ಶತಮಾನೋತ್ಸವಕ್ಕೂ, ಕಾಡು ಗೊಲ್ಲರಿಗೂ ಸಂಬಂಧವಿಲ್ಲ

| Published : Apr 11 2025, 12:31 AM IST

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಯಾವದ ಸಂಘದ ಶತಮಾನೋತ್ಸವ ಕುರಿತಂತೆ ಕಾಡು ಗೊಲ್ಲರ ಸಂಗದ ರಾಜ್ಯಾಧ್ಯಕ್ಷ ರಾಜಣ್ಣ ಮಾತನಾಡಿದರು.

ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಸ್ಪಷ್ಟನೆ । ವಿಪ ಸದಸ್ಯ ಡಿ.ಟಿ ಶ್ರೀನಿವಾಸ್ ಮೇಲೆ ಆಕ್ರೋಶಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಏ.20 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಹಮ್ಮಿಕೊಳ್ಳಲಾದ ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘದ ಶತಮಾನೋತ್ಸವ ಹಾಗೂ ಯಾದವಾನಂದ ಸ್ವಾಮಿಗಳ 16ನೇ ಪಟ್ಟಾಭೀಷೇಕ ಮಹೋತ್ಸವಕ್ಕೂ, ಕಾಡುಗೊಲ್ಲರಿಗೂ ಸಂಬಂಧವಿಲ್ಲವೆಂದು ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಹೇಳಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡುಗೊಲ್ಲರು ಕರ್ನಾಟಕದ ಮೂಲ ನಿವಾಸಿಗಳು, ಬುಡಕಟ್ಟು, ಅಲೆಮಾರಿ ಆಚರಣೆ ಹೊಂದಿದ್ದಾರೆ. ಮೇಲ್ಮನೆ ಸದಸ್ಯ ಡಿ.ಟಿ.ಶ್ರೀನಿವಾಸ್ ತಮ್ಮ ಸ್ವಾರ್ಥ ಸಾಧನೆಗೋತ್ಸವ ಸಮಾವೇಶ ಮಾಡುತ್ತಿದ್ದಾರೆ. ಗೊಲ್ಲರೇ ಇಲ್ಲದ ಕಡೆ ಕಾರ್ಯಕ್ರಮ ಆಯೋಜಿಸಿದ್ದಾರೆಂದು ದೂರಿದರು.

ಕಾಡುಗೊಲ್ಲರಿಗೆ ಚಿತ್ರ ಮುತ್ತಿ, ಚಂದ ಮುತ್ತಿ, ಚಿತ್ರಯ್ಯ, ಕಾಟಯ್ಯ, ದೊಡೋನು ಜುಂಜಪ್ಪ, ಕ್ಯಾತಯ್ಯ, ಚಿಕ್ಕಣ್ಣ, ಸಿರಿಯಣ್ಣ, ಸೀಗಣ್ಣ, ಎತ್ತಪ್ಪ ಗೌರಸಂದ್ರದ ಮಾರಮ್ಮ, ಕರಿಯಮ್ಮ, ಕರಡಿ ಬುಳ್ಳಪ್ಪ, ಅಜ್ಜಪ್ಪ ಇತರೆ ನೂರಾರು ಸಾಂಸ್ಕೃತಿಕ ವೀರರು ಕುಲದೈವಗಳು ಹಟ್ಟಿ ಕಟ್ಟಿಕೊಂಡು ಶೀಲ ಮತ್ತು ಶೌಚದಿಂದ ದನ ಕರು, ಕುರಿ ಮೇಕೆ, ಎತ್ತು, ಎಮ್ಮೆ, ಕತ್ತೆ, ನಾಯಿಗಳೊಂದಿಗೆ ಬದುಕು ಕಟ್ಟಿಕೊಂಡಿದ್ದೇವೆ. ಕಾಡುಗೊಲ್ಲ, ಹಟ್ಟಿ ಗೊಲ್ಲ, ಅಡವಿಗೊಲ್ಲ ಇತರೆ ಉಪ ಪಂಗಡಗಳಲ್ಲಿ ಹುಟ್ಟಿನಿಂದ ಚಟ್ಟದವರೆಗೆ ಬುಡಕಟ್ಟು ಜೀವ ವೈವಿದ್ಯದಿಂದ ಇತರೆ ಎಲ್ಲಾ ಸಮುದಾಯಗಳ ಜೊತೆಗೆ ಸೌಹಾರ್ದದಿಂದ ಬಡತನದಲ್ಲಿ ಬದುಕುತ್ತಿದ್ದೇವೆ. ಹಾಗಾಗಿ ನಮಗೂ ಯಾದವರಿಗೂ ಸಂಬಂಧವಿಲ್ಲ ಎಂದು ಹೇಳಿದರು.ಸರ್ಕಾರ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶಿಫಾರಸ್ಸು ಮಾಡಿದ್ದು ಡಿ.ಟಿ.ಶ್ರೀನಿವಾಸ್ ಆರಂಭದಿಂದಲೂ ತೊಡರುಗಾಲು ಹಾಕಿದ್ದರು. ಕೊಡುಗೊಲ್ಲರ ಅಭಿವೃದ್ಧಿ ನಿಗಮ ಆರಂಭಿಸಲು ಬಿಟ್ಟಿರಲಿಲ್ಲ.

ಹಿಂದೊಮ್ಮೆ ಡಿ.ಟಿ ಶ್ರೀನಿವಾಸ್ ರಾಜ್ಯದಲ್ಲಿ ಕಾಡುಗೊಲ್ಲರು ಇಲ್ಲ ಎಂದು ನಮ್ಮನ್ನು ಮೂದಲಿಸಿದ್ದರು. ರಾಜ್ಯದ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು. ಹಾಸನ, ರಾಮನಗರ, ಮಂಡ್ಯ, ಮೈಸೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಇತರೆ ಜಿಲ್ಲೆಗಳಲ್ಲಿ ಕಾಡುಗೊಲ್ಲರು ನೆಲೆಸಿದ್ದಾರೆ.

ಕಾಡುಗೊಲ್ಲರನ್ನು ಎಸ್‌ಟಿ ಗೆ ಸೇರಿಸುವುದನ್ನು ವಿರೋಧಿಸಿದ್ದ ಕೆಲವರು ನಮ್ಮ ಸಮುದಾಯವನ್ನು ಮೆಟ್ಟಿಲಾಗಿ ಬಳಸಿಕೊಂಡು ರಾಜಕೀಯ, ಸಾಮಾಜಿಕ, ಆರ್ಥಿಕ ಇತರೆ ರಂಗಗಳಲ್ಲಿ ಅನ್ಯಾಯ ಮಾಡಿದ್ದಾರೆ ಎಂದು ರಾಜಣ್ಣ ಆಪಾದಿಸಿದರು.

ರಾಜ್ಯದ 12 ಜಿಲ್ಲೆಯ 40 ತಾಲೂಕು ಹಾಗೂ ಆಂಧ್ರಪ್ರದೇಶ ರಾಜ್ಯದ 3 ತಾಲೂಕುಗಳಲ್ಲಿ ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಂಡಿದ್ದೇವೆ. ಕಾಡುಗೊಲ್ಲರಿಗೆ ಪ್ರತ್ಯೇಕ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡಿದ್ದು, ಅದರಲ್ಲಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದೇವೆ. ವಾಸ್ತವಾಂಶ ಹೀಗಿರುವಾಗ ಡಿ.ಟಿ.ಶ್ರೀನಿವಾಸ್ ಸಮುದಾಯವ ತಮ್ಮ ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ. ಯಾದವ ಸಂಘಕ್ಕೂ, ಕಾಡು ಗೊಲ್ಲರಿಗೂ, ಸ್ವಾಮೀಜಿಗಳ ಪಟ್ಟಭಿಶೇಕ ಮಹೋತ್ಸವಕ್ಕೂ ಸಂಬಂಧ ಇಲ್ಲ. ನಾವ್ಯಾರೂ ಕೂಡ ಬೆಳಗಾವಿಗೆ ಹೋಗುತ್ತಿಲ್ಲವೆಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಲಿಂಗಪ್ಪ, ತಾಪಂ ಮಾಜಿ ಅಧ್ಯಕ್ಷ ಆನಂದ್, ಸಣ್ಣ ಪಾಲಯ್ಯ, ರಂಗಸ್ವಾಮಿ, ಚಿತ್ತಪ್ಪ, ದಾಸ್, ಜನಾರ್ದನ, ದೊಡ್ಡಪ್ಪ, ಬೋರಯ್ಯ, ಜಿಪಂ ಮಾಜಿ ಸದಸ್ಯ ಶಿವಮೂರ್ತಿ ಇದ್ದರು.