ಸಾರಾಂಶ
ಶಿವಕುಮಾರ ಕುಷ್ಟಗಿ
ಗದಗ : ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಯುಗಾದಿ ಹಾಗೂ ರಂಜಾನ್ ಒಂದೇ ಬಾರಿ ಬಂದಿದ್ದರಿಂದ ಎರಡೂ ಹಬ್ಬಗಳಿಗೂ ಅವಳಿ ನಗರದಲ್ಲಿ ಕುಡಿಯಲು ನೀರಿಲ್ಲ, ಬಳಸಲು ಕೂಡಾ ನೀರಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಅವಳಿ ನಗರದ ಜನರು ಹಬ್ಬ ಆಚರಿಸುವುದಾದರೂ ಹೇಗೆ ಎನ್ನುವ ಚಿಂತೆಗೀಡಾಗಿದ್ದಾರೆ.
ನಗರಕ್ಕೆ ನೀರು ಪೂರೈಕೆ ಮಾಡುವ ಸಿಂಗಟಾಲೂರು ಬ್ಯಾರೇಜ್‌ನಲ್ಲಿ ನೀರು ಬಹುತೇಕ ಡೆಡ್ ಸ್ಟೋರೇಜ್‌ಗೆ ತಲುಪಿದೆ. ಭದ್ರಾ ಡ್ಯಾಂನಿಂದ ತುಂಗಭದ್ರಾ ನದಿ ಪಾತ್ರಕ್ಕೆ ನೀರು ಹರಿಸುವ ನಿಟ್ಟಿನಲ್ಲಿ ಗದಗ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಸದ್ಯಕ್ಕೆ ನದಿಯಲ್ಲಿರುವ ನೀರು ಬಹಳ ದಿನಗಳಿಂದ ನಿಂತಲ್ಲಿಯೇ ನಿಂತಿರುವ ಹಿನ್ನೆಲೆಯಲ್ಲಿ ಮಲಿನವಾಗಿದೆ. ಹೀಗಾಗಿ ಪೂರೈಕೆ ಮಾಡುವ ನೀರು ಕೂಡಾ ವಾಸನೆಯುಕ್ತವಾಗಿವೆ.
ಏ. 8 ಯುಗಾದಿ ಅಮಾವಾಸ್ಯೆ, 9ರಂದು ಯುಗಾದಿ ಪಾಡ್ಯ, 11ರಂದು ರಂಜಾನ್ ಸೇರಿದಂತೆ ಸಾಲು ಸಾಲು ಹಬ್ಬಗಳಿವೆ. ಹಬ್ಬದ ದಿನಗಳಲ್ಲಿ ನೀರಿನ ಅವಶ್ಯಕತೆ ಅತ್ಯಂತ ಪ್ರಮುಖವಾಗಿರುತ್ತದೆ. ಕನಿಷ್ಠ ಹಬ್ಬಗಳ ಸಂದರ್ಭದಲ್ಲಾದರೂ ಸಾರ್ವಜನಿಕರು ನೀರಿಗೆ ಪರದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ನಗರಸಭೆಯ ಅಧಿಕಾರಿಗಳು, ಜಿಲ್ಲಾಡಳಿತ ಗಮನ ನೀಡಬೇಕಿದೆ.
15ರಿಂದ 20 ದಿನಕ್ಕೆ ನೀರು: ಬೇಸಿಗೆ ಪೂರ್ವದಲ್ಲಿಯೇ ಅವಳಿ ನಗರದಲ್ಲಿ 15ರಿಂದ 20 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಪ್ರಸ್ತುತ ಅದು ಇನ್ನು ಹೆಚ್ಚಾಗಿದ್ದು, ಕೆಲವು ಭಾಗಗಳಲ್ಲಿ 30 ದಿನ ಕಳೆದರೂ ಕುಡಿಯುವ ನೀರು ಸಿಗುತ್ತಿಲ್ಲ. ಇದರಿಂದ ಜನರು ವ್ಯಾಪಕ ತೊಂದರೆ ಅನುಭವಿಸುತ್ತಿದ್ದಾರೆ. ಬಿರು ಬಿಸಿಲಿನ ತಾಪದ ಸಮಸ್ಯೆಯೊಂದಿಗೆ ನೀರಿನ ಸಮಸ್ಯೆ ಅವಳಿ ನಗರದ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಸದ್ಯ ಪೂರೈಕೆ ಮಾಡುತ್ತಿರುವ ನೀರು ವಾಸನೆ ಬರುತ್ತಿದ್ದರಿಂದ ಜನರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆಶ್ರಯಿಸಿದ್ದಾರೆ. ಹೀಗಾಗಿ ಪ್ರತಿಯೊಂದು ಶುದ್ಧ ನೀರಿನ ಘಟಕಗಳ ಮುಂದೆ ವ್ಯಾಪಕ ಸರದಿ ಸಾಲು ಉಂಟಾಗುತ್ತಿದೆ. ದುಡಿಯುವ ವರ್ಗ ಉದ್ಯೋಗ ಬಿಟ್ಟು ಕುಡಿಯುವ ನೀರು ತರುವಂತಾಗಿದೆ.
41 ಡಿಗ್ರಿ ಉಷ್ಣಾಂಶ: ಇನ್ನೊಂದೆಡೆ ಜಿಲ್ಲೆಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಏ. 5ರಂದು 41 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಬಿಸಿಲಿನ ತಾಪಕ್ಕೆ ಮನೆಯಿಂದ ಹೊರಬರದಂತಹ ಸ್ಥಿತಿ. ಕಳೆದ 20 ದಿನಗಳಿಂದ ಸೃಷ್ಟಿಯಾಗಿರುವ ನೀರಿನ ಬಿಕ್ಕಟ್ಟು ಜನರನ್ನು ತಲ್ಲಣಗೊಳಿಸಿದೆ.
ಭದ್ರಾ ಜಲಾಶಯದಿಂದ ಮಾ. 29ರ ರಾತ್ರಿಯಿಂದಲೇ ಪ್ರತಿದಿನ 3 ಸಾವಿರ ಕ್ಯುಸೆಕ್‌ನಂತೆ ನೀರು ಹರಿಸಲಾಗುತ್ತಿದೆ. ಸದ್ಯಕ್ಕೆ ನೀರು ಹರಿಹರದ ವರೆಗೂ ಬಂದಿದೆ. ಆದರೆ ಈಗ ಹರಿವಿನ ವೇಗ ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರತಿ ದಿನ 5 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ. ಸಿಂಗಟಾಲೂರು ಬ್ಯಾರೇಜ್‌ನಿಂದ ನೀರು 30 ಕಿಮೀ ದೂರದಲ್ಲಿದ್ದು, ಎರಡು ಮೂರು ದಿನಗಳ ಬೇಕಾಗಬಹುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.