ನನ್ನ, ನಾಗರಾಜ್‌ ಸ್ನೇಹ- ಆತ್ಮೀಯತೆಗೆ ಕೊರತೆ ಆಗಿಲ್ಲ: ಸಿದ್ದರಾಮಯ್ಯ

| Published : Sep 01 2025, 01:03 AM IST

ನನ್ನ, ನಾಗರಾಜ್‌ ಸ್ನೇಹ- ಆತ್ಮೀಯತೆಗೆ ಕೊರತೆ ಆಗಿಲ್ಲ: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕೀಯದಲ್ಲಿ ಅವರನ್ನು ವಿರೋಧ ಮಾಡಿರುವುದೆ ಹೆಚ್ಚು. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ನಮ್ಮ ಜೊತೆ ಇದ್ದರು. ಆ ನಂತರ ಕಾಂಗ್ರೆಸ್ ಸೇರಿಸಿದರು. ಆ ಮೇಲೆ ಜೆಡಿಎಸ್‌ಗೆ ಬಂದರು. ಈಗ ಕಾಂಗ್ರೆಸ್‌ ನಲ್ಲಿದ್ದಾರೆ. ರಾಜಕೀಯವಾಗಿ ಬೇರೆ ಬೇರೆ ಪಕ್ಷದಲ್ಲಿದ್ದೂರ ಆತ್ಮೀಯತೆ ಸ್ನೇಹಕ್ಕೆ ಧಕ್ಕೆಯಾಗಿಲ್ಲ. ಅವರ ಸ್ನೇಹಮಯಿ ವ್ಯಕ್ತಿತ್ವವೇ ಯಶಸ್ಸಿಗೆ ಕಾರಣ.

ಕನ್ನಡಪ್ರಭ ವಾರ್ತೆ ಮೈಸೂರು

ಸಂದೇಶ ನಾಗರಾಜ್‌ ಮತ್ತು ನನ್ನ ನಡುವಿನ ಆತ್ಮೀಯತೆ ಮತ್ತು ಸ್ನೇಹಕ್ಕೆ ರಾಜಕೀಯ ಎಂದೂ ಧಕ್ಕೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಭಾನುವಾರ ಸಂದೇಶ ನಾಗರಾಜ್‌ ಅಭಿಮಾನಿ ಬಳಗ ಆಯೋಜಿಸಿದ್ದ ಸಂದೇಶ ನಾಗರಾಜ್‌ ಅವರ 80ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜಕೀಯದಲ್ಲಿ ಅವರನ್ನು ವಿರೋಧ ಮಾಡಿರುವುದೆ ಹೆಚ್ಚು. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ನಮ್ಮ ಜೊತೆ ಇದ್ದರು. ಆ ನಂತರ ಕಾಂಗ್ರೆಸ್ ಸೇರಿಸಿದರು. ಆ ಮೇಲೆ ಜೆಡಿಎಸ್‌ಗೆ ಬಂದರು. ಈಗ ಕಾಂಗ್ರೆಸ್‌ ನಲ್ಲಿದ್ದಾರೆ. ರಾಜಕೀಯವಾಗಿ ಬೇರೆ ಬೇರೆ ಪಕ್ಷದಲ್ಲಿದ್ದೂರ ಆತ್ಮೀಯತೆ ಸ್ನೇಹಕ್ಕೆ ಧಕ್ಕೆಯಾಗಿಲ್ಲ. ಅವರ ಸ್ನೇಹಮಯಿ ವ್ಯಕ್ತಿತ್ವವೇ ಯಶಸ್ಸಿಗೆ ಕಾರಣ ಎಂದರು.

ನನ್ನ ಮತ್ತು ನಾಗರಾಜ್‌ ಪರಿಚಯ ಆಗಿದ್ದು 1980ರಲ್ಲಿ. ನಾನು ಬಿಎಸ್ಸಿ ಮೊದಲ ವರ್ಷದಲ್ಲಿದ್ದಾಗ, ನಾಗರಾಜ್‌ ಅಂತಿಮ ವರ್ಷದಲ್ಲಿ ಓದುತ್ತಿದ್ದರು. ಅವರು ಉತ್ತಮ ಕಬಡ್ಡಿ ಆಟಗಾರ. ಕಬಡ್ಡಿ ನೋಡಲು ಹೋದಾಗ ಇವರು ಸಿಗುತ್ತಿದ್ದರು. ಬಿಎಸ್ಸಿ ಬಳಿಕ ಉದ್ಯಮ ಕ್ಷೇತ್ರಕ್ಕೆ ಇಳಿದು ಎರಡು ಬಸ್ ಮಾಲೀಕರಾದರು. ನಂತರ ಹೋಟೆಲ್ ತೆರೆದರು. ಆ ಹೋಟೆಲ್ ಹೆಸರೇ ಸಂದೇಶ ಎಂದು. ಆಗಿನಿಂದ ಇವರ ಹೆಸರು ಸಂದೇಶ ನಾಗರಾಜ್‌ ಆಗಿ ಬದಲಾಯಿತು ಎಂದು ನೆನಪಿಸಿಕೊಂಡರು.

ನಾನು ವಕೀಲನಾದ ಮೇಲೆ ಹೋಟೆಲ್‌ಗೆ ಹೋಗುತ್ತಿದ್ದೆ. ಆಗ ಬಹಳ ಹತ್ತಿರದ ಪರಿಚಯವಾಯಿತು. ಆ ನಂತರ ಉದ್ಯಮದಲ್ಲಿ, ಸಿನಿಮಾ ನಿರ್ಮಾಪಕರಾಗಿ ರಾಜಕೀಯದಲ್ಲಿ ಗುರುತಿಸಿಕೊಂಡು ತಮ್ಮದೇ ಛಾಪು ಮೂಡಿಸಿದರು. ಈ ಮೂರು ಕ್ಷೇತ್ರದಲ್ಲಿಯೂ ಯಶಸ್ವಿಯಾದರು. ಸುಮಾರು 30ಕ್ಕೂ ಹೆಚ್ಚು ಜನಪ್ರಿಯ ಸಿನಿಮಾ ನಿರ್ಮಿಸಿದ್ದಾರೆ. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

80 ವರ್ಷವಾದರೂ ಸಂದೇಶ್‌ ನಾಗರಾಜ್‌ ಅವರು ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಸಮಾಜ ಸೇವೆಗಾಗಿ ಬದುಕನ್ನು ಮುಡಿಪಿಟ್ಟಿರುವ ಅವರು ಶತಾಯುಷಿ ಮಾತ್ರವಲ್ಲ. ಇನ್ನೂ ಹೆಚ್ಚಿನ ಕಾಲ ಆರೋಗ್ಯವಾಗಿರಲಿ, ಸಮಾಜಕ್ಕೆ ಅವರ ಸೇವೆ ಅಗತ್ಯವಿದೆ ಎಂದು ಅವರು ಹಾರೈಸಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಸಂದೇಶ ನಾಗರಾಜ್‌ ಅತ್ಯಂತ ಮಾನವೀಯ ಮೌಲ್ಯಗಳ ವ್ಯಕ್ತಿ. ಸಿಕ್ಕ ಅಧಿಕಾರವನ್ನು ಕೂಡ ಮಾನವೀಯವಾಗಿ ಬಳಸಿದ್ದಾರೆ. ಹೊರ ಜಗತ್ತಿನಲ್ಲಿ ಅಡಂಬಾರದ ಜೀವನ ನಡೆಸಿದರು, ಅಂತರಂಗದಲ್ಲಿ ಸಾಮಾನ್ಯ ಜೀವನ ನಡೆಸುತ್ತಾರೆ. ಅಧಿಕಾರ, ಹಂತಸ್ತು, ಹೆಸರಿನ ಯಶಸ್ಸು ಎಲ್ಲಾ ಇದ್ದರೂ ಅಹಂಕಾರ ಇಲ್ಲ ಎಂದರು.

ನಟ ಅಂಬರೀಷ್‌ ಅವರ ಗೆಳೆಯನಾಗಿ, ಡಾ.ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಗೌರವ ಸಂಪಾದಿಸಿ ಆಪ್ತರಾಗಿದ್ದರು. 80 ವರ್ಷದ ಜೀವನವನ್ನು ಹಿಂದಿಕ್ಕೆ ತಿರುಗಿ ನೋಡಿದರೆ ಖುಷಿಯಾಗಲಿದೆ ಎಂದು ಅವರು ತಿಳಿಸಿದರು.

ನಟ ಕಿಚ್ಚ ಸುದೀಪ್, ಡಾಲಿ ಧನಂಜಯ, ಯುವ ರಾಜಕುಮಾರ್, ಸಾಧಕು ಕೋಕಿಲ, ಸಂಗೀತ ನಿರ್ದೇಶಕ ಹಂಸಲೇಖ, ಅರ್ಜುನ್ ಜನ್ಯ, ಗಿರಿಜಾ ಲೋಕೇಶ್‌, ಸೃಜನ್‌ ಲೋಕೇಶ್‌, ಯುವ ರಾಜಕುಮಾರ್‌ ಮೊದಲಾದವರು ಸಂದೇಶ ನಾಗರಾಜ್‌ ಅವರಿಗೆ ಶುಭಾ ಕೋರಿದರು.

ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ವೇದಿಕೆಗೆ ಆಗಮಿಸಿ, ಹಸ್ತಲಾಘನ ಮಾಡಿ ಸಂದೇಶ ನಾಗರಾಜ್‌ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದರು. ಈ ವೇಳೆ ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎಲ್. ನಾಗೇಂದ್ರ, ಮಾಜಿ ಸಂಸದ ಪ್ರತಾಪ ಸಿಂಹ ಇದ್ದರು.

ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್, ಕಂದಾಯ ಸಚಿವ ಭೈರತಿ ಸುರೇಶ್, ಪಶು ಸಂಗೋಪನ ಸಚಿವ ಕೆ. ವೆಂಕಟೇಶ್, ಕೃಷಿ ಸಚಿವ ಚೆಲುವರಾಯ ಸ್ವಾಮಿ, ಶಾಸಕರಾದ ತನ್ವೀರ್ ಸೇಠ್, ಕೆ. ಹರೀಶ್ ಗೌಡ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದ, ನಿರ್ಮಾಪಕ ಚಿನ್ನೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್, ಸಂದೇಶ ನಾಗರಾಜ್‌ ಸಹೋದರ ಸಂದೇಶ್‌ಸ್ವಾಮಿ, ಪುತ್ರ ಸಂದೇಶ್‌, ಮಂಜೇಶ್‌, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೊದಲಾದವರು ಇದ್ದರು.ಸಂದೇಶ ನಾಗರಾಜ್‌ ಶತಾಯುಷಿಯಾಗಿ ಸಮಾಜ ಸೇವೆ ಮಾಡಲಿ. ಸಿನಿಮಾ ಕ್ಷೇತ್ರದಲ್ಲಿ ಮತ್ತಷ್ಟು ಸಿನಿಮಾ ನಿರ್ಮಾಣ ಮಾಡಲಿ ಕಲಾವಿದರಿಗೆ ನೆರವಾಗಬೇಕು. ನನ್ನನ್ನು ಹಾಕಿಕೊಂಡು ಸಿನಿಮಾ ಮಾಡಿ ನಮಗೂ ಸಂಪಾದನೆ ಕೊಟ್ಟು ಅವರು ಸಂಪಾದನೆ ಮಾಡಲಿ.

- ಡಾಲಿ ಧನಂಜಯ, ನಟಸಂದೇಶ ನಾಗರಾಜ್‌ ಅವರನ್ನು ನಾನು ಪ್ರೀತಿಯಿಂದ ಡ್ಯಾಡಿ ಎಂದೇ ಕರೆಯುತ್ತೇನೆ. ಇನ್ನೇನು ಕೆಲವೇ ದಿನದಲ್ಲಿ ನನ್ನ ಸಿನಿಮಾ ‘ಜಿ.ಎಸ್‌.ಟಿ’ ಬಿಡುಗಡೆಯಾಗಲಿದೆ. ನನ್ನ ಮೇಲೆ ನಂಬಿಕೆಯಿಟ್ಟು ಸಿನಿಮಾ ನಿರ್ಮಿಸಿದ್ದಾರೆ. ಅವರು ನೂರ್ಕಾಲು ಬಾಳಬೇಕು.

- ಸೃಜನ್ ಲೋಕೇಶ್, ನಟ.ಸಂದೇಶ ನಾಗರಾಜ್‌ ನಮ್ಮ ಮನೆಯವರ ರೀತಿ. ಮೈಸೂರಿಗೆ ಬಂದಾಗಲೆಲ್ಲಾ ವಾಸ್ತವ್ಯ ಕೊಟ್ಟು ಪ್ರೀತಿ ತೋರಿಸುತ್ತಾರೆ. ದೇವರು ಅವರಿಗೆ ಉತ್ತಮ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ.

- ಯುವ ರಾಜ್ ಕುಮಾರ್, ನಟ.ಸಂದೇಶ ನಾಗರಾಜ್ ಸದಾ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಾರೆ. ಮಣ್ಣಿನ ದೋಣಿಯಿಂದ ಸಿನಿಮಾ ಮೂಲಕ ನಿರ್ಮಾಪಕರಾದರು. ಆಗಿನಿಂದಲೂ ನಮ್ಮ ಕುಟುಂಬದವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ನಿರ್ಮಾಪಕರಾಗಿ ನಮಗೂ ಊಟ ಹಾಕಿದ್ದಾರೆ. ಹೀಗೆಯೇ ಅವರ ಸಮಾಜ ಸೇವೆ ಮುಂದುವರಿಯಲಿ.

- ಗಿರಿಜಾ ಲೋಕೇಶ್, ನಟಿ