ಶ್ರೀರಾಮನ ಬಿಟ್ಟು ಭಾರತವಿಲ್ಲ, ಭಾರತ ಬಿಟ್ಟು ಶ್ರೀರಾಮನಿಲ್ಲ

| Published : Apr 07 2025, 12:32 AM IST

ಶ್ರೀರಾಮನ ಬಿಟ್ಟು ಭಾರತವಿಲ್ಲ, ಭಾರತ ಬಿಟ್ಟು ಶ್ರೀರಾಮನಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಾಮ ಯಾವುದೇ ಜಾತಿಗೆ ಮೀಸಲಾಗಿಲ್ಲ. ದಲಿತರು, ಹಿಂದುಳಿದವರು, ಮೇಲ್ವರ್ಗದವರೆಲ್ಲರ ಮನೆ, ಮನದಲ್ಲಿ ಶ್ರೀರಾಮ ನೆಲೆಸಿದ್ದಾನೆ

ಹುಬ್ಬಳ್ಳಿ: ರಾಜ್ಯದಲ್ಲಿ ಹಿಂದುಗಳು ನೆಮ್ಮದಿಯ ಜೀವನ ಮಾಡಲು ಹುಬ್ಬಳ್ಳಿಯ ಹಿಂದೂ ಶಕ್ತಿಯೇ ಕಾರಣ ಎಂಬುದನ್ನು ಪ್ರತಿಯೊಬ್ಪರು ಅರಿತುಕೊಳ್ಳಬೇಕು. "ಭಗವಾ "ಕ್ಕಾಗಿ ನನ್ನ ಪ್ರಾಣ ಕೊಡಲು ಸಿದ್ಧನಾಗಿರುವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಅವರು ನಗರದ ಶಕ್ತಿ ರಸ್ತೆಯ ಬಾನಿ ಓಣಿಯಲ್ಲಿ ಶ್ರೀರಾಮ ನವಮಿ ಉತ್ಸವ ಸಮಿತಿಯಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ಶ್ರೀರಾಮ ಜಯಂತಿ ಹಾಗೂ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀರಾಮ ಯಾವುದೇ ಜಾತಿಗೆ ಮೀಸಲಾಗಿಲ್ಲ. ದಲಿತರು, ಹಿಂದುಳಿದವರು, ಮೇಲ್ವರ್ಗದವರೆಲ್ಲರ ಮನೆ, ಮನದಲ್ಲಿ ಶ್ರೀರಾಮ ನೆಲೆಸಿದ್ದಾನೆ. ಶ್ರೀರಾಮನ ಬಿಟ್ಟು ಭಾರತವಿಲ್ಲ. ಭಾರತ ಬಿಟ್ಟು ಶ್ರೀರಾಮನಿಲ್ಲ. ಆದರೆ, ಇಂದಿಗೂ ನಮ್ಮಲ್ಲಿನ ಕೆಲವು ಹಿಂದುಗಳು ಸಾಬರಿಗಿಂತ ಹರಾಮ್‌ ಕೋರರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಗತ್ತಿನಲ್ಲಿ ಮೊದಲು ಹುಟ್ಟಿದ್ದು ಸನಾತನ ಧರ್ಮ ಎಂಬ ಅರಿವು ಪ್ರತಿಯೊಬ್ಬರಲ್ಲಿ ಬರಬೇಕಿದೆ. ದೇಶ ಸುರಕ್ಷಿತವಾಗಿರಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ. ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷರು ನನ್ನನ್ನು ಪಕ್ಷದಿಂದ ಹೊರ ಹಾಕಿರಬಹುದು. ನನ್ನ ಹೃದಯದಲ್ಲಿ ಬಿಜೆಪಿಯಿದೆ. ನೀವ್ಯಾರು ಏನು ಮಾಡಲಾಗದು. ಕೆಲವರು ಲಿಂಗಾಯತ ಧರ್ಮ ಬೇರೆ ಎನ್ನುತ್ತಿದ್ದಾರೆ. ಸನಾತನ ಧರ್ಮ ಉಳಿದರೆ, ವಿಭೂತಿ ಉಳಿಯುತ್ತದೆ ಎಂಬ ಅರಿವಿರಲಿ ಎಂದರು.

2028ಕ್ಕೆ ನಾನೇ ಸಿಎಂ: ಬಿಜೆಪಿಯಿಂದ ನನ್ನನ್ನು ಹೊರಹಾಕಿದ ಮೇಲೆ ನಾಲ್ಕು ಪಟ್ಟು ಜನರ ಆಶೀರ್ವಾದ ದೊರೆತಿದೆ. ನಾನು ಇಲ್ಲದೆ ಯಾವುದೇ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಹಿಂದುಪರ ಕರ್ನಾಟಕದಲ್ಲಿ ಯಾರು ಮಾತನಾಡುತ್ತಾರೆ ಅವರೇ ಮುಂದಿನ ಮುಖ್ಯಮಂತ್ರಿ. 2028ರಲ್ಲಿ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದರು.

ಜನ್ನತ್‌ಗೆ ಕಳಿಸುತ್ತಿದ್ದೆ: ನಾನು ಗೃಹ ಮಂತ್ರಿ ಆಗಿದ್ದರೆ, ಹಳೇ ಹುಬ್ಬಳ್ಳಿ ಠಾಣೆಗೆ ನುಗ್ಗಿ ಹಲ್ಲೆ ಮಾಡಿದವರನ್ನು ಜನ್ನತ್‌ಗೆ (ಸ್ವರ್ಗ) ಕಳುಹಿಸುತ್ತಿದ್ದೆ. ಶ್ರೀರಾಮ ಜಯಂತಿ, ಗಣೇಶೋತ್ಸವ ಮೆರವಣಿಗೆ ನಡೆಸಿದ ಹಿಂದುಗಳ ಮೇಲೆ ಕಲ್ಲು ತೂರಲು ಮುಂದಾದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಹಿಂದುಗಳ ಆರಾಧ್ಯ ದೈವ ಗಣಪತಿಯನ್ನೂ ಜೈಲಿಗೆ ಹಾಕುವಂಥ ಕೆಟ್ಟ ಸರ್ಕಾರ ಅಧಿಕಾರಕ್ಕೆ ಬಂದಿರುವುದು ದುರ್ದೈವದ ಸಂಗತಿ. ಈಗ ನನ್ನನ್ನು ಕಟ್ಟಿ ಹಾಕಿರಬಹುದು, ಲೋಕಸಭಾ ಚುನಾವಣೆ ಬಂದರೆ ಮತ್ತೆ ಎಲ್ಲರೂ ನನ್ನ ಮನೆ ಬಾಗಿಲಿಗೆ ಬರುತ್ತಾರೆ. ಆರು ವರ್ಷ ಅಲ್ಲ, ಆರು ತಿಂಗಳು ತಡೆಯುವುದಿಲ್ಲ ಎಂದು ಬಿಜೆಪಿಗೆ ಠಕ್ಕರ್ ನೀಡಿದರು.

ವಿಶ್ವ ಹಿಂದು ಪರಿಷತ್‌ನ ಜಯತೀರ್ಥ ಕಟ್ಟಿ ಮಾತನಾಡಿ, ರಾಮ ಜೋಡಿಸುವ ವ್ಯಕ್ತಿ, ವಿಘಟಿಸುವುದಿಲ್ಲ. ನಮ್ಮಲ್ಲಿನ ಕೆಟ್ಟ ಗುಣಗಳನ್ನು ಕಳೆದು ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಭಾರತದಲ್ಲಿ ಬದುಕು ಗಟ್ಟಿಗೊಳಿಸುವ ಕೆಲಸ ಮಾಡೋಣ ಎಂದರು.

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಶ್ರೀಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಆಶೀರ್ವಚನ ನೀಡಿದರು. ಹಂಪಿ ವಿವಿ ಸಿಂಡಿಕೇಟ್‌ನ ಮಾಜಿ ಸದಸ್ಯ ಸುಭಾಷಸಿಂಗ್ ಜಮಾದಾರ ಮಾತನಾಡಿದರು.

ಈ ವೇಳೆ ಶಿರೂರ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಆನಂದ ಗುರುಸ್ವಾಮಿ, ಭಾರ್ಗವಾನಂದ ಗಿರಿ ಶ್ರೀಗಳು, ಹಿಮಾಲಯದ ನಾಗಸಾಧು ರಾಜೇಶಪುರಿ ಜಟಾಧಾರಿ ಶ್ರೀಗಳು, ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪ್ರಮುಖರಾದ ವಸಂತ ಹೊರಟ್ಟಿ, ಈಶ್ವರ ಶಿರಕೋಳ, ಸುಬ್ರಹ್ಮಣ್ಯ ಶಿರಕೋಳ, ಮಲ್ಲಪ್ಪ ಶಿರಕೋಳ, ಕೃಷ್ಣ ಗಂಡಗಾಳೇಕರ ಸೇರಿದಂತೆ ಹಲವರಿದ್ದರು.

ಅದ್ಧೂರಿ ಮೆರವಣಿಗೆ:ಕಾರ್ಯಕ್ರಮದ ಬಳಿಕ ಶ್ರೀಶಕ್ತಿ ರೋಡ್‌ನ ಬಾನಿ ಓಣಿಯಿಂದ ಆರಂಭವಾದ ಅದ್ಧೂರಿ ಮೆರವಣಿಗೆಯು ಸ್ಟೇಷನ್‌ ರಸ್ತೆ, ಗಣೇಶಪೇಟೆ ರಸ್ತೆ, ಮರಾಠ ಗಲ್ಲಿ ರಸ್ತೆ, ಕೊಪ್ಪೀಕರ ರಸ್ತೆ, ಶ್ರೀಶಕ್ತಿ ರಸ್ತೆ ಮೂಲಕ ಮರಳಿ ಬಾನಿ ಓಣಿಗೆ ಆಗಮಿಸಿ ಸಮಾರೋಪಗೊಂಡಿತು.