ಇಸ್ಪೀಟ್‌, ಮಟ್ಕಾ, ಅಕ್ರಮ ಮರಳು ದಂಧೆ ಹಾವಳಿ ತೀವ್ರ ಹೆಚ್ಚಾಗಿದೆ. ಆದರೆ, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ, ಅಬಕಾರಿ ಇಲಾಖೆ ಮಾತ್ರ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ.

ಕನ್ನಡಪ್ರಭ ವಾರ್ತೆ ಯಡ್ರಾಮಿ

ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಇಸ್ಪೀಟ್‌, ಬೆಟ್ಟಿಂಗ್‌, ಮಟ್ಕಾ , ಅಕ್ರಮ ಮರಳು ದಂಧೆ, ಕಲ್ಲು ಗಣಿಗಾರಿಕೆ, ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ.

ತಾಲೂಕು ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಇಸ್ಪೀಟ್‌, ಮಟ್ಕಾ, ಅಕ್ರಮ ಮರಳು ದಂಧೆ ಹಾವಳಿ ತೀವ್ರ ಹೆಚ್ಚಾಗಿದೆ. ಆದರೆ, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ, ಅಬಕಾರಿ ಇಲಾಖೆ ಮಾತ್ರ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ.

ಮಟ್ಕಾ ಹಾವಳಿ:

ಯಡ್ರಾಮಿ ಪಟ್ಟಣದಲ್ಲಿ ಮಟ್ಕಾ ಹಾವಳಿಯ ಕೇಂದ್ರಸ್ಥಾನವಾಗಿದೆ. ಗ್ರಾಮೀಣ ಭಾಗದ ಮರಿ ಮಟ್ಕಾ ಬುಕ್ಕಿಗಳು ನಾನಾ ಗ್ರಾಮಗಳಲ್ಲಿ ಇದ್ದಾರೆ. ಈ ಹಿಂದೆ ಚೀಟಿ ಮೂಲಕ ನಡೆಯುತ್ತಿದ್ದ ಮಟ್ಕಾ ಈಗ ಮೊಬೈಲ್‌ ಮೂಲಕ ಸಂಖ್ಯೆಗಳನ್ನು ಎಸ್‌.ಎಂ.ಎಸ್‌. ಮಾಡಿ ವ್ಯವಹಾರ ಮಾಡುತ್ತಿದ್ದಾರೆ. ಕಲ್ಯಾಣಿ ಮಟ್ಕಾ ಮಧ್ಯಾಹ್ನ 2ಕ್ಕೆ ಆರಂಭವಾಗಿ 5ಕ್ಕೆ ಕ್ಲೋಸ್‌ ಆಗುತ್ತದೆ. ಬಾಂಬೆ ಮಟ್ಕಾ ರಾತ್ರಿ 6ಕ್ಕೆ ಆರಂಭವಾದರೆ ಮೊದಲ ಅಂಕಿ 10ಕ್ಕೆ ಬಂದರೆ ಎರಡನೇ ಅಂಕಿ 12ಕ್ಕೆ ಬರುತ್ತದೆ. ಈ ಹೊತ್ತಿನಲ್ಲಿ ಕೊಟ್ಯಂತರ ರು. ಅವ್ಯವಹಾರ ನಡೆಯುತ್ತದೆ.

ಇಸ್ಪೀಟ್‌, ಮರಳು, ಕಲ್ಲು ಗಣಿಗಾರಿಕೆ, ಅಕ್ರಮ ಮಧ್ಯ, ದಂಧೆ:

ಯಡ್ರಾಮಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಗ್ರಾಮಗಳ ಹೊರವಲಯದ ಜಮೀನುಗಳಲ್ಲಿ ಬಹಿರಂಗವಾಗಿ ನೂರಾರು ಜನ ಇಸ್ಪೀಟ್‌ ಆಡುತ್ತಿದ್ದಾರೆ.

ಜೂಜಾಟ ಆಡುವಾಗ ಕೆಲ ಸಾರ್ವಜನಿಕರು ದೂರವಾಣಿ ಮೂಲಕ ಪೊಲೀಸರಿಗೆ ತಿಳಿಸಿದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಅಕ್ರಮ ಮರಳು ದಂಧೆ, ಕಲ್ಲು ಗಣಿಗಾರಿಕೆ ದಂಧೆ ಎಗ್ಗಿಲ್ಲದೇ ನಡೆದಿದೆ. ಕಂದಾಯ ಹಾಗೂ ಪೊಲೀಸ್ ಇಲಾಖೆ ಮಾಮೂಲು ಪಡೆಯುತ್ತಿರುವುದರಿಂದ ಕಲ್ಲು ಗಣಿಗಾರಿಕೆ, ಮರಳು ದಂಧೆಗೆ ಕಡಿವಾಣ ಬೀಳುತ್ತಿಲ್ಲ. ಜತೆಗೆ ಯಡ್ರಾಮಿ ಸೇರಿದಂತೆ

ನಾನಾ ಗ್ರಾಮಗಳಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಇಲ್ಲಿವರೆಗೂ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.