ಮನ್ಮುಲ್ ಚುನಾವಣೆ ನಿರ್ದೇಶಕರ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲವಿಲ್ಲ: ಜಾನಕೀರಾಂ

| Published : Dec 04 2024, 12:30 AM IST

ಮನ್ಮುಲ್ ಚುನಾವಣೆ ನಿರ್ದೇಶಕರ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲವಿಲ್ಲ: ಜಾನಕೀರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಮತದಾನದ ಹಕ್ಕು ಹೊಂದಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲಾ ಡೆಲಿಗೆಟ್ಸ್ ಗಳನ್ನು ಈಗಾಗಲೇ ಭೇಟಿ ಮಾಡಿ ಮತಯಾಚನೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು, ಚುನಾವಣೆಯಲ್ಲಿ ನಮ್ಮ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಆಯ್ಕೆಯಾಗುವುದು ಖಚಿತವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ತಾಲೂಕಿನ ಎರಡು ಸ್ಥಾನಗಳಿಗೆ ಶಾಸಕ ಎಚ್.ಟಿ.ಮಂಜು ಮತ್ತು ಬೋರ್‌ವೆಲ್ ಗುತ್ತಿಗೆದಾರ ನಾಟನಹಳ್ಳಿ ಮಹೇಶ್ ಅವರ ಹೆಸರು ಅಂತಿಮವಾಗಿದೆ. ಮತದಾರರು ಮತ್ತು ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.2ರಂದು ಮನ್ಮುಲ್ ಚುನಾವಣೆ ನಡೆಯಲಿದೆ. ಚುನಾವಣೆಗೆ ತಾಲೂಕಿನಿಂದ ಶಾಸಕ ಎಚ್.ಟಿ.ಮಂಜು ಮತ್ತು ನಾಟನಹಳ್ಳಿ ಮಹೇಶ್ ಪಕ್ಷದ ಅಭ್ಯರ್ಥಿಗಳಾಗಿ ಈಗಾಗಲೇ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರು.

ಮತದಾನದ ಹಕ್ಕು ಹೊಂದಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಎಲ್ಲಾ ಡೆಲಿಗೆಟ್ಸ್ ಗಳನ್ನು ಈಗಾಗಲೇ ಭೇಟಿ ಮಾಡಿ ಮತಯಾಚನೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು, ಚುನಾವಣೆಯಲ್ಲಿ ನಮ್ಮ ಪಕ್ಷದ ಇಬ್ಬರೂ ಅಭ್ಯರ್ಥಿಗಳು ಆಯ್ಕೆಯಾಗುವುದು ಖಚಿತವಾಗಿದೆ ಎಂದರು.

ಈಗಾಗಲೇ ಕಾರ್ಯಕರ್ತರ ಸಮ್ಮುಖದಲ್ಲಿ ಇಬ್ಬರ ಹೆಸರನ್ನು ಪ್ರಕಟಿಸಲಾಗಿದೆ. ಇದರ ಅರಿವಿದ್ದರೂ ಹಾಲಿ ನಿರ್ದೇಶಕ ಡಾಲು ರವಿ ಮತ್ತು ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್ ಅವರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮನ್ನು ಅಭ್ಯರ್ಥಿಗಳೆಂದು ಘೋಷಿಸಿದ್ದು ಅವರ ಬೆಂಬಲ ನಮಗಿದೆ ಎಂದು ಹಳೆಯ ವಿಡಿಯೋ ಹರಿಯ ಬಿಡುತ್ತಾ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಶಾಸಕ ಎಚ್.ಟಿ.ಮಂಜು ಮನ್ಮುಲ್ ಹಾಲಿ ನಿರ್ದೇಶಕರಾಗಿದ್ದಾರೆ. ಅವರಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಎಲ್ಲಾ ವಿಚಾರಗಳ ಅರಿವಿದೆ. ಶಾಸಕರ ಜೊತೆ ಎರಡನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಪಕ್ಷ ಎಂ.ಬಿ.ಹರೀಶ್ ಅವರಿಗೆ ಅವಕಾಶ ನೀಡಿತ್ತು. ಆದರೆ, ಅವರು ಸ್ಪರ್ಧೆ ವಿಚಾರದಲ್ಲಿ ತಮ್ಮ ಸ್ಪಷ್ಟ ನಿಲುವು ಪ್ರದರ್ಶಿಸಲಿಲ್ಲ ಎಂದರು.

ಮಾಜಿ ಸಿಎಂ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆ ನಂತರ ತಮ್ಮ ಸ್ಪರ್ಧೆ ನಿಲುವು ತಿಳಿಸುವುದಾಗಿ ಎಂ.ಬಿ.ಹರೀಶ್ ಹೇಳಿದ್ದರು. ಆದರೆ, ಅದರಂತೆ ಎಚ್ಡಿಕೆ ಭೇಟಿ ಮಾಡಿ ಸ್ಪರ್ಧೆಯ ನಿರ್ಧಾರ ತಿಳಿಸಲಿಲ್ಲ. ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗಲಿಲ್ಲ. ಹೀಗಾಗಿ ಶಾಸಕ ಎಚ್.ಟಿ.ಮಂಜು ಅವರ ಜೊತೆ ನಾಟನಹಳ್ಳಿ ಮಹೇಶ್ ಅವರನ್ನು ಕಣಕ್ಕಿಳಿಸಿದೆ ಎಂದರು.

ತಮ್ಮ ಸ್ವಯಂಕೃತ ತಪ್ಪುಗಳಿಂದ ಪಕ್ಷದ ಟಿಕೆಟ್ ತಪ್ಪಿಸಿಕೊಂಡಿರುವ ಎಂ.ಬಿ.ಹರೀಶ್ ಶಾಸಕರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕಾರಣ ಮಾಡುವ ಬದಲು ಗೊಂದಲದ ರಾಜಕಾರಣ ಮಾಡಿದ್ದರಿಂದ ಪಕ್ಷ ಅವರನ್ನು ಕಣಕ್ಕಿಳಿಸಲಿಲ್ಲ ಎಂದು ಸ್ಪಷ್ಟಪಡಿಸಿದರು.

ಎಂ.ಬಿ.ಹರೀಶ್ ಕೆಲವು ಕಾಲ ಜೆಡಿಎಸ್ ಪಕ್ಷದ ಸೇವೆ ಮಾಡಿದ್ದಾರೆ. ಆದರೆ, ಅವರಿಗಿಂತಲೂ ಹೆಚ್ಚಿನ ಸೇವೆ ಮಾಡುತ್ತಿರುವ ಸಾವಿರಾರು ಕಾರ್ಯಕರ್ತರು ನಮ್ಮ ಪಕ್ಷದಲ್ಲಿದ್ದಾರೆ. ಜೆಡಿಎಸ್ ಯಾವುದೇ ವ್ಯಕ್ತಿಗಳ ಮೇಲೆ ನಿಂತಿಲ್ಲ. ನಮ್ಮದು ಮತದಾರರು ಮತ್ತು ಕಾರ್ಯಕರ್ತರ ಶಕ್ತಿಯ ಮೇಲೆ ನಿಂತಿರುವ ಪಕ್ಷ. ಕಾರ್ಯಕರ್ತರು ಯಾವುದೇ ಅಪಪ್ರಚಾರ ಮತ್ತು ಗೊಂದಲದ ಹೇಳಿಕೆಗೆ ಕಿವಿಗೊಡದೆ ಪಕ್ಷದ ಅಧಿಕೃತ ಅಭ್ಯರ್ಥಿಗಳಾದ ಶಾಸಕ ಎಚ್.ಟಿ.ಮಂಜು ಮತ್ತು ನಾಟನಹಳ್ಳಿ ಮಹೇಶ್ ಅವರ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.

ಈ ವೇಳೆ ತಾಪಂ ಮಾಜಿ ಸದಸ್ಯರಾದ ಬೂಕನಕೆರೆ ಹುಲ್ಲೇಗೌಡ, ಮಲ್ಲೇನಹಳ್ಳಿ ಮೋಹನ್, ಎ.ಎಂ.ಸಂಜೀವಪ್ಪ, ಬೀರವಳ್ಳಿ ಕೃಷ್ಣೇಗೌಡ, ಅಭ್ಯರ್ಥಿ ನಾಟನಹಳ್ಳಿ ಮಹೇಶ್, ಮುಖಂಡರಾದ ಬ್ಯಾಲದಕೆರೆ ನಂಜಪ್ಪ, ಎ.ಪಿ.ಎಂ.ಸಿ ಮಾಜಿ ನಿರ್ದೇಶಕ ಹೊನ್ನೇನಹಳ್ಳಿ ನಾಗರಾಜು, ಬೈರಾಪುರ ಹರೀಶ್, ಸಿಂದಘಟ್ಟ ಗಿರೀಶ್ ಸೇರಿದಂತೆ ಹಲವರಿದ್ದರು.