ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್‌ ಇರುವುದು ಅಧಿಕಾರಕ್ಕಲ್ಲ ಜನರ ಸೇವೆಗೆ. ಇದು ಸೇವಾಪಕ್ಷ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್‌ ಇರುವುದು ಅಧಿಕಾರಕ್ಕಲ್ಲ ಜನರ ಸೇವೆಗೆ. ಇದು ಸೇವಾಪಕ್ಷ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.

ಮಂಗಳವಾರ ನಗರಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಿರೀಕ್ಷಿತ ಉಪ ಚುನಾವಣೆಗಳ ಫಲಿತಾಂಶ ಬಂದಿವೆ. ಇದರಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗುವುದಿಲ್ಲ. ಮೂರು ವರ್ಷಗಳ ಕಾಲ ನುಡಿದಂತೆ ನಡೆದು ಜನಪರ ಆಡಳಿತ ನೀಡಿದ್ದೇವೆ. ಉಳಿದ ಇನ್ನೆರಡು ವರ್ಷಗಳ ಆಡಳಿತ ಅವಧಿಯಲ್ಲಿ ರಾಜ್ಯದ ಜನಹಿತದ ದೃಷ್ಟಿಯನ್ನಿಟ್ಟುಕೊಂಡು ಕೆಲಸ ಮಾಡುತ್ತೇವೆ. ಬಡವರೂ ಸೇರಿದಂತೆ ಜಾತ್ಯತೀತವಾಗಿ ಎಲ್ಲರಿಗೂ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಪಕ್ಷದ ವರಿಷ್ಠರ ಸೂಚನೆಯಂತೆ ಎಲ್ಲ ನಾಯಕರು ನಡೆದುಕೊಳ್ಳುತ್ತಾರೆ. ಅಧಿಕಾರಕ್ಕಾಗಿ ಅಭಿಪ್ರಾಯ ಬೇಧವಿಲ್ಲ. ಶಾಸಕರು ತಂಡೋಪತಂಡವಾಗಿ ದೆಹಲಿ ಪ್ರವಾಸದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.ಜನಪರ ಆಡಳಿತಕ್ಕೆ ಮತ:

ಬಾಗಲಕೊಟೆ ಹಾಗೂ ದಾವಣಗೆರೆಯ ಮತದಾರರು ಜನಪರ ಆಡಳಿತಕ್ಕೆ ಮತ ನೀಡಿದ್ದಾರೆ. ಎಲ್ಲ ಸಮಾಜದವರ ಬೆಂಬಲ ಕಾರ್ಯಕರ್ತರ ಶ್ರಮದಿಂದ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ. ಪಕ್ಷದ ಸಿದ್ಧಾಂತ ಮತ್ತು ಸರ್ಕಾರದ ಸಾಧನೆಗೆ ದೊರೆತ ಜಯವಾಗಿದೆ. ಕಾಂಗ್ರೆಸ್‌ ಗೆಲುವಿನ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ಮುಖಂಡರ ಶ್ರಮವಿದೆ. ಮುಂಬರುವ 2028ರ ಚುನಾವಣೆಗಳಿಗೆ ಉಪ ಚುನಾವಣೆ ಫಲಿತಾಂಶಗಳು ಕಾಂಗ್ರೆಸ್‌ ಗೆಲುವಿನ ಸಂದೇಶ ನೀಡಿವೆ ಎಂದು ಹೇಳಿದರು.

ಪಂಚರಾಜ್ಯಗಳ ಚುನಾವಣೆ: ಕೇರಳದ ಪ್ರಜ್ಞಾವಂತ ಮತದಾರರು ಯುಡಿಎಫ್‌ಗೆ 89 ಸ್ಥಾನ ಗೆಲ್ಲಿಸಿಕೊಟ್ಟಿದ್ದಾರೆ. ತಮಿಳುನಾಡಿನ ಜನ ಟಿವಿಕೆಗೆ ಮನ್ನಣೆ ನೀಡಿದ್ದು, ಜನರು ಬದಲಾವಣೆ ಬಯಸಿದ್ದಾರೆ. ಪಶ್ಚಿಮ ಬಂಗಾಳ, ಪುದುಚೇರಿ, ಅಸ್ಸಾಂ ಫಲಿತಾಂಶಗಳನ್ನು ನೋಡಿದ್ದೇವೆ. ಚುನಾವಣೆಗಳು ಪಾರದರ್ಶಕವಾಗಿ ನಡೆಯಬೇಕು. ಚುನಾವಣೆ ಆಯೋಗ, ಇಡಿ, ಐಟಿ ಮುಂತಾದ ಸಂಸ್ಥೆಗಳು ಸಂವಿಧಾನ ಬದ್ಧವಾಗಿ ನಡೆಯಬೇಕು. ಕಾಂಗ್ರೆಸ್ ಮುಖಂಡರ ಮೇಲೆ ಇಡಿ ದಾಳಿಗಳಾಗುತ್ತವೆ ಎಂದ ಅವರು, ಬಿಜೆಪಿ ಸೇರಿದರೆ ಕ್ಲೀನ್‌ ಚಿಟ್‌ ನೀಡಲಾಗುತ್ತಿದೆ. ಇದ್ಯಾವ ನ್ಯಾಯ? ಪಾರದರ್ಶಕತೆ ಇಲ್ಲದಂತಾಗಿದೆ. ಆಮ್‌ ಆದ್ಮಿ ಪಕ್ಷದ 7 ಜನ ರಾಜ್ಯಸಭಾ ಸದಸ್ಯರು ಬಿಜೆಪಿ ಸೇರಿದ್ದು, ಎಎಪಿಯ ಶಾಸಕರಿಗೆ ಮಾಡಿದ ದ್ರೋಹ ಅಲ್ಲವೇ ಎಂದು ಪ್ರಶ್ನಿಸಿದರು.

ಪಶ್ಚಿಮ ಬಂಗಾಳದಲ್ಲಿ 27 ಲಕ್ಷ ಜನ ಮತದಾರರನ್ನು ಎಸ್‌ಐಆರ್‌ ನೆಪದಲ್ಲಿ ಪಟ್ಟಿಯಿಂದ ಕೈಬಿಡಲಾಗಿದೆ. ನುಸುಳುಕೋರರು ಎಂದು ಹೇಳುತ್ತಿರುವುದು ಕೇಂದ್ರ ಸರ್ಕಾರದ ವೈಫಲ್ಯವಲ್ಲವೇ, ಪೆಹಲ್ಗಾಮ್‌ ದಾಳಿ, ಕಾಶ್ಮೀರದ ದಾಳಿಗಳು ಭದ್ರತಾ ವ್ಯವಸ್ಥೆಯ ವೈಫಲ್ಯವಾಗಿದೆ. ಲಕ್ಷಾಂತರ ಮತದಾರರ ಹಕ್ಕು ಕಸಿದುಕೊಳ್ಳಲಾಗಿದೆ. ಇದಕ್ಕೆಲ್ಲ ಸಮಯ ಬಂದಾಗ ಉತ್ತರ ದೊರೆಯುತ್ತದೆ ಎಂದರು.

ಜಮಖಂಡಿ ಕ್ಷೇತ್ರದೊಂದಿಗೆ ಅವಿನಾಭಾವ ಸಂಬಂಧ; ಜಮಖಂಡಿ ಕ್ಷೇತ್ರಕ್ಕೂ ತಮಗೂ ಅವಿನಾಭಾವ ಸಂಬಂಧವಿದೆ. ಹಿಂದಿನ ಶಾಸಕರಾಗಿದ್ದ ದಿ.ಸಿದ್ದು ನ್ಯಾಮಗೌಡರು ಕ್ಷೇತ್ರದ ಅಭಿವೃದ್ಧಿಗೆ ಅಮೋಘ ಕೊಡುಗೆ ನೀಡಿದ್ದಾರೆ. ನಂತರದ ಚುನಾವಣೆಗಳಲ್ಲಿ ನನ್ನ ನೇತೃತ್ವವಿತ್ತು. ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಇಲ್ಲಿಯ ಜನರ ಸುಖ ದುಃಖದಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದರು.

ಅರಣ್ಯ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ನಗರಕ್ಕೆ ಭೇಟಿ ನೀಡಿದ್ದಾಗಿ ತಿಳಿಸಿದ ಸಚಿವ ಈಶ್ವರ ಖಂಡ್ರೆ, ಶರಣ ಚೇತನ ಬ್ಯಾಂಕ್‌, ಕಟ್ಟೆಕೆರೆ ಉದ್ಯಾನಕ್ಕೆ ಭೇಟಿ ನೀಡಿದ್ದರು. ನೂತನವಾಗಿ ನಿರ್ಮಿಸಲಾದ ಜಿರಲಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ಶಾಸಕ ಆನಂದ ನ್ಯಾಮಗೌಡ, ಮುಖಂಡರಾದ ಶ್ರೀಶೈಲ ದಳವಾಯಿ, ಮಹೇಶ ಕೋಳಿ ಸೇರಿದಂತೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಇದ್ದರು.