ಶಿವಕುಮಾರ ಕುಷ್ಟಗಿ
ಗದಗ: ಮುಂಗಾರು ಮಳೆಯ ಕಣ್ಣಾಮುಚ್ಚಾಲೆ ಮತ್ತು ಮಲೆನಾಡು ಭಾಗದಲ್ಲಿ ಇಳಿಮುಖವಾಗಿರುವ ಮಳೆಯಿಂದಾಗಿ ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿಯ ಒಳಹರಿವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಳಹರಿವು ಸಂಪೂರ್ಣ ಸ್ಥಗಿತವಾಗಿರುವುದು ಜಿಲ್ಲೆಯ ಭೀಕರ ಕುಡಿಯುವ ನೀರಿನ ಸಮಸ್ಯೆಯ ಮುನ್ಸೂಚನೆಯನ್ನು ನೀಡುತ್ತಿವೆ.ತುಂಗಭದ್ರಾ ನದಿಗಳ ಉಗಮ ಸ್ಥಾನವೇ ಮಲೆನಾಡು ಭಾಗ. ಪ್ರಸಕ್ತ ಸಾಲಿನಲ್ಲಿ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲಿಯೂ ತೀವ್ರ ಮಳೆ ಕೊರತೆ ಉಂಟಾದ ಹಿನ್ನೆಲೆ ನದಿ ಪಾತ್ರದಲ್ಲಿ ಕಳೆದ 20 ದಿನಗಳಿಂದ ಒಂದೇ ಒಂದು ಹನಿ ನೀರು ಒಳಹರಿವು ಇಲ್ಲ.
ಈ ಬಾರಿ ಶೂನ್ಯ: ಸಿಂಗಟಾಲೂರು ಬ್ಯಾರೇಜ್ ಅಧಿಕಾರಿಗಳು ನೀಡಿರುವ ಅಂಕಿ- ಅಂಶ ಗಮನಿಸಿದರೆ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ. ಕಳೆದ ಸಾಲಿನ(2025) ಜೂ. 30ರಂದು ಬ್ಯಾರೇಜಿಗೆ ಭರ್ಜರಿ 32983 ಕ್ಯುಸೆಕ್ ಒಳಹರಿವಿತ್ತು. ಆದರೆ ಪ್ರಸಕ್ತ ಸಾಲಿನ ಜೂ .30ರ ಬೆಳಗಿನ ವರದಿಯ ಪ್ರಕಾರ, ಬ್ಯಾರೇಜ್‌ಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಸಂಪೂರ್ಣ ಶೂನ್ಯ.(ಯಾವುದೇ ನೀರು ಹರಿದು ಬರುತ್ತಿಲ್ಲ) ಹರಲಹಳ್ಳಿ ಗೇಜ್‌ನಲ್ಲಿ ಕೇವಲ 1306 ಕ್ಯುಸೆಕ್‌ನಷ್ಟು ಅತ್ಯಲ್ಪ ನೀರಿದ್ದು, ಬ್ಯಾರೇಜ್ ತಲುಪುವಷ್ಟರಲ್ಲಿ ನದಿ ಸಂಪೂರ್ಣ ಬತ್ತಿ ಹೋಗಿದೆ. ಮಲೆನಾಡು ಭಾಗದಿಂದ ಹರಿದು ಬರಬೇಕಾದ ನೀರಿನ ಮೂಲಗಳೇ ಒಣಗಿ ನಿಂತಿರುವುದು ಆತಂಕದ ಸಂಗತಿಯಾಗಿದೆ.ಪ್ರಸ್ತುತ ಜಲ ಸಂಗ್ರಹದ ಸ್ಥಿತಿ: ಸಿಂಗಟಾಲೂರು ಬ್ಯಾರೇಜ್‌ನ ಗರಿಷ್ಠ ಮಟ್ಟ 509 ಮೀಟರ್ ಆಗಿದ್ದು, ಒಟ್ಟು ಜಲಸಂಗ್ರಹ ಸಾಮರ್ಥ್ಯ 3.17 ಟಿಎಂಸಿ ಇದೆ. ಪ್ರಸ್ತುತ ನೀರಿನ ಮಟ್ಟ 507.45 ಮೀಟರ್‌ನಷ್ಟಿದ್ದು, 2.267 ಟಿಎಂಸಿ ನೀರು ಸಂಗ್ರಹವಿದೆ. ಸದ್ಯಕ್ಕೆ 0.422 ಟಿಎಂಸಿಯ ಡೆಡ್ ಸ್ಟೋರೇಜ್‌ಗಿಂತಲೂ ಹೆಚ್ಚಿನ ನೀರಿದ್ದರೂ, ಒಳಹರಿವು ಸಂಪೂರ್ಣ ನಿಂತಿರುವುದರಿಂದ ಇರುವ ನೀರು ಎಷ್ಟು ದಿನಗಳವರೆಗೆ ಆಗಬಲ್ಲದು ಎಂಬ ಪ್ರಶ್ನೆ ಮೂಡಿದೆ.4 ತಾಲೂಕುಗಳಿಗೆ ಸಮಸ್ಯೆ: ಜಿಲ್ಲಾ ಕೇಂದ್ರವಾದ ಗದಗ, ಮುಂಡರಗಿ, ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ಪಟ್ಟಣಗಳಿಗೆ ಮತ್ತು ಆಯಾ ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ 76ಕ್ಕೂ ಅಧಿಕ ಹಳ್ಳಿಗಳಿಗೆ ಸಿಂಗಟಾಲೂರು ಬ್ಯಾರೇಜ್ ಹಿನ್ನೀರನ್ನೇ ಅವಲಂಬಿಸಿರುವುದರಿಂದ ಒಳಹರಿವಿನ ಕೊರತೆ ನೇರವಾಗಿ ಜನರ ದೈನಂದಿನ ಬದುಕಿನ ಮೇಲೆ ಹೊಡೆತ ನೀಡಲಿದೆ. ಅದರಲ್ಲಿಯೂ ಮಳೆಯಾಗದೇ ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ಆಗಸ್ಟ್ ತಿಂಗಳಲ್ಲಿಯೇ ನೀರಿನ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಹೊರಹರಿವು ಇಲ್ಲ: ಕಳೆದ ಸಾಲಿಗೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಶೇ. 10ರಷ್ಟು ಮಳೆಯಾಗಿಲ್ಲ. ಬ್ಯಾರೇಜ್‌ಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವುದು ತುಂಗಾ ಡ್ಯಾಂನಿಂದ. ಕಳೆದ ಸಾಲಿನಲ್ಲಿ ಜೂ. 30ರಂದು ತುಂಗಾದಿಂದಲೇ 20 ಸಾವಿರಕ್ಕೂ ಅಧಿಕ ಕ್ಯುಸೆಕ್ ಹೊರಹರಿವು ಇತ್ತು. ಈಗ ಅಲ್ಲಿಂದಲೂ ಇನ್ನು ಹೊರಹರಿವು ಇಲ್ಲ. ಹಾಗಾಗಿ ಸಮಸ್ಯೆಯಾಗಿದೆ ಎಂದು ಸಿಂಗಟಾಲೂರು ನೀರಾವರಿ ಯೋಜನೆಯ ಇಇ ಪ್ರಕಾಶ ಐಗೋಳ ತಿಳಿಸಿದರು.