ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೊರಗಿನವರು ಗೆದ್ದ ಇತಿಹಾಸವಿಲ್ಲ: ಗೃಹ ಸಚಿವ ಜಿ.ಪರಮೇಶ್ವರ

| Published : Mar 24 2024, 01:34 AM IST

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೊರಗಿನವರು ಗೆದ್ದ ಇತಿಹಾಸವಿಲ್ಲ: ಗೃಹ ಸಚಿವ ಜಿ.ಪರಮೇಶ್ವರ
Share this Article
  • FB
  • TW
  • Linkdin
  • Email

ಸಾರಾಂಶ

ಹೊರಗಿನ ಅಭ್ಯರ್ಥಿ ಗೆದ್ದ ಇತಿಹಾಸ ನಮ್ಮ ಜಿಲ್ಲೆಯಲ್ಲಿಲ್ಲ. ಬೆಂಗಳೂರಿನಲ್ಲಿ ಹುಡುಕಬೇಕಾದ ಹೊರಗಿನ ಅಭ್ಯರ್ಥಿ, ಅರ್ಧ ಗಂಟೆಯಲ್ಲಿ ಸಿಗುವ ಒಳಗಿನ ಅಭ್ಯರ್ಥಿ ಯಾರು ಸೂಕ್ತ ಎನ್ನುವುದು ಯೋಚಿಸಿ. ಮತ್ತೊಮ್ಮೆ ಇಲ್ಲಿನ ಇತಿಹಾಸ ಮರುಕಳಿಸುವಂತೆ ಕಾಂಗ್ರೆಸ್ ಗೆಲ್ಲಿಸಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಹೊರಗಿನ ಅಭ್ಯರ್ಥಿ ಗೆದ್ದ ಇತಿಹಾಸ ನಮ್ಮ ಜಿಲ್ಲೆಯಲ್ಲಿಲ್ಲ. ಬೆಂಗಳೂರಿನಲ್ಲಿ ಹುಡುಕಬೇಕಾದ ಹೊರಗಿನ ಅಭ್ಯರ್ಥಿ, ಅರ್ಧ ಗಂಟೆಯಲ್ಲಿ ಸಿಗುವ ಒಳಗಿನ ಅಭ್ಯರ್ಥಿ ಯಾರು ಸೂಕ್ತ ಎನ್ನುವುದು ಯೋಚಿಸಿ. ಮತ್ತೊಮ್ಮೆ ಇಲ್ಲಿನ ಇತಿಹಾಸ ಮರುಕಳಿಸುವಂತೆ ಕಾಂಗ್ರೆಸ್ ಗೆಲ್ಲಿಸಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕರೆ ನೀಡಿದರು.ಶನಿವಾರ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯವರದ್ದು ಗೋಡ್ಸೆ ಹಿಂದುತ್ವವಾಗಿದ್ದರೆ, ಕಾಂಗ್ರೆಸ್‌ನವರದ್ದು ಗಾಂಧೀಜಿ ಹಿಂದುತ್ವವಾಗಿದೆ. ಹತ್ತು ವರ್ಷ ಗಳ ಕಾಲ ಅಧಿಕಾರ ನಡೆಸಿರುವ ನರೇಂದ್ರ ಮೋದಿ ಒಂದು ಪತ್ರಿಕಾಗೋಷ್ಠಿಯನ್ನು ನಡೆಸದೇ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.

ಬಿಜೆಪಿ ಇಡಿ ಐಟಿ ರೇಡ್ ಮಾಡುವ ಮೂಲಕ ಪಕ್ಷಕ್ಕೆ ಫಂಡ್ ಮಾಡುವ ಭ್ರಷ್ಟಾಚಾರ ಹೊಸ ದಾರಿ ಹುಡುಕಿದ್ದಾರೆ. ಒಂದೊಂದು ಕಡೆ ಒಂದೊಂದು ಮಾತನಾಡುತ್ತಿರುವ ಮೋದಿ ಅವರು ಒಕ್ಕೂಟ ವ್ಯವಸ್ಥೆ ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ. ವಾಜಪೇಯಿ ಕೂಡಾ ಆಡಳಿತ ಮಾಡಿದ್ದರೂ ಅವರು ಸಂವಿಧಾನಕ್ಕೆ ವಿಧೇಯರಾಗಿದ್ದರು. ಇವರದ್ದು ಸರ್ವಾಧಿಕಾರವಾಗಿದೆ ಎಂದು ವ್ಯಂಗ್ಯವಾಡಿದರು, ಈ ಬಾರಿ 250ರೊಳಗೆ ಬಿಜೆಪಿ ಸೀಟ್ ಕುಸಿಯಲಿದೆ ಎಂದರು.

ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಕಾರ್ಪೊರೇಟ್ ಕಂಪನಿಗಳನ್ನು ಹೆದರಿಸಿ ಚುನಾವಣಾ ಬಾಂಡ್ ಪಡೆಯುವ ಮೂಲಕ ಬಿಜೆಪಿಯ ವರು ಭಾರಿ ಭ್ರಷ್ಟಾಚಾರ ಎಸಗಿದೆ. ಬಿಜೆಪಿ ಮುಖಂಡರು ಪದೇಪದೇ ಸಂವಿಧಾನ ಬದಲಿಸುತ್ತೇವೆ ಎಂದು ಹೇಳುವ ಮೂಲಕ ಡಾ.ಬಿ.ಆರ್. ಅಂಬೇಡ್ಕರ್‌ಗೆ ಅಪಮಾನ ಮಾಡುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆ ಬಗ್ಗೆ ಚಿಂತಿಸದ ಕೇಂದ್ರ ಸರ್ಕಾರಕ್ಕೆ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದ ಅವರು, ಇಡೀ ದೇಶದಲ್ಲಿಯೇ ಬಿಜೆಪಿ ಸರ್ವನಾಶವಾಗಲಿದೆ ಎಂದು ಹೇಳಿದರು.

ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ತುಮಕೂರು ಕ್ಷೇತ್ರದಲ್ಲಿ ಈ ಹಿಂದೆ ಆರ್.ಮಂಜುನಾಥ್, ಕೋದಂಡರಾಮಯ್ಯ, ಎ.ಕೃಷ್ಣಪ್ಪ, ದೇವೇಗೌಡ ರು ಇವರೆಲ್ಲಾ ಸೋತ ಇತಿಹಾಸವಿದೆ. ಹೊರಗಿನ ಅಭ್ಯರ್ಥಿ ಎಂಬ ಅಂಶವೇ ಈ ಸೋಲಿಗೆ ಕಾರಣ. ಸ್ವಾಭಿಮಾನಿ ಮತದಾರರು ಈ ಬಾರಿ ಸಹ ಅದೇ ನಿರ್ಧಾರ ಕೈಗೊಳ್ಳಲಿದ್ದಾರೆ. ಬಿಜೆಪಿ ಕಾರ್ಪರೇಟ್ ಕಂಪನಿಯಿಂದ ಫಂಡ್ ವಸೂಲಿ, ಶ್ರೀರಾಮ, ಹಿಂದುತ್ವ ಈ ಅಂಶವನ್ನೇ ಮುಂದಿಟ್ಟು ಚುನಾವಣೆ ಮಾಡಿದೆ. ದಶರಥ ರಾಮನ ಬದಲು ಅಯೋಧ್ಯೆಯಲ್ಲಿ ಮೋದಿ ರಾಮ ಸೃಷ್ಟಿಯಾಗಿದ್ದು ವಿಪರ್ಯಾಸ ಎಂದರು.

ನಿಯೋಜಿತ ಅಭ್ಯರ್ಥಿ ಮುದ್ದಹನುಮೇಗೌಡ ಮಾತನಾಡಿ, ಸಂಸದನಾಗಿದ್ದ ಅವಧಿಯಲ್ಲಿ ಪ್ರಾಮಾಣಿಕವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಂದೆಯೂ ರೈತರ ಹಾಗೂ ಶೋಶಿತರ ಪರವಾಗಿದ್ದುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಕಂಕಣಬದ್ಧನಾಗಿರುತ್ತೇವೆ. ಪಕ್ಷ ಹಾಗೂ ಜಿಲ್ಲೆಯ ಜನ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರು.ಜವಾಬ್ದಾರಿಯುತ ಸಂಸದ ಸ್ಥಾನಕ್ಕೆ ಐದು ವರ್ಷ ನ್ಯಾಯ ಕೊಟ್ಟಿದ್ದೇನೆ. 700ಕ್ಕೂ ಅಧಿಕ ಪ್ರಶ್ನೆ ಕೇಳಿದ್ದೇನೆ, 120 ಗಂಭೀರ ವಿಚಾರ ಪ್ರಸ್ತಾಪ ಮಾಡಿ ರೈತರ ಆತ್ಮಹತ್ಯೆ, ಕೊಬ್ಬರಿ, ಅಡಕೆ ಬಗ್ಗೆ ಚರ್ಚಿಸಿದ್ದೇನೆ. ಚತುಷ್ಪಥ ಹೆದ್ದಾರಿ, ಎಚ್‌ಎಎಲ್, ಇಸ್ರೋ, ಸ್ಮಾರ್ಟ್ ಸಿಟಿ ಹೀಗೆ ಅನೇಕ ಅಭಿವೃದ್ಧಿ ಕೆಲಸಕ್ಕೆ ಅಡಿಗಲ್ಲು ಹಾಕಿದ್ದೇನೆ. ವರ್ಷ ಪೂರ್ತಿ ಜನರಿಗೆ ಸಿಗುವ ನನಗೆ ಮತ ನೀಡುವ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ಪಾವಗಡ ಶಾಸಕರ ವೆಂಕಟೇಶ್, ತಿಪಟೂರು ಶಾಸಕ ಷಡಕ್ಷರಿ, ಮಾಜಿ ಶಾಸಕರಾದ ಕಿರಣ್ ಕುಮಾರ್ ,ರಫೀಕ್ ಅಹಮದ್, ಗೌರಿಶಂಕರ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ, ತಾಲೂಕು ಅಧ್ಯಕ್ಷ ಕೆ.ಆರ್.ವೆಂಕಟೇಶ್, ಮುಖಂಡರಾದ ಮುರಳಿದರ ಹಾಲಪ್ಪ, ಕೆ.ಆರ್. ತಾತಯ್ಯ, ನಿಕೇತ್ ರಾಜ್ ಮೌರ್ಯ, ಶಶಿಧರ ಹುಲಿಕುಂಟೆ, ಮಹಿಳಾ ಘಟಕದ ಗೀತಾ ರಾಜಣ್ಣ, ಜಿಲ್ಲಾ ಕಾರ್ಯದರ್ಶಿ ಶಂಕರಾನಂದ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯಮ್ಮ ಪಟ್ಟಣ ಪಂಚಾಯಿತಿ ಸದಸ್ಯರು, ಅಪಾರ ಕಾರ್ಯಕರ್ತರು ಭಾಗವಹಿಸಿದ್ದರು.

23ಜಿಯುಬಿ1

ಗುಬ್ಬಿ ಪಟ್ಟಣದ ಹೊರವಲಯದ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಸಚಿವ ಕೆ.ಎನ್.ರಾಜಣ್ಣ.-----------------------ಸೋಮಣ್ಣ ಎಂಬ ನೀರು ಉಪಯೋಗಕ್ಕೆ ಬಾರದು

ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಅಕ್ಕ, ಅಣ್ಣಾ ಎಂದು ಮಾತನಾಡುವ ಸೋಮಣ್ಣ ಅವರ ನಾಟಕಕ್ಕೆ ಜನ ಮರುಳಾಗುವುದಿಲ್ಲ. ಹರಿಯುವ ನೀರು ಎನ್ನುತ್ತಲೇ ಇಡೀ ರಾಜ್ಯ ಸುತ್ತುವ ಹರಿಯುವ ಸೋಮಣ್ಣ ಎಂಬ ನೀರು ಕೃಷಿಗೂ ಬಾರದು, ಕುಡಿಯಲುಬಾರದು ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿಯಂತೆ ನವರಂಗಿ ಆಟ ನನ್ನದಲ್ಲ:

ಕಳೆದ ನಾಲ್ಕು ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಲೀಡ್ ನೀಡದ ಆಪಾದನೆ ನನ್ನ ಮೇಲಿದೆ. ದೇವೇಗೌಡರು ಸಹ ಕೋಪ ಮಾಡಿಕೊಂಡಿದ್ದು ಈ ವಿಚಾರದಲ್ಲಿ. ಕುಮಾರಸ್ವಾಮಿ ಆಡುವ ನವರಂಗಿ ಆಟ ನನ್ನದಲ್ಲ. ನೇರ ಮಾತನಾಡುವ ಜಾಯಮಾನ ನನ್ನದು. ಇದ್ದ ವಿಚಾರ ನೇರ ಹೇಳಿದ್ದೆ. ಈ ನಿಟ್ಟಿನಲ್ಲಿ ಅಪಕೀರ್ತಿಗೆ ಈ ಬಾರಿ ಉತ್ತರ ನೀಡಲು ಸಂಕಲ್ಪ ತೊಡಬೇಕು ಎಂದು ಕರೆ ನೀಡಿದರು.ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಹೊರಗಿನ ಅಭ್ಯರ್ಥಿ ಆದ್ದರಿಂದ ಸ್ಥಳೀಯ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಬಿಜೆಪಿಯವರು ಕಳೆದ ಚುನಾವಣೆಯಲ್ಲಿ ಬೊಬ್ಬೆ ಇಡುತ್ತಿದ್ದರು. ಆದರೆ ಈ ಬಾರಿ ಅವರೇ ಹೊರಗಿನ ಅಭ್ಯರ್ಥಿಯನ್ನು ಕರೆತಂದಿದ್ದಾರೆ. ಜಿಲ್ಲೆಯ ಜನ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರಿಗೆ ಹೆಚ್ಚು ಮತ ನೀಡುವ ಮೂಲಕ ಗೆಲ್ಲಿಸಿಕೊಳ್ಳಬೇಕಿದೆ ಎಂದರು.