ರಾಜ್ಯದಲ್ಲಿ ಎಲ್ಲಿಯೂ ಲೋಡ್ ಶೆಡ್ಡಿಂಗ್‌ ಜಾರಿಯಿಲ್ಲ

| Published : Feb 19 2025, 12:45 AM IST

ಸಾರಾಂಶ

ಕೆಪಿಸಿಸಿ ಅಧ್ಯಕ್ಷರು ಈಗ ಇದ್ದಾರಲ್ಲವೇ? ಅಧ್ಯಕ್ಷ ಸ್ಥಾನವಂತೂ ಖಾಲಿಯಾಗಿಲ್ಲ. ಬದಲಾವಣೆ ಬಗ್ಗೆ ಹೈಕಮಾಂಡ್ ಏನಾದರೂ ಹೇಳಿದ್ದಾರಾ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರಶ್ನಿಸಿದರು.

- ಕೆಪಿಸಿಸಿ ಅಧ್ಯಕ್ಷರನ್ನು ನೇಮಿಸೋದು ಪಕ್ಷದ ಹೈಕಮಾಂಡ್‌: ಸಚಿವ ಜಾರ್ಜ್‌

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕೆಪಿಸಿಸಿ ಅಧ್ಯಕ್ಷರು ಈಗ ಇದ್ದಾರಲ್ಲವೇ? ಅಧ್ಯಕ್ಷ ಸ್ಥಾನವಂತೂ ಖಾಲಿಯಾಗಿಲ್ಲ. ಬದಲಾವಣೆ ಬಗ್ಗೆ ಹೈಕಮಾಂಡ್ ಏನಾದರೂ ಹೇಳಿದ್ದಾರಾ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡುವುದು ಪಕ್ಷದ ಹೈಕಮಾಂಡ್‌. ಸುರ್ಜೇವಾಲಾ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರು ಸಲ್ಲಿಸಿರುವ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಅಂತಹವರನ್ನೇ ಕೇಳಿ. ನನ್ನ ಬಾಯಿಯಿಂದ ಏನೇನೋ ಬಿಡಿಸಬೇಡಿ. ದೂರಿನ ಬಗ್ಗೆ ನನಗೆ ಯಾವುದೇ ಮಾಹಿತಿಯೂ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಉತ್ತಮ ಆಡಳಿತ ಮಾಡುತ್ತಿದ್ದಾರೆ. ಜಿಪಂ, ತಾಪಂ ಚುನಾವಣೆ ವಿಚಾರ ನಿಮ್ಮ ಮಾಧ್ಯಮಗಳಿಂದಲೇ ನನಗೆ ತಿಳಿದಿದ್ದು. ಹೈಕೋರ್ಟ್‌ಗೆ ನಾವು ಪ್ರಮಾಣಪತ್ರ ನೀಡಿದ್ದೇವೆಂದರೆ ಚುನಾವಣೆ ನಡೆಯುತ್ತದೆಂದೇ ಅರ್ಥ ಎಂದು ವಿವರಿಸಿದರು.

ಲೋಡ್ ಶೆಡ್ಡಿಂಗ್‌ ಎಲ್ಲೂ ಇಲ್ಲ:

ರಾಜ್ಯದಲ್ಲಿ ಎಲ್ಲಿಯೂ ಲೋಡ್ ಶೆಡ್ಡಿಂಗ್‌ ಇಲ್ಲ. ಕೆಲವು ಕಡೆ ನಿರ್ವಹಣೆ ಸಂದರ್ಭದಲ್ಲಿ ತೊಂದರೆ ಆಗಿರಬಹುದು. ಇದನ್ನು ಹೊರತುಪಡಿಸಿದರೆ ಎಲ್ಲಿಯೂ ಲೋಡ್‌ ಶೆಡ್ಡಿಂಗ್‌ನ ಆಗುತ್ತಿಲ್ಲ. ವಿದ್ಯುತ್ ದರ ಏರಿಕೆಯಾದ ತಕ್ಷಣ ಗೃಹಜ್ಯೋತಿ ನಿಲ್ಲಿಸಲ್ಲ. ಗೃಹಜ್ಯೋತಿಗೂ, ವಿದ್ಯುತ್ ದರ ಏರಿಕೆಗೂ ಸಂಬಂಧವೇ ಇಲ್ಲ ಎಂದರು.

- - -

ಬಾಕ್ಸ್‌

* ಗೃಹಲಕ್ಷಿ ಹಣ ಕೊಡ್ತೀವಿ: ಜಾರ್ಜ್‌ ಹೇಳಿಕೆ

ಗೃಹಲಕ್ಷ್ಮಿ ಯೋಜನೆ ಹಣವನ್ನು ನೀಡುತ್ತೇವೆಂದು ಸ್ವತಃ ಮುಖ್ಯಮಂತ್ರಿ ಅವರೇ ಹೇಳಿದ್ದು, ಸಿಎಂ ಮಾತಿನ ಮೇಲೆ ನಂಬಿಕೆ ಇಲ್ಲವೇ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಗೃಹಲಕ್ಷ್ಮಿ ಹಣ ವಿಳಂಬದ ಬಗ್ಗೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗೃಹಲಕ್ಷ್ಮಿ ಹಣ ಕೊಡುವುದಾಗಿ ಮುಖ್ಯಮಂತ್ರಿಗಳೇ ಹೇಳಿದ್ದು, ವರ್ಷಾಂತ್ಯದಲ್ಲಿ ಹೆಚ್ಚು ಹಣ ಬರುತ್ತದೆ. ಮಧ್ಯದಲ್ಲಿ ಸ್ವಲ್ಪ ಹಣ ಕಡಿಮೆ ಬರುತ್ತದೆ. ಆದಾಯ ಬಂದ ತಕ್ಷಣ‍ ಗೃಹಲಕ್ಷ್ಮಿ ಹಣ ಕೊಡುತ್ತೇವೆ. ಏನು ಭರವಸೆಯನ್ನು ನೀಡಿದ್ದೆವೋ, ಅದರ ಪ್ರಕಾರ ಎಲ್ಲವನ್ನೂ ಕೊಡುತ್ತೇವೆ. ಬಿಜೆಪಿಯವರು ಈಗ ಟೀಕೆ ಮಾಡುತ್ತಿದ್ದಾರೆ. ಆಯ್ತು, ಬಿಜೆಪಿಯವರು ಟೀಕೆ ಮಾಡಲಿ. ಅದೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜನರಿಗೆ ಉಪಯೋಗವಾಗುವ ಇಂತಹ ಯೋಜನೆ ನೀಡಲಿ ಎಂದು ತಿಳಿಸಿದರು.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಒಂದು ತಿಂಗಳು ಸಹ ತಪ್ಪದೇ ಫಲಾನುಭವಿಗಳ ಖಾತೆಗೆ ಹಣ ಹಾಕಲಿ. ಆಗ ಗೊತ್ತಾಗುತ್ತದೆ. ಆಗ ಬಂದು ನಮ್ಮ ಸರ್ಕಾರದ ಮೇಲೆ, ನಮ್ಮ ಮೇಲೆ ಟೀಕೆ ಮಾಡಲಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಜಾರ್ಜ್‌ ತಾಕೀತು ಮಾಡಿದರು.

- - -

ಟಾಪ್‌ ಕೋಟ್‌ನಮ್ಮ ಸರ್ಕಾರದ ಪಂಚ ಯೋಜನೆಗೂ, ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಆಗುತ್ತಿರುವುದು ಕೇಂದ್ರ ಸರ್ಕಾರದಿಂದ. ರೆವಿನ್ಯೂ ಕೊಡುವುದರಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದೆ. ನಾವು ₹4 ಲಕ್ಷ ನೀಡಿದರೆ, ಕೇಂದ್ರವು ಕೇವಲ ₹60 ಸಾವಿರ ಕೊಡುತ್ತಿದೆ

- ಕೆ.ಜೆ.ಜಾರ್ಜ್‌, ಇಂಧನ ಸಚಿವ

- - -

(ಫೋಟೋ: ಕೆ.ಜೆ.ಜಾರ್ಜ್‌)