ಸಾರಾಂಶ
ಮುದ್ದೇಬಿಹಾಳ : ಮೋದಿ ಅವರನ್ನು ಬಿಟ್ಟರೇ ಬಿಜೆಪಿಯಲ್ಲಿ ನಾಯಕರೇ ಇಲ್ಲ. ಹಾಗಾಗಿ ಮೋದಿ ನೋಡಿ ಮತ ಹಾಕಿ ಎಂದು ಬಿಜೆಪಿಗರು ಜನರಲ್ಲಿ ಮತಕೇಳುತ್ತಾರೆ ಎಂದು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆ ಹತ್ತಿರವಿರುವ ಟಾಪ್ ಇನ್ ಟೌನ್ ಮಂಗಲಭವನದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆದರೆ, ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರಿದ್ದಾರೆ. ಅದಕ್ಕೆ ಬಿಜೆಪಿ ಅವರಿಗೆ ಭಯ ಜಾಸ್ತಿ. ಹಾಗಾಗಿಯೇ ದೇಶದಲ್ಲಿ ಜನರಿಗೆ ಹಿಂದು, ಮುಸ್ಲಿಂ ಎನ್ನುವ ಕೋಮುಭಾವನೆ ಸೃಷ್ಟಿಸಿ ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೋಮುವಾದದಿಂದ ಜನರ ದಾರಿ ತಪ್ಪಿಸುವ ಮೂಲಕ ಎರಡು ಬಾರಿ ಬಿಜೆಪಿ ಗೆಲವು ಸಾಧಿಸಿದೆ. ಸದ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರ ಗೆಲುವು ಬಹುತೇಕ ನಿಶ್ಚಿತ ಎಂದರು.
ಕೇಂದ್ರ ಸರ್ಕಾರ ವಿಫಲ:
ಪ್ರಧಾನಿ ಮೋದಿ ಅವರಿಗೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅರ್ಧದಷ್ಟು ರಾಜಕೀಯದ ಮತ್ತು ದೇಶವನ್ನು ಹೇಗೆ ಮುನ್ನಡೆಸಬೇಕು ಎನ್ನುವ ಅನುಭವ ಇಲ್ಲ. ಇದರಿಂದಾಗಿಯೇ ಕಳೆದ 10 ವರ್ಷಗಳ ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ಅಭಿವೃದ್ಧಿ ಶೂನ್ಯ ಸಾಧನೆಯಾಗಿದೆ. ನಿರುದ್ಯೋಗ ಸಮಸ್ಯೆ, ನೀರಾವರಿ ಯೋಜನೆಗಳ ಸಮಸ್ಯೆ ಸೇರಿದಂತೆ ರೈತರ, ಮಹಿಳೆಯರ, ಬಡವರ, ದೀನ ದಲಿತರ ಶ್ರೇಯೋಭಿವೃದ್ಧಿಗಾಗಿ ಒಂದೇ ಒಂದು ಯೋಜನೆ ಅನುಷ್ಠಾನಕ್ಕೆ ತರಲು ಕೇಂದ್ರ ವಿಫಲವಾಗಿದೆ ಎಂದರು.
ನಾವೂ ರಾಮ ಭಕ್ತರು:
ಕಳೆದ 2019ರ ಲೋಕಸಭಾ ಚುನಾವಣೆ ಗೆಲ್ಲಲು ಪುಲ್ವಾಮಾ ದಾಳಿಯನ್ನು ತಮ್ಮ ರಾಜಕೀಯ ದಾಳವಾಗಿ ಬಳಸಿಕೊಂಡು ಜನರಿಗೆ ದೇಶಾಭಿಮಾನ ಮೂಡಿಸಿ ಗೆದ್ದು ಬಂದರು. ಸದ್ಯ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ ಬಹುದೊಡ್ಡ ಸಾಧನೆ ಮಾಡಿದ್ದೇವೆ ಎನ್ನುವಂತೆ ಬಿಂಬಿಸಿ ದೇಶದ ಜನರನ್ನು ಧಾರ್ಮಿಕವಾಗಿ ನಂಬಿಸಿ ಈ ಬಾರಿಯೂ ಗೆಲ್ಲಬೇಕು ಎಂದುಕೊಂಡಿದ್ದಾರೆ. ನಾವೇನು ರಾಮಭಕ್ತರವಲ್ಲವೇ? ನಾವೇನು ಬೇರೆ ದೇಶದಲ್ಲಿದ್ದೇವಾ? ಆದರೆ, ಜನರು ಎಲ್ಲವನ್ನೂ ಸೂಕ್ಷ್ಮತೆಯಿಂದ ನೋಡುತ್ತಿದ್ದಾರೆ ಎಂದರು.
ವಿಜಯಪುರ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ರಾಜು ಆಲಗೂರು ಅವರು ಒಬ್ಬ ಪ್ರೊಫೆಸರ್ ಆಗಿ ಎರಡು ಬಾರಿ ಶಾಸಕರಾಗಿ ಸಕ್ರಿಯ ರಾಜಕಾರಣದಲ್ಲಿ ಎಲ್ಲ ಸಮಾಜದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅತ್ಯಂತ ಸರಳ ಸಜ್ಜನ ರಾಜಕಾರಣಿಗೆ ಹೆಸರಾದವರು. ಅವರನ್ನು ಗೆಲ್ಲಿಸಲು ಯುವಕರು ಒಂದಾಗಬೇಕು ಎಂದು ಕರೆ ನೀಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕಾಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ಬಿಜೆಪಿ ಅವರಿಗೆ ಶಾಸಕರನ್ನು ಖರೀದಿ ಮಾಡಿ ಅಧಿಕಾರ ಹಿಡಿಯುವುದೊಂದೆ ಉದ್ದೇಶವಾಗಿದೆ ಹೊರತು ಜನರ ಸೇವೆ ಮಾಡುವ ಯಾವ ಇಚ್ಛೆ ಅವರಿಗೆ ಇಲ್ಲ ಎಂದರು.
ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಎಂ.ಬಿ.ನಾವದಗಿ, ಬಿ.ಕೆ.ಬಿರಾದಾರ, ವೈ.ಎಚ್. ವಿಜಯಕರ, ರಾಯನಗೌಡ ತಾತರಡ್ಡಿ, ತಾಲೂಕು ಕುರುಬ ಸಮಾಜ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ತಾಲೂಕು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶೋಭಾ ಶಳ್ಳಗಿ, ಸದ್ದಾಂ ಕುಂಟೋಜಿ, ತಾಲೂಕು ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದರಫೀಕ ಶಿರೋಳ, ಬಾಪುರಾಯ ದೇಸಾಯಿ(ಹಡಗಲಿ), ಸುಜಾತಾ ಶಿಂಧೆ, ಎಸ್.ಆರ್.ಕಟ್ಟಿಮನಿ, ತಿಪ್ಪಣ್ಣ ದೊಡಮನಿ, ಎಂ.ಆರ್.ನಾಯಕ ಇತರರು ಇದ್ದರು.