ಶಸ್ತ್ರಾಸ್ತ್ರ ಠೇವಣಿ ಆದೇಶದಲ್ಲಿ ವಿನಾಯಿತಿ ಇಲ್ಲ: ಜಿಲ್ಲಾಧಿಕಾರಿ

| Published : Mar 31 2024, 02:03 AM IST

ಸಾರಾಂಶ

ಲೋಕಸಭೆ ಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಶಸ್ತ್ರಾಸ್ತ್ರ ಪರವಾನಗಿದಾರರು ಕಡ್ಡಾಯವಾಗಿ ತಮ್ಮ ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಬೇಕೆಂಬ ಆದೇಶವಿದ್ದು, ಈ ಆದೇಶದಲ್ಲಿ ಯಾವುದೇ ವಿನಾಯತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳನ್ನು ನಿಷೇಧಿಸಲಾಗಿದೆ. ಈ ನಿಷೇಧವು ಸರ್ಕಾರಿ ಕರ್ತವ್ಯಕ್ಕೆ ಹಾಗೂ ಬ್ಯಾಂಕ್ ಸೆಕ್ಯೂರಿಟಿ ಸಂಸ್ಥೆಗಳ ಭದ್ರತೆ ಹಾಗೂ ಸುರಕ್ಷತಾ ಸಿಬ್ಬಂದಿ ಕರ್ತವ್ಯ ನಿರ್ವಹಣೆ ವೇಳೆ ಶಸ್ತ್ರಾಸ್ತ್ರ ಬಳಸುವುದಕ್ಕೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಸ್ತ್ರಾಸ್ತ್ರ ಠೇವಣಿ ಆದೇಶದಿಂದ ವಿನಾಯಿತಿ ಕೋರಿರುವ ಅರ್ಜಿಗಳ ಪರಿಶೀಲನೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಶನಿವಾರ ಮಾತನಾಡಿದರು. ಲೋಕಸಭೆ ಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಶಸ್ತ್ರಾಸ್ತ್ರ ಪರವಾನಗಿದಾರರು ಕಡ್ಡಾಯವಾಗಿ ತಮ್ಮ ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಬೇಕೆಂಬ ಆದೇಶವಿದ್ದು, ಈ ಆದೇಶದಲ್ಲಿ ಯಾವುದೇ ವಿನಾಯತಿ ನೀಡಲಾಗುವುದಿಲ್ಲ. ಸರ್ಕಾರಿ ಕರ್ತವ್ಯ ಹಾಗೂ ಬ್ಯಾಂಕ್‌ಗಳ ಸೇವೆಗಳಲ್ಲಿ ಮಾತ್ರ ಭದ್ರತಾ ಸಿಬ್ಬಂದಿ ಶಸ್ತ್ರಾಸ್ತ್ರಗಳನ್ನು ಬಳಸಬಹುದಾಗಿದೆ. ವೈಯಕ್ತಿವಾಗಿ ಯಾವುದೇ ವ್ಯಕ್ತಿ ಶಸ್ತ್ರಾಸ್ತ್ರಗಳನ್ನು ಬಳಸುವಂತಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಭದ್ರತಾ ಸಂಸ್ಥೆಗಳ ಮುಖ್ಯಸ್ಥರು, ಸುರಕ್ಷತಾ ಸಿಬ್ಬಂದಿ ಉಪಸ್ಥಿತರಿದ್ದರು. 41.940 ಲೀಟರ್ ಅಕ್ರಮ ಮದ್ಯ ಜಪ್ತಿ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲೆಯ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ, ಮಸ್ಕಿ ವಿಧಾನಸಭಾ ಕ್ಷೇತ್ರ ಹಾಗೂ ಸಿಂಧನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚೆಕ್ ಪೋಸ್ಟ್‌ಗಳಲ್ಲಿ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ 14,192 ರು. ಮೌಲ್ಯದ 41.940 ಲೀಟರ್ ಮದ್ಯವನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಖಾರಿಗಳು ಜಿಲ್ಲಾ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.ಚೆಕ್‌ಪೋಸ್ಟ್‌ನಲ್ಲಿ ನಿರಂತರ ನಿಗಾ: ಲೋಕಸಭೆ ಚುನಾವಣೆ ಘೊಷಣೆಯಾಗಿದ್ದರಿಂದ ಅಂತಾರಾಜ್ಯ ಮತ್ತು ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ನಿರಂತರವಾಗಿ ನಿಗಾ ವಹಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 24 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದು, ಕಂದಾಯ, ಪೊಲೀಸ್‌ ಹಾಗೂ ಇತರೆ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ವಾಹನಗಳ ತಪಾಸಣೆ ಮಾಡುತ್ತಿದ್ದಾರೆ. ಈ ವೇಳೆ ಅನಧಿಕೃತವಾಗಿ ಯಾವುದೇ ರೀತಿಯ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಹಣವನ್ನು ಸಹ ವಶಪಡಿಸಿಕೊಂಡಿರುವ ಘಟನೆಗಳು ನಡೆದಿದ್ದು ಇಲ್ಲಿವರೆಗೆ ಸುಮಾರು 10 ಲಕ್ಷ ರು. ನಗದು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.