ಸಾರಾಂಶ
ಕಾಂಗ್ರೆಸ್ ಆಡಳಿತಕ್ಕೆ ಬಂದಾಗೆಲ್ಲ ಹಿಂದೂಗಳ ಕಗ್ಗೊಲೆ: ಮಾಜಿ ಸಂಸದ
ಕನ್ನಡಪ್ರಭ ವಾರ್ತೆ ಉಡುಪಿಮೆರವಣಿಗೆಯಲ್ಲಿ ಪಾಕಿಸ್ತಾನದ ಧ್ವಜ ಹಿಡಿದವರನ್ನು, ವಿಧಾನಸಭೆಯ ಮೆಟ್ಟಿಲ ಮೇಲೆ ಪಾಕಿಸ್ತಾನಕ್ಕೆ ಜೈ ಎಂದವರನ್ನು ರಾಜ್ಯ ಸರ್ಕಾರ ಬಂಧಿಸಿಲ್ಲ. ಅಂತಹ ಭಯೋತ್ಪಾದಕ ಮಾನಸಿಕತೆಯವರಿಗೆ ಸರ್ಕಾರದ ಹೆದರಿಕೆ ಇಲ್ಲವಾಗಿರುವುದರಿಂದ ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿಯ ಕೊಲೆಯಾಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಡೆಯುತ್ತಿರುವುದೂ ಭಯೋತ್ಪಾದನೆ, ಮಂಗಳೂರಿನಲ್ಲಿ ನಡೆಯುತ್ತಿರುವುದೂ ಭಯೋತ್ಪಾದನೆ. ಆದ್ದರಿಂದ ಕಾಶ್ಮೀರಕ್ಕೂ ಮಂಗಳೂರಿಗೂ ವ್ಯತ್ಯಾಸವಿಲ್ಲವಾಗಿದೆ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಲೆಲ್ಲಾ ಭಯೋತ್ಪಾದಕರಿಗೆ ಶಕ್ತಿ ತುಂಬುವ ಕೆಲಸಗಳು ನಡೆಯುತ್ತಿವೆ. ರಾಜ್ಯದಲ್ಲಿ ಸಿದ್ದರಾಮಣ್ಣ ಸಿಎಂ ಆಗಿದ್ದಾಗಲೆಲ್ಲಾ ಹಿಂದೂಗಳ ಕಗ್ಗೊಲೆ ರಾಜಕಾರಣ ಮಾಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ದೀಪಕ್ ರಾವ್ ಹತ್ಯೆಯಾಗಿತ್ತು. ಈ ಬಾರಿ ಬೆಳಗಾವಿಯ ಜೈನ ಮುನಿ ಹತ್ಯೆಯಿಂದ ಸುಹಾಸ್ ಶೆಟ್ಟಿ ವರೆಗೆ ಕಗ್ಗೊಲೆಗಳಾಗಿವೆ ಎಂದವರು ಹೇಳಿದರು.ಹಿಂದೂಗಳ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದವರನ್ನು ಬಂಧಿಸುವ ಸರ್ಕಾರ, ತಮ್ಮದೇ ಗೃಹಸಚಿವರಿಗೆ ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಬೆದರಿಕೆ ಹಾಕಿದ ಮುಸ್ಲಿಂ ಮುಖಂಡರನ್ನು ಬಂಧಿಸುವ ತಾಕತ್ತು ಇದೆಯೇ ಎಂದು ನಳಿನ್ ಪ್ರಶ್ನಿಸಿದರು.ಯಾರಾದರೂ ಕಾಂಗ್ರೆಸ್ ನಾಯಕರು ಸುಹಾಸ್ ಮನೆಗೆ ಭೇಟಿ ನೀಡಿದರೆ, ಕಾಂಗ್ರೆಸಿನ ಮುಸ್ಲಿಂ ಮುಖಂಡ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ ನೀಡಿದ್ದಾರೆ. ಇಂತಹ ರಾಜಕೀಯಕ್ಕೆ ಕಾಂಗ್ರೆಸ್ ತುಪ್ಪ ಸುರಿಯುತ್ತಿದ್ದು, ಸರ್ಕಾರ ಇರುವುದೇ ಹಿಂದೂ ಸಮಾಜದ ಧಮನಕ್ಕಾಗಿ ಎಂಬುದು ಸ್ಪಷ್ಟವಾಗಿದೆ ಎಂದವರು ಆರೋಪಿಸಿದರು.ಮುಸ್ಲಿಮರಲ್ಲಿ ಟಾರ್ಗೆಟ್ ಗ್ರೂಪ್ ಅಂತ ಒಂದಿದೆ. ಅದರ ಮೊದಲ ಟಾರ್ಗೆಟ್ ಸುಹಾಸ್ ಶೆಟ್ಟಿ, ಇನ್ನೂ ಅನೇಕ ಹಿಂದೂ ನಾಯಕರಿಗೆ ಬೆದರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಂದಿವೆ. ತಕ್ಷಣ ಸರ್ಕಾರ ಹಿಂದೂ ನಾಯಕರಿಗೆ ರಕ್ಷಣೆ ಕೊಡುವ ವ್ಯವಸ್ಥೆ ಮಾಡಬೇಕು ಎಂದರು.ಕೋಮು ನಿಗ್ರಹ ದಳ ರಚನೆಯ ಸರ್ಕಾರದ ಯೋಚನೆಯೇ ತಪ್ಪಾಗಿದೆ. ಹಿಂದುಗಳ ವಿರುದ್ಧ ಬಳಸಲು, ಹಿಂದುಗಳ ಪರವಾಗಿ ಇರುವವರನ್ನು ಬಂಧಿಸಲು ಈ ಫೋರ್ಸ್ ರಚಿಸುತ್ತಿದ್ದಾರೆ. ಜನರಿಗೆ ಸರ್ಕಾರದ ಈ ಯೋಜನೆಯ ಬಗ್ಗೆ ನಂಬಿಕೆ ಇಲ್ಲ, ಎಲ್ಲಾ ಸಮುದಾಯಗಳ ಮೇಲೆಯೂ ಈ ಫೋರ್ಸ್ ಬಳಕೆ ಮಾಡಿ ನಂಬಿಕೆ ಉಳಿಸಲಿ ಎಂದರು.
----------------ಕಾಂಗ್ರೆಸ್ ಮಂತ್ರಿಗಳೆಲ್ಲಾ ರೌಡಿಗಳೇ?!ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ರೌಡಿಶೀಟರ್ ಎನ್ನಲು ಗೃಹಸಚಿವರೇನು ನ್ಯಾಯಾಧೀಶರೇ ಎಂದು ಪ್ರಶ್ನಿಸಿದ ಕಟೀಲ್, ಅದನ್ನು ತೀರ್ಮಾನ ಮಾಡಬೇಕಾಗಿರುವುದು ನ್ಯಾಯಾಲಯ, ಗೃಹ ಸಚಿವರಲ್ಲ ಎಂದು ನಳಿನ್, ಒಂದು ಕೇಸ್ ಇದ್ದ ಸಹಾಸ್ ಶೆಟ್ಟಿ ರೌಡಿಯಾದರೆ, ಕಾಂಗ್ರೆಸ್ ಸರ್ಕಾರದ ಎಲ್ಲ ಮಂತ್ರಿಗಳು ರೌಡಿಗಳೇ. ಅವರಲ್ಲಿ ಜೈಲಿಗೆ ಹೋಗಿ ಬಂದವರೇ ಜಾಸ್ತಿ ಇದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಕೆಶಿಯಿಂದ ಆರಂಭಿಸಿ ಎಲ್ಲರ ಮೇಲೆ ಕೇಸ್ ಇದೆ. ಹಾಗಿದ್ರೆ ಅವರೆಲ್ಲರೂ ರೌಡಿಗಳಾ? ಉತ್ತರ ಕೊಡಿ ಎಂದರು.