ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ

| Published : Feb 09 2025, 01:16 AM IST

ಸಾರಾಂಶ

ಸಾಗರ: ತಾಲೂಕಿನಲ್ಲಿ ಸಂಪರ್ಕ ಸೇತುವೆ ಹಾಗೂ ಕಾಲುಸಂಕ ನಿರ್ಮಾಣಕ್ಕೆ ೭೫ ಕೋಟಿ ರು. ಪ್ರಸ್ತಾವನೆಯನ್ನು ಉಪ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಸಾಗರ: ತಾಲೂಕಿನಲ್ಲಿ ಸಂಪರ್ಕ ಸೇತುವೆ ಹಾಗೂ ಕಾಲುಸಂಕ ನಿರ್ಮಾಣಕ್ಕೆ ೭೫ ಕೋಟಿ ರು. ಪ್ರಸ್ತಾವನೆಯನ್ನು ಉಪ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಪಟ್ಟಣದ ಜ್ಯೂನಿಯರ್ ಕಾಲೇಜು ಸಮೀಪ ಶನಿವಾರ ರಾಷ್ಟ್ರೀಯ ಹೆದ್ದಾರಿ ೨೦೬ ಕಾಮಗಾರಿ ವೀಕ್ಷಣೆ ಮಾಡಿ ಅವರು ಮಾತನಾಡಿದರು.

ಕ್ಷೇತ್ರವ್ಯಾಪ್ತಿಯ ಗ್ರಾಮೀಣ ಭಾಗದ ಸ್ಥಿತಿಗತಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿವರಿಸಿದ್ದರ ಹಿನ್ನೆಲೆಯಲ್ಲಿ ಸೇತುವೆ ಹಾಗೂ ಕಾಲುಸಂಕ ನಿರ್ಮಾಣಕ್ಕೆ ೭೫ ಕೋಟಿ ರು. ಅನುದಾನ ನೀಡಲು ಸಮ್ಮತಿಸಿದ್ದಾರೆ ಎಂದರು.ತಾಲೂಕಿನಲ್ಲಿ ಅಭಿವೃದ್ಧಿಗೆ ಅನುದಾನದ ಕೊರತೆ ಇಲ್ಲ. ಮುಖ್ಯಮಂತ್ರಿಗಳು ಒಟ್ಟು ೩೫ ಕೋಟಿ ರು. ಅನುದಾನ ನೀಡಿದ್ದರು. ಇದೀಗ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಮತ್ತೆ ೧೦ ಕೋಟಿ ರು. ಬಿಡುಗಡೆ ಮಾಡಿದ್ದಾರೆ. ಮಿನಿ ವಿಧಾನಸೌಧ ಅಭಿವೃದ್ಧಿಗೆ ೪.೫೦ ಕೋಟಿ ರು. ಬಿಡುಗಡೆಯಾಗಿದ್ದು, ಶೀಘ್ರದಲ್ಲೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಆನಂದಪುರ ಹೋಬಳಿಯಲ್ಲಿ ರಸ್ತೆ ನಿರ್ಮಾಣಕ್ಕೆ ಅತಿಹೆಚ್ಚು ಅನುದಾನ ನೀಡಲಾಗಿದ್ದು, ಯಡೇಹಳ್ಳಿಯಿಂದ ರಿಪ್ಪನಪೇಟೆ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದರು.ಈ ಬಾರಿ ಸುಮಾರು ೪.೫೦ ಲಕ್ಷ ಕೋಟಿ ರು. ಬಜೆಟ್ ಮಂಡಿಸುವ ಆಶಯವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿಗಳ ಅನುಷ್ಠಾನದ ನಡುವೆಯೂ ಅಭಿವೃದ್ಧಿಗೆ ಹಣದ ಕೊರತೆ ಆಗದಂತೆ ಮುಖ್ಯಮಂತ್ರಿಗಳು ವಿತ್ತಸಚಿವರಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಬಜೆಟ್‌ನಲ್ಲಿ ಶಿವಮೊಗ್ಗ ಜಿಲ್ಲೆ ಮತ್ತು ಸಾಗರ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಒತ್ತು ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದರು.ಬಿ.ಎಚ್.ರಸ್ತೆ ಅಗಲೀಕರಣ ತ್ವರಿತವಾಗಿ ಮುಗಿಸಲು ತಿಳಿಸಲಾಗಿದೆ. ಈಗಾಗಲೇ ಭೂಸ್ವಾಧೀನಕ್ಕೆ ಸುಮಾರು ೯೨ ಕೋಟಿ ರು. ಇರಿಸಿಕೊಳ್ಳಲಾಗಿದೆ. ಅಗಲೀಕರಣಕ್ಕೆ ಸಹಕಾರ ನೀಡುವಂತೆ ರಸ್ತೆ ಇಕ್ಕೆಲಗಳ ನಿವಾಸಿಗಳಿಗೆ ನೋಟಿಸ್ ನೀಡಿದ್ದು, ಅವರು ಸಹ ಪೂರಕವಾಗಿ ಸ್ಪಂದಿಸುತ್ತಿದ್ದಾರೆ ಎಂದರು.

ಪೌರಾಯುಕ್ತ ಎಚ್.ಕೆ.ನಾಗಪ್ಪ, ರಮೇಶ್.ಟಿ.ಪಿ, ಶ್ರೀನಿವಾಸ್ ಮೇಸ್ತ್ರಿ, ಮಹಾಬಲ ಕೌತಿ, ಮನೋಜ್ ಕುಗ್ವೆ, ಭವ್ಯ ಇನ್ನಿತರರು ಹಾಜರಿದ್ದರು.

ಶರಾವತಿ ಮುಳುಗಡೆ ಬಿಜೆಪಿ ಪಾಪದ ಕೂಸು ಸಾಗರ: ಶರಾವತಿ ಮುಳುಗಡೆ ಸಮಸ್ಯೆ ಬಿಜೆಪಿ ಪಾಪದ ಕೂಸು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕಾಗೋಡು ತಿಮ್ಮಪ್ಪನವರು ಒಂದು ಸಾವಿರ ಜನರಿಗೆ ಹಕ್ಕುಪತ್ರ ಕೊಟ್ಟಿದ್ದರು. ಹಾಲಪ್ಪ, ಜ್ಞಾನೇಂದ್ರ, ಅಶೋಕ ನಾಯ್ಕ್, ಸಂಸದ ರಾಘವೇಂದ್ರ ಮೌನವಾಗಿದ್ದರಿಂದಲೇ ಸುಪ್ರೀಂ ಕೋರ್ಟ್‌ನಿಂದ ತಡೆ ಬಂದಿದೆ. ನಮ್ಮ ಸರ್ಕಾರ ಇದ್ದಿದ್ದರೆ ಇಷ್ಟು ಹೊತ್ತಿಗೆ ಸಮಸ್ಯೆ ಬಗೆಹರಿಯುತ್ತಿತ್ತು. ಆರ್‌ಎಸ್‌ಎಸ್‌ ನವರು ಜನರಿಗೆ ಹಕ್ಕುಪತ್ರ ಕೊಡಲು ಬಿಡುವುದಿಲ್ಲ. ಶಾಸಕರು, ಸಚಿವರು ಅವರ ಮಾತು ಕೇಳುತ್ತಾರೆ. ಕಾಂಗ್ರೆಸ್ ಸರ್ಕಾರ ಮುಳುಗಡೆ ಸಂತ್ರಸ್ತರ ಸವಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.