಯರ್ಥಿಗಳು ದಾಖಲಾತಿ ದಿನಾಂಕದಿಂದ ಪ್ರಬಂಧ ಸಲ್ಲಿಕೆ ಒಳಗೊಂಡಂತೆ ಎಂಟು ಸೆಮಿಸ್ಟರ್‌ಗಳಲ್ಲಿ ತಮ್ಮ ಸಂಶೋಧನಾ ಕಾರ್ಯ ಪೂರ್ಣಗೊಳಿಸಬೇಕು. ಒಂದುವೇಳೆ ಸಮಯದ ವಿಸ್ತರಣೆ ಬೇಕಾದಲ್ಲಿ ಅಭ್ಯರ್ಥಿಯ ಔಪಚಾರಿಕ ಮನವಿ ಆಧಾರದ ಮೇಲೆ ಡಾಕ್ಟರಲ್ ರಿಸರ್ಚ್ ಕಮಿಟಿ ಮತ್ತು ಕಮಿಟಿ ಫಾರ್ ಅಡ್ವಾನ್ಸ್‌ಡ್‌ ಸ್ಟಡೀಸ್ ಮತ್ತು ರಿಸರ್ಚ್ ಸಲಹೆ ಮೇರೆಗೆ ಎರಡು ಹೆಚ್ಚುವರಿ ಸೆಮಿಸ್ಟರ್‌ಗಳವರೆಗೆ ಸಮಯ ನೀಡಲಾಗುತ್ತದೆ. ಅಂದರೆ ಒಟ್ಟಾರೆಯಾಗಿ ನೋಂದಣಿಯಾದ ದಿನದಿಂದ ಐದು ವರ್ಷಗಳಲ್ಲಿ ಸಂಶೋಧನಾ ಕಾರ್ಯ ಮುಗಿಸಿ ಪ್ರಬಂಧ ಸಲ್ಲಿಸಬೇಕು. ಇಲ್ಲವಾದಲ್ಲಿ ಅವರ ನೋಂದಣಿ ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ ಎಂದು ತಿಳಿಸಿದೆ.

ದಾಖಲೆಗಳನ್ನು ಪರಿಶೀಲಿಸಲಾಗಿ ಜುಲೈ/ಆಗಸ್ಟ್ 2018ರಲ್ಲಿ ಮತ್ತು ಅದಕ್ಕಿಂತಲೂ ಪೂರ್ವದಲ್ಲಿ ಪ್ರವೇಶ ಪಡೆದಿರುವ ಕೆಲ ಸಂಶೋಧನಾ ವಿಧ್ಯಾರ್ಥಿಗಳು ಜುಲೈ/ಆಗಸ್ಟ್ 2023ರ ವೇಳೆಗೆ ಮಂಜೂರು ಮಾಡಲಾದ ಎರಡು ಸೆಮಿಸ್ಟರ್‌ಗಳ ವಿಸ್ತರಣೆ ಒಳಗೊಂಡಂತೆ ನಿಗದಿತ ಹತ್ತು-ಸೆಮಿಸ್ಟರ್ ಮಿತಿ ಮೀರಿದ್ದನ್ನು ಗಮನಿಸಲಾಗಿದೆ.

ಮಾ.22 ರಂದು ಹೊರಡಿಸಲಾದ ಸುತ್ತೋಲೆಯು ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯದ ಆರ್ಡಿನೆನ್ಸ್‌ನ್ನು ಆಧರಿಸಿದೆ ಎಂದು ಸ್ಪಷ್ಟಪಡಿಸಲಾಗುತ್ತಿದೆ. ಈ ಆರ್ಡಿನೆನ್ಸ್ 2012ರಿಂದ ಜಾರಿಯಲ್ಲಿದೆ. ವಿಶ್ವವಿದ್ಯಾನಿಲಯವು ಯಾವುದೇ ಹೊಸ ನಿಯಮಗಳನ್ನು ಮಾಡಿಲ್ಲ; ಬದಲಿಗೆ, ಅಸ್ತಿತ್ವದಲ್ಲಿರುವ ಆರ್ಡಿನೆನ್ಸ್ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ.

ಮೇಲೆ ತಿಳಿಸಲಾದ ಆರ್ಡಿನೆನ್ಸ್ ನಿಬಂಧನೆಗೆ ಅನುಗುಣವಾಗಿ, ಜುಲೈ/ಆಗಸ್ಟ್ 2018ರಲ್ಲಿ ಮತ್ತು ಅದಕ್ಕಿಂತಲೂ ಪೂರ್ವದಲ್ಲಿ ಪಿಎಚ್‍ಡಿ ಪ್ರವೇಶ ಪಡೆದ ಅಭ್ಯರ್ಥಿಗಳ ನೋಂದಣಿ ತಕ್ಷಣವೇ ಜಾರಿಗೆ ಬರುವಂತೆ ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ ಎಂದು ತಿಳಿಸಲಾಗಿದೆ. ಇದೇನು ಹೊಸದಲ್ಲ ಈ ಹಿಂದೆಯೂ ವಿದ್ಯಾರ್ಥಿಗಳಿಗೆ ಇಂತಹ ಸುತ್ತೋಲೆಗಳನ್ನು ಹೊರಡಿಸಲಾಗಿದೆ.

ಮೇಲಿನ ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾದ ಶೂನ್ಯ ಸೆಮಿಸ್ಟರ್‌ನ ಪರಿಗಣನೆಯು ಪ್ರಸ್ತುತ ಇನ್ನೂ ತಮ್ಮ ಪ್ರಬಂಧವನ್ನು ಸಲ್ಲಿಸದ ಹಾಗು ಐದು ವರ್ಷ ಪೂರೈಸಿದ ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ದಿನಾಂಕ, 3ನೇ ಡಿ. 2020 ಮತ್ತು 1ನೇ ಡಿ. 2021ರ ತನ್ನ ಸುತ್ತೋಲೆಯಲ್ಲಿ ಯುಜಿಸಿ ಆರು ತಿಂಗಳ ವಿಸ್ತರಣೆಯು 31ನೇ ಡಿ.2020 ರಿಂದ 30ನೇ ಜೂನ್ 2021 ಮತ್ತು 31ನೇ ಡಿಸೆಂಬರ್, 2021 ರಿಂದ 30ನೇ ಜೂನ್, 2022ರ ವರೆಗೆ ಆ ಸಂದರ್ಭದಲ್ಲಿ ತಮ್ಮ ಪ್ರಬಂಧ ಸಲ್ಲಿಸಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.

ಆದಾಗ್ಯೂ, ಈ ಅವಧಿಯ ನಂತರ ವಿಸ್ತರಣೆಯನ್ನು ವಿಶ್ವವಿದ್ಯಾಲಯಗಳಿಗೆ ಅವರ ನಿಯಮಗಳನುಸಾರ ಆಯಾ ವಿಶ್ವವಿದ್ಯಾಲಯಕ್ಕೆ ಬಿಡಲಾಗಿದೆ. ಹೀಗಾಗಿ 2024ರ ಮಾರ್ಚ್ 22ರಂದು ವಿಶ್ವವಿದ್ಯಾಲಯ ಹೊರಡಿಸಿರುವ ಸುತ್ತೋಲೆಯಲ್ಲಿ ಯಾವುದೇ ಗೊಂದಲವಿಲ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿ ಕುಲಸಚಿವರು ಸ್ಪಷ್ಟಪಡಿಸಿದ್ದಾರೆ.