ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ, ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಯಾವುದೇ ಲಾಬಿ ಇಲ್ಲ. ಎಲ್ಲರ ಸಹಮತದಿಂದ ಒಂದೇ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ ಕಳುಹಿಸಲಾಗಿದೆ ಎಂದು ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರವೇ ಜಿಲ್ಲಾಧ್ಯಕ್ಷರ ನೇಮಕವಾಗಲಿದೆ. ಆರು ತಿಂಗಳ ಹಿಂದೆಯೇ ಒಂದೇ ಹೆಸರನ್ನು ಶಿಫಾರಸು ಮಾಡಲಾಗಿದೆ. ಜಿಲ್ಲಾಧ್ಯಕ್ಷರ ನೇಮಕದ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬೆಳಗಾವಿ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಯಾರೂ ತಡೆಹಿಡಿದಿಲ್ಲ. ರಾಜ್ಯದ 20 ಜಿಲ್ಲಾ ಘಟಕದ ಅಧ್ಯಕ್ಷರ ನೇಮಕ ಬಾಕಿ ಉಳಿದಿದೆ. ನನ್ನ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ನಡುವೆ ಭಿನ್ನಾಭಿಪ್ರಾವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ಬೆಳಗಾವಿಯಲ್ಲಿ ನಡೆದ ಗಾಂಧಿ ಭಾರತ ಶತಮಾನೋತ್ಸವದಲ್ಲಿ ಸಮಿತಿಗಳನ್ನು ರಚಿಸಲಾಗಿತ್ತು. ಎಲ್ಲರೂ ತಮ್ಮ ತಮ್ಮ ಕೆಲಸ ಮಾಡಿದ್ದಾರೆ. ನಮಗೆ ಜನರನ್ನು ಸೇರಿಸುವ ಜವಾಬ್ದಾರಿ ಇತ್ತು. ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಡಿ.ಕೆ.ಶಿವಕುಮಾರ ಅವರು ಉತ್ಸವ ಮೂರ್ತಿ ಆಗಿದ್ದಾರೆ ಅಷ್ಟೇ. ಹೀಗಾಗಿ ಅಧ್ಯಕ್ಷರು ಹೈಲೆಟ್ ಆಗುವುದು ಸ್ವಾಭಾವಿಕ. ಬೆಳಗಾವಿ ವಿಚಾರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ತಿಳಿಸಿದರು.ನಗರದ ಅನಗೋಳದಲ್ಲಿರುವ ಡಿವಿಎಸ್ ಚೌಕ್‌ನಲ್ಲಿ ವೀರಸಂಭಾಜಿ ಮಹಾರಾಜರ ಮೂರ್ತಿ ಸ್ಥಾಪಿಸಲಾಗಿದ್ದು, ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಆದರೆ, ಕಾಮಗಾರಿ ಮುಗಿಯದೆ ಮೂರ್ತಿ ಅನಾವರಣ ಹೇಗೆ ಮಾಡುತ್ತೀರಿ ಎಂದು ಕೆಲವರ ವಾದವಿದೆ. ಈ ವಿಚಾರದಲ್ಲಿ ಪಾಲಿಕೆ ಆಡಳಿತಾರೂಢ ಬಿಜೆಪಿಯವರೇ ಗೊಂದಲ ಸೃಷ್ಟಿಸಿದ್ದಾರೆ. ಹೈಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದ್ದು, ಮೂರ್ತಿ ಅನಾವರಣದಲ್ಲಿ ನಾವು ಪಾಲ್ಗೊಳ್ಳುವುದಕ್ಕೆ ಬರುವುದಿಲ್ಲ. ಈ ಕುರಿತು ಪಾಲಿಕೆ ಆಯುಕ್ತರು ನನ್ನ ಬಳಿಯೂ ಚರ್ಚಿಸಿದ್ದಾರೆ. ಶಿಷ್ಟಾಚಾರ ನಿಲಯ ಪಾಲಿಸಬೇಕಾಗುತ್ತದೆ. ಕೇಸ್ ನಡೆಯುತ್ತಿದ್ದರಿಂದ ಮೂರ್ತಿ ಅನಾವರಣ ಕಾರ್ಯಕ್ರಮ ಮುಂದಕ್ಕೆ ಹಾಕಲು ಪಾಲಿಕೆ ಆಯುಕ್ತರು ಮೇಯರ್‌ಗೆ ಪತ್ರ ಬರೆದಿದ್ದು, ಈ ಕುರಿತು ಏನು ನಿರ್ಧರಿಸುತ್ತಾರೆ ನೋಡೋಣ ಎಂದು ಹೇಳಿದರು.
ಬೆಳಗಾವಿ ತಹಸೀಲ್ದಾರ್ ಕಚೇರಿ ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣ ಸಂಬಂಧ ಆರೋಪಿ ತಹಸೀಲ್ದಾರ್ ಬಸವರಾಜ ನಾಗರಾಳ ಅವರನ್ನು ಸರ್ಕಾರ ಬದಲಿಸಿಲ್ಲ. ಅವರು ಸುದೀರ್ಘ ರಜೆ ಮೇಲೆ ತೆರಳಿದ್ದರು. ಈಗ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಮತ್ತು ಸರ್ಕಾರದ ಮಟ್ಟದಲ್ಲಿ ಕೇಳಬೇಕು ಎಂದು ಹೇಳಿದರು.