ಗ್ಯಾಸ್ ಬಳಕೆದಾರರಿಗೆ ಆಧಾರ್ ಬಯೋಮೆಟ್ರಿಕ್ ನೀಡಲು ಗಡುವು ಇಲ್ಲ

| Published : Dec 22 2023, 01:30 AM IST

ಗ್ಯಾಸ್ ಬಳಕೆದಾರರಿಗೆ ಆಧಾರ್ ಬಯೋಮೆಟ್ರಿಕ್ ನೀಡಲು ಗಡುವು ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಡಿ.31ರೊಳಗೆ ಆಧಾರ್‌ ದೃಢೀಕರಣ ಮಾಡದೆ ಇದ್ದರೆ ಅಡುಗೆ ಅನಿಲ ಸಬ್ಸಿಡಿ ಬರುವುದಿಲ್ಲ ಹಾಗೂ ಗ್ಯಾಸ್‌ ಸಂಪರ್ಕ ರದ್ದಾಗಲಿದೆ ಎಂಬಿತ್ಯಾದಿ ಸುಳ್ಳು ಸುದ್ದಿ ಜಾಲತಾಣಗಳಲ್ಲಿ ಹರಡಿದ್ದೇ ತಡ ಜನರು ಗ್ಯಾಸ್‌ ಏಜೆನ್ಸಿಗಳಿಗೆ ಧಾವಿಸಲು ಆರಂಭಿಸಿದ್ದಾರೆ. ಏಜೆನ್ಸಿಯ ಸಿಬ್ಬಂದಿ ತಿಳಿಹೇಳಿದರೂ ಜನರು ಹರಿಹಾಯ್ದ ಪ್ರಕರಣಗಳೂ ಅಲ್ಲಲ್ಲಿ ನಡೆದಿವೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಗೃಹ ಬಳಕೆಯ ಅಡುಗೆ ಅನಿಲ ಸಂಪರ್ಕ ಪಡೆದವರು ಆಧಾರ್‌ ಬಯೋಮೆಟ್ರಿಕ್‌ ಮಾಡಿಸುವ ವಿಚಾರ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದ್ದು, ಗ್ಯಾಸ್‌ ಏಜೆನ್ಸಿಗಳ ಕಚೇರಿಗಳೆದುರು ಕ್ಯೂ ನಿಲ್ಲುತ್ತಿದ್ದಾರೆ. ಆದರೆ, ಆಧಾರ್‌ ಬಯೋಮೆಟ್ರಿಕ್ ದೃಢೀಕರಣ ನೀಡಲು ಸರ್ಕಾರ ಯಾವುದೇ ಗಡುವು ನಿಗದಿಪಡಿಸಿಲ್ಲ. ಸಾರ್ವಜನಿಕರು ಅನವಶ್ಯಕ ಗೊಂದಲಕ್ಕೆ ಒಳಗಾಗಬಾರದು ಎಂದು ಆಹಾರ ಇಲಾಖೆಯ ಉಪನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.ಡಿ.31ರೊಳಗೆ ಆಧಾರ್‌ ದೃಢೀಕರಣ ಮಾಡದೆ ಇದ್ದರೆ ಸಬ್ಸಿಡಿ ಬರುವುದಿಲ್ಲ ಹಾಗೂ ಗ್ಯಾಸ್‌ ಸಂಪರ್ಕ ರದ್ದಾಗಲಿದೆ ಎಂಬಿತ್ಯಾದಿ ಸುಳ್ಳು ಸುದ್ದಿ ಜಾಲತಾಣಗಳಲ್ಲಿ ಹರಡಿದ್ದೇ ತಡ ಜನರು ಗ್ಯಾಸ್‌ ಏಜೆನ್ಸಿಗಳಿಗೆ ಧಾವಿಸಲು ಆರಂಭಿಸಿದ್ದಾರೆ. ಏಜೆನ್ಸಿಯ ಸಿಬ್ಬಂದಿ ತಿಳಿಹೇಳಿದರೂ ಜನರು ಹರಿಹಾಯ್ದ ಪ್ರಕರಣಗಳೂ ಅಲ್ಲಲ್ಲಿ ನಡೆದಿವೆ.ಮಂಗಳೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಗುರುವಾರವೂ ಉದ್ದನೆಯ ಸರತಿ ಸಾಲು ಕಂಡುಬಂದಿದೆ. ಇಲಾಖೆ ಸ್ಪಷ್ಟನೆ: ಗ್ಯಾಸ್ ಸಂಪರ್ಕ ಇರುವವರು ತಮ್ಮ ಏಜನ್ಸಿಗೆ ತೆರಳಿ ಬಯೋಮೆಟ್ರಿಕ್ ನೀಡಬಹುದಾಗಿದೆ. ಆದರೆ ಇಂತಿಷ್ಟೇ ದಿನದೊಳಗೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಯಾವುದೇ ಗಡುವು ವಿಧಿಸಿಲ್ಲ. ಮೊದಲ ಆದ್ಯತೆಯಲ್ಲಿ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ಪಡೆದಿರುವರು ಬಯೋಮೆಟ್ರಿಕ್ ನೀಡಬೇಕಾಗಿದೆ. ಉಳಿದಂತೆ, ಆಧಾರ್ ಸಂಖ್ಯೆ ದಾಖಲೆಯೊಂದಿಗೆ ಹಿಂದೆ ಗ್ಯಾಸ್ ಸಂಪರ್ಕ ಪಡೆದ ಫಲಾನುಭವಿಗಳು ಬಯೋಮೆಟ್ರಿಕ್ ನೀಡಬೇಕಾಗಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.