ಸಾರಾಂಶ
ಕನ್ನಡಪ್ರಭ ವಾರ್ತೆ ಕುದೂರು
ಯಾವ ನಾಡು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುತ್ತದೆಯೋ ಅಲ್ಲಿ ಭ್ರಷ್ಟಾಚಾರ ಇರುವುದಿಲ್ಲ ಎಂದು ಬೆಂಗಳೂರು ನಗರ ಜಿಲ್ಲೆ ಕಸಾಪ ಅಧ್ಯಕ್ಷ ಪ್ರಕಾಶ್ ಮೂರ್ತಿ ಹೇಳಿದರು.ಕುದೂರು ಗ್ರಾಮದ ಶ್ರೀ ರಂಗಣ್ಣ ಸಭಾಂಗಣದಲ್ಲಿ ಕರುನಾಡ ಕವಿಶೈಲ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಬದ್ಧತೆ, ಪ್ರಾಮಾಣಿಕತೆ, ಧ್ಯೇಯ, ಗುರಿ ಇದ್ದವರು ಮಾತ್ರ ಸಂಘಸಂಸ್ಥೆಗಳನ್ನು ಬಹುಕಾಲದವರೆಗೆ ನಡೆಸಿಕೊಂಡು ಹೋಗುತ್ತಾರೆ. ಕೇವಲ ಕಾಟಾಚಾರಕ್ಕೆ ಸಂಘ ಸಂಸ್ಥೆಗಳನ್ನು ಮಾಡಿದರೆ ಅವುಗಳ ನಿಜವಾದ ಉದ್ದೇಶ ಈಡೇರದೆ ಬಹುಬೇಗ ಕಣ್ಮುಚ್ಚುತ್ತವೆ ಎಂದರು.ಕರುನಾಡ ಕವಿಶೈಲ ವೇದಿಕೆಯ ಅಧ್ಯಕ್ಷ ಡಾ.ರಾಜ್ ಕುಮಾರ್ ಮಾತನಾಡಿ, ಕನ್ನಡ ಭಾಷೆಯ ಸೊಗಡನ್ನು ಯುವ ಮನಸುಗಳಿಗೆ ತಲುಪಿಸುವ ಕೆಲಸವಾಗಬೇಕು. ಮತ್ತು ಯುವ ಸಮುದಾಯ ಸ್ವಾರ್ಥದ ಹೊದಿಕೆಯನ್ನು ಸರಿಸಿ ಸಮಾಜ ಸೇವೆಗೆ ಮುನ್ನಡಿಯಿಡಬೇಕು. ಒಗ್ಗಟ್ಟಿನ ಶಕ್ತಿಯನ್ನು ಇತಿಹಾಸದಿಂದ ನಾವು ತಿಳಿದು ಪಾಠ ಕಲಿಯಬೇಕಾಗಿದೆ ಎಂದು ಹೇಳಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಚ್.ಜಗದೀಶ್ ಮಾತನಾಡಿ, ಸಿದ್ಧಗಂಗಾ ಶ್ರೀಗಳ ಆಶಯದಂತೆ ವಿದ್ಯೆ ಮತ್ತು ಪ್ರಸಾದ ಎರಡೂ ಸಂತೃಪ್ತಿಯಿದ್ದಾಗ ಮಾತ್ರ ವ್ಯಕ್ತಿಯ ಬೆಳವಣಿಗೆ ಆಗುತ್ತದೆ. ಇದರ ಜೊತೆಗೆ ಸಂಸ್ಕಾರದ ಸಿಹಿ ಸ್ಪರ್ಶವನ್ನು ನೀಡಿದ್ದೇ ಆದರೆ ನಿಜವಾದ ರಾಮರಾಜ್ಯ ನಿರ್ಮಾಣವಾಗುವುದರಲ್ಲಿ ಅನುಮಾನವೇ ಇಲ್ಲ ಎಂದರು.ಹೃದಯ ತಜ್ಞ ಡಾ.ದಿವಾಕರ್ ಮಾತನಾಡಿ, ಬಾಲ್ಯದ ದಿನಗಳ ನೆನಪು ಸದಾ ಹಸಿರಾಗಿರುವ ವ್ಯಕ್ತಿಗಳಿಗೆ ವಯಸಾಗುವುದೇ ಇಲ್ಲ. ತಾವು ಕಳೆದ ಮಧುರ ನೆನಪುಗಳನ್ನು ಮಾಡಿಕೊಂಡು ಇರುವ ದಿನಗಳಲ್ಲಿ ಅಂತಹ ಮಧುರತೆಯನ್ನು ಇಂದಿನ ತಲೆಮಾರಿಗೆ ಪರಿಚಯ ಮಾಡಿಕೊಟ್ಟರೆ ಹೃದಯದ ಕಾಯಿಲೆಗಳು ನಮ್ಮ ಹತ್ತಿರವೂ ಸುಳಿಯವುದಿಲ್ಲ ಎಂದು ಹೇಳಿದರು.
ಕರುನಾಡ ಕವಿಶೈಲ ಪ್ರಶಸ್ತಿ ಸ್ವೀಕರಿಸಿದ ಕಂಡಕ್ಟರ್ ಗಂಗರಾಜ್ ಮಾತನಾಡಿ, ರಾಜಾ ಹರಿಶ್ಚಂದ್ರನಿಗೆ ವಿಶ್ವಾಮಿತ್ರನ ಕಾಟ, ಸಾಲ ತೀರಿಸಿದ ಮೇಲೂ ಕೇಳಿದ ನಕ್ಷತ್ರಿಕ ತಿಂಗಳ ಬಾಟ, ಎಂಬ ಎರಡು ಸಾಲಿನ ಚುಟುಕುಗಳು ಬಹಳ ಬೇಗನೆ ಮನಸಿಗೆ ನಾಟುತ್ತವೆ. ಎಷ್ಟು ಹೊರಡಿಸಿದರೇನು ಸರ್ಕಾರಿ ಆಜ್ಞೆ, ನಮ್ಮಲ್ಲಿ ಮೂಡದ ಮೇಲೆ ಸಾಮಾಜಿಕ ಪ್ರಜ್ಞೆ, ಎಂಬ ಸಾಲುಗಳು ನಮ್ಮನ್ನು ಚುಚ್ಚುವಂತಾದರೆ ನಾವಿನ್ನೂ ಉಸಿರಾಡುತ್ತಿದ್ದೇವೆ ಎಂದರ್ಥ ಎಂದು ತಿಳಿಸಿದರು.ಪ್ರಶಸ್ತಿ ಸ್ವೀಕರಿಸಿದ ತಮಿಳುನಾಡು ಮತ್ತು ಪಾಂಡಿಚೇರಿ ಐಟಿ ಕೋರ್ಟ್ ನ ಜಡ್ಜ್ ರಘುನಾಥ್ ಮಾತನಾಡಿ, ಸಮುದ್ರ ಎಷ್ಟೇ ವಿಶಾಲವಾಗಿದ್ದರೂ ಅದು ತನ್ನ ದಡವನ್ನು ಮರೆಯುವುದಿಲ್ಲ. ಅಲೆಗಳ ರೂಪದಲ್ಲಿ ಬಂದು ದಡವನ್ನು ಮುತ್ತಿಟ್ಟು ಕೃತಜ್ಞತೆ ಸಲ್ಲಸುವಂತೆ ವಿದ್ಯಾವಂತರು ಯಾವುದೇ ಊರಿನಲ್ಲಿದ್ದರೂ ತಮ್ಮ ಹುಟ್ಟೂರು ಮತ್ತು ಓದಿದ ಶಾಲೆ, ಗೆಳೆಯರು, ಶಿಕ್ಷಕರನ್ನು ಮರೆಯಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರು, ಕುದೂರು, ಮಾಗಡಿ ಬಾಲಕಿಯರ ಭರತನಾಟ್ಯ ಕಣ್ಮನ ಸೆಳೆಯಿತು. ನಗೆಮಳೆ ರಾಜ ಚಂದ್ರಾಜ್ ರವರ ಗೀತೆ ಮತ್ತು ಹಾಸ್ಯ ನಗೆಗಡಲಲ್ಲಿ ಮುಳುಗಿಸಿತು.ಕರುನಾಡ ಕವಿಶೈಲ ವೇದಿಕೆಯ ಕಾರ್ಯದರ್ಶಿ ಗೋವಿಂದರಾಜ್, ಕಾರ್ಯಾಧ್ಯಕ್ಷ ಕೆ.ಟಿ.ವೆಂಕಟೇಶ್, ಡಾ.ಜಗದೀಶ್, ಚಂ.ದಯಾನಂದ್, ಪ್ರಸನ್ನ, ಆರ್ ಟಿಒ ಇನ್ಸ್ ಪೆಕ್ಟರ್ ವೆಂಕಟೇಶ್, ನಾಗೇಶ್ ರಾವ್, ಚಂದ್ರಿಕಾ, ಸವಿತ, ಭಾಗ್ಯ, ಮಹೇಶ್, ರಂಗನಾಥರಾವ್ ಮತ್ತಿತರರು ಭಾಗವಹಿಸಿದ್ದರು.