ಸಾರಾಂಶ
ಎಚ್.ಎನ್.ನಾಗರಾಜು ಹೊಳವನಹಳ್ಳಿ
ಗ್ಯಾರಂಟಿ ಅನುಷ್ಠಾನಗಳ ಅಬ್ಬರದಲ್ಲಿ ವಸತಿ ರಹಿತರಿಗೆ ನೀಡಬೇಕಾಗಿದ್ದ ಮನೆಗಳು ಅರ್ಧಕ್ಕೆ ನಿಂತಿದ್ದು ಸಾಲ ಸೋಲ ಮಾಡಿ ಮನೆ ಪ್ರಾರಂಭಿಸಿದ್ದ ಬಡವರು ಅತ್ತ ಮನೆಯೂ ಇತ್ತ ಹಣವೂ ಇಲ್ಲದೇ ಅಲೆಮಾರಿ ಜೀವನ ಸಾಗಿಸುವ ಸ್ಥಿತಿ ಬಂದಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರಿಗೆ ಭರಪೂರ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಕೇವಲ ಗ್ಯಾರಂಟಿ ಅನುಷ್ಠಾನ ಮಹತ್ವ ನೀಡಿದ್ದರಿಂದ ಕಳೆದ 4 ತಿಂಗಳಿನಿಂದ ಸರ್ಕಾರ ವಸತಿ ಯೋಜನೆಯಡಿ ಮನೆ ಪ್ರಾರಂಭಿಸಿರುವ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಮನೆ ಕಟ್ಟಲು ಶುರು ಮಾಡಿದ್ದ ಫಲಾನುಭವಿಗಳು ಮನೆಯ ಕಟ್ಟಲು ಸಹಾಯಧನ ಯಾವಾಗ ಬರುತ್ತದೆ ಎಂದು ಕಾದು ಕುಳಿತಿದ್ದಾರೆ.
ಕೊರಟಗೆರೆ ತಾಲೂಕಿನ ೨೪ ಗ್ರಾಪಂಯಲ್ಲಿ ನಿವೇಶನ ಮತ್ತು ವಸತಿ ರಹಿತ ಕುಟುಂಬಗಳ ಸಮೀಕ್ಷೆ ನಡೆಸಿ ೬ ವರ್ಷಗಳೇ ಕಳೆದಿವೆ. ತಾಪಂ ಮತ್ತು ಗ್ರಾಪಂ ಅಧಿಕಾರಿವರ್ಗ ಕಚೇರಿಗೆ ಬರುವ ಬಡವರಿಗೆ ಭರವಸೆ ನೀಡಲು ಮಾತ್ರ ಸೀಮಿತ. ೪ ವರ್ಷದಿಂದ ಸ್ಥಗೀತ ಆಗಿರುವ ವಸತಿ ಯೋಜನೆಗಳಿಗೆ ಸರ್ಕಾರ ಮತ್ತೇ ಚಾಲನೆ ಸೀಗಬೇಕಿದೆ.ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ೨೦೨೧-೨೨ರಲ್ಲಿ ಕೊರಟಗೆರೆಯ ೨೪ ಗ್ರಾಪಂಗೆ ೪೧೧ಮನೆಗಳು ಬಂದಿವೆ. ಕಳೆದ ೪ ವರ್ಷದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಸವವಸತಿ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದೇವರಾಜು ಅರಸು ವಸತಿ ಯೋಜನೆಯು ಸ್ಥಗಿತವಾಗಿದೆ. ಗ್ರಾಮೀಣದ ಬಡವರಿಗೆ ನೀಡಿರುವ ಮನೆಗಳ ಬೀಲ್‌ಗಳು ಕಳೆದ ೪ ತಿಂಗಳಿಂದ ಬಿಡುಗಡೆ ಆಗದೇ ಇರೋದು ಇನ್ನೂ ಸಮಸ್ಯೆ ದುಪ್ಪಟ್ಟಾಗಿದೆ. ಮನೆ ಕಟ್ಟಿಸಿಕೊಳ್ಳುವ ಫಲಾನುಭವಿಗಳು ತಳಪಾಯದಿಂದಲೇ ಮನೆ ಕಟ್ಟಿಕೊಳ್ಳಬೇಕಿರುವುದರಿಂದ ಇದ್ದ ಗುಡಿಸಲು ಕೆಡವಿ ಮನೆ ಕಟ್ಟಲು ನಿಂತಿದ್ದ ಜನರು ಆರು ತಿಂಗಳಲ್ಲಿ ಮನೆ ಮುಗಿದರೆ ಸಾಕು ಎಂದು ಬಾಡಿಗೆ ಮನೆ ಮಾಡಿದ್ದರು. ಈಗ ಬಿಲ್ ಬರದೆ ಇರುವುದರಿಂದ ಅತ್ತ ಬಾಡಿಗೆ ಕಟ್ಟಲಾಗದೆ ಇತ್ತ ಸ್ವಂತ ಮನೆಯೂ ಇಲ್ಲದೇ ಬೀದಿಗೆ ಬೀಳುವ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಅಂಕಿ ಅಂಶಗಳೇ ಇಲ್ಲ :೨೪ ಗ್ರಾಪಂ ಅಧಿಕಾರಿಗಳ ಸಮಿತಿಯು ೨೦೧೮-೧೯ನೇ ಸಾಲಿನಲ್ಲಿ ನಡೆಸಿರುವ ಸಮೀಕ್ಷೆಯಂತೆ ವಸತಿ ರಹಿತ -೨೬೬೭, ನಿವೇಶನ ರಹಿತ-೪೦೮೦ ಸೇರಿ ಒಟ್ಟು ೬೭೪೭ಕುಟುಂಬಗಳಿವೆ. ೨೦೧೮ರಿಂದ ೨೦೨೪ರ ೬ ವರ್ಷದ ಅವಧಿಯಲ್ಲಿ ಮತ್ತೇ ವಸತಿ ರಹಿತ ಮತ್ತು ನಿವೇಶನ ರಹಿತ ಕುಟುಂಬಗಳ ಸಮೀಕ್ಷೆಯನ್ನು ಗ್ರಾಪಂಗಳು ಮಾಡಿಲ್ಲ. ೬ ವರ್ಷದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರವು ಬಡವರಿಗೆ ನೀಡಿರುವ ವಸತಿ ಮತ್ತು ನಿವೇಶನಗಳ ಅಂಕಿ ಅಂಶಗಳ ಮಾಹಿತಿಯೇ ೨೪ಗ್ರಾಪಂ ಬಳಿ ಲಭ್ಯವಿಲ್ಲ.೨೪ ಗ್ರಾಪಂಗಳಿಗೆ ೨೦೧೫ರಿಂದ ೨೦೨೩ರ ವರೇಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ೫ವಸತಿ ಯೋಜನೆಗಳಿಂದ ಬರೋಬ್ಬರಿ ೯೭೯೮ಮನೆಗಳು ಮಂಜೂರಾಗಿವೆ. ಅದರಲ್ಲಿ ೭೨೫೩ಮನೆಗಳ ಕಟ್ಟಡ ಪೂರ್ಣ, ತಳಪಾಯ-೭೮೭,ಗೋಡೆ-೨೧೪, ಮೇಲ್ಚಾವಣಿ-೨೧೪ಹಂತದಲ್ಲಿಯೇ ನಿಂತಿವೆ. ೧೦೬೩ಮನೆಗಳು ಇನ್ನೂ ಪ್ರಾರಂಭವೇ ಆಗಿಲ್ಲ. ಉಳಿದ ೨೧೩ಮನೆಗಳನ್ನು ಬ್ಲಾಕ್ ಮಾಡಲಾಗಿದೆ. ಬಡವರ ವಸತಿ ಬೇಡಿಕೆ ಮತ್ತು ಸರಕಾರ ನೀಡಿರುವ ಮನೆಗಳನ್ನು ಸಮರ್ಪಕ ವಿತರಿಸುವಲ್ಲಿ ತಾಪಂ ಮತ್ತು ಗ್ರಾಪಂ ವಿಫಲವಾಗಿದೆ.೭೫ ಕುಟುಂಬಕ್ಕೆ ಗುಡಿಸಲೇ ಆಸರೆ ಐ.ಕೆ.ಕಾಲೋನಿ, ಚಿಂಪುಗಾನಹಳ್ಳಿ, ಕ್ಯಾಮೇನಹಳ್ಳಿ ಮತ್ತು ಹುಲೀಕುಂಟೆ ಸಮೀಪದ ಕೆರೆಕಟ್ಟೆ, ಬೆಟ್ಟಗುಡ್ಡದಲ್ಲಿ ೪೦ವರ್ಷದಿಂದ ಸುಮಾರು ೭೫ ಕುಟುಂಬಗಳ ೨೩೦ಕ್ಕೂ ಅಧಿಕ ಅಲೆಮಾರಿ ಕಾರ್ಮಿಕರಿದ್ದಾರೆ. ವಸತಿ ಇಲ್ಲದೇ ನಿವೇಶನವು ಮರೀಚಿಕೆಯಾಗಿ ಗುಡಿಸಲೆ ಇವರಿಗೆ ಆಸರೆ. ಬೆಳಕಿನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಸೇರಿ ವೈದ್ಯಕೀಯ ಸೇವೆಯು ಇಲ್ಲದೇ ಕತ್ತಲೆಯ ಜೀವನವಿದೆ. ಆಧಾರ್, ಐಡಿಕಾರ್ಡ್ ಮತ್ತು ರೇಷನ್‌ಕಾರ್ಡ್ ಇದ್ರು ಸೌಲಭ್ಯ ಮಾತ್ರ ಇನ್ನೂ ಮರೀಚಿಕೆ.
೪೦ವರ್ಷದಿಂದ ಗುಡಿಸಲೇ ನಮ್ಮ ಕುಟುಂಬಗಳಿಗೆ ಅರಮನೆ. ನಿವೇಶನ ಮತ್ತು ವಸತಿ ಸೌಲಭ್ಯ ನಾಯಕರ ಭರವಸೆಗೆ ಮಾತ್ರ ಸಿಮೀತ. ಕುಡಿಯುವ ನೀರು, ಬೆಳಕು, ಶೌಚಾಲಯ ಇಲ್ಲದ ನಮ್ಮ ದುಸ್ಥಿತಿ ಯಾರು ಕೇಳ್ತಾರೇ. ಪ್ರಾಣಿ, ಪಕ್ಷಿಗಳಿಗೆ ಇರುವ ಕನಿಷ್ಠ ಸೌಲಭ್ಯವು ಅಲೆಮಾರಿ ಸಮುದಾಯಕ್ಕೆ ಇಲ್ಲದಾಗಿದೆ. - ಮಾರಪ್ಪ. ಸ್ಥಳೀಯ. ಐ.ಕೆ.ಕಾಲೋನಿಮನೆಕಟ್ಟಿ ೪ತಿಂಗಳಾದ್ರು ೧ಕಂತಿನ ಹಣವು ಇಲ್ಲಿಯವರೆಗೆ ಬಂದಿಲ್ಲ. ಸಾಲಸೋಲ ಮಾಡಿ ಮನೆಯ ತಳಪಾಯ, ಗೋಡೆ ಮತ್ತು ಛಾವಣಿ ಕೆಲಸ ಮುಗಿಸಿದ್ದೇವೆ. ಅಧಿಕಾರಿಗಳು ಮನೆಕಟ್ಟಿ ಬಿಲ್ ಬರುತ್ತೇ ಅಂದ್ರು. ಈಗ ನೋಡಿದ್ರೇ ೧ ಬಿಲ್ ಕೋಡೊದಿಕ್ಕೂ ಮೀನಾಮೇಷ ನೋಡ್ತಿದ್ದಾರೇ. ಹಣವಿಲ್ಲದೇ ಈಗ ಮನೆಯ ಕೆಲಸ ಅರ್ಧಕ್ಕೆ ನಿಂತಿದೆ. -ನಟರಾಜು.ಫಲಾನುಭವಿ. ಅರಸಾಪುರ.