ಎಲ್‌ಪಿಜಿ ಸರಬರಾಜಿನ ಬಗ್ಗೆ ಜಿಲ್ಲೆಯ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲಿ ಎಲ್‌ಪಿಜಿ ಸಮಸ್ಯೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಹಾವೇರಿ: ಎಲ್‌ಪಿಜಿ ಸರಬರಾಜಿನ ಬಗ್ಗೆ ಜಿಲ್ಲೆಯ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲಿ ಎಲ್‌ಪಿಜಿ ಸಮಸ್ಯೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಗೃಹಬಳಕೆ ಸಿಲಿಂಡರ್‌ಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ಗ್ಯಾಸ್ ಏಜೆನ್ಸಿ ಮಾಲೀಕರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತ ತೈಲ ಕಂಪನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದ್ದು, ಸಮಸ್ಯೆ ಇಲ್ಲದಿರುವ ಬಗ್ಗೆ, ತೈಲ ಕಂಪನಿಯ ಅಧಿಕಾರಿಗಳಿಂದ ಖಾತ್ರಿ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅನಗತ್ಯ ಬುಕಿಂಗ್ ಬೇಡ

ಜಿಲ್ಲೆಯಲ್ಲಿ 4,56,725 ಗ್ರಾಹಕರಿದ್ದು, ಈ ಪೈಕಿ ಐಒಸಿ-67,837, ಬಿಪಿಸಿ-37936 ಎಚ್‌ಪಿಸಿ- 3,50,952 ಗ್ರಾಹಕರಿದ್ದು, ದೇಶದಲ್ಲಿ ಪ್ರಸ್ತುತ ಲಭ್ಯವಿರುವ ದೇಶೀಯ ಎಲ್‌ಪಿಜಿ ದಾಸ್ತಾನು ಗೃಹ ಬಳಕೆ ಗ್ರಾಹಕರಿಗೆ ಅಗತ್ಯವಿರುವ ಬಗ್ಗೆ ಮಾಹಿತಿ ನೀಡಿದ್ದು, ಜಿಲ್ಲೆಯ ಗ್ರಾಹಕರು ಎಲ್‌ಪಿಜಿ ಸರಬರಾಜಿನ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಗ್ರಾಹಕರು ಆತಂಕದಲ್ಲಿ ತುರ್ತು ಅನಗತ್ಯ ಬುಕ್ಕಿಂಗ್ ಮಾಡದೇ, ಕೃತಕ ಬೇಡಿಕೆ ಸೃಷ್ಟಿಯಾಗದಂತೆ ಸಮರ್ಪಕವಾಗಿ ಬಳಕೆ ಮಾಡಲು ಹಾಗೂ ಸಮತೋಲನ ಕಾಪಾಡಲು ಕೋರಲಾಗಿದೆ. ಗ್ರಾಹಕರು ಪ್ರತಿ ಗೃಹ ಬಳಕೆಯ ಸಿಲಿಂಡರ್‌ನ್ನು ಬುಕ್ ಮಾಡಿ ಪಡೆದುಕೊಂಡ ನಂತರ ಮತ್ತೊಂದು ಗೃಹಬಳಕೆಯ ಸಿಲಿಂಡರ್‌ಗಾಗಿ ನಗರ ಪ್ರದೇಶದಲ್ಲಿ 25 ದಿನಗಳವರೆಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 45 ದಿನಗಳವರೆಗೆ ಕಂಪನಿ ಅವಕಾಶ ನೀಡಿರುತ್ತದೆ.

ಕಂಟ್ರೋಲ್ ರೂಮ್: ತಾಲೂಕುಗಳಲ್ಲಿ ಎಲ್.ಪಿ.ಜಿ. ಸಿಲಿಂಡರ್‌ಗಳ ಬಗ್ಗೆ ಸಮಸ್ಯೆ ಕಂಡು ಬಂದಲ್ಲಿ ತಹಸೀಲ್ದಾರ್ ಕಚೇರಿಗಳಲ್ಲಿ ಕಂಟ್ರೋಲ್ ರೂಮ್‌ಗಳನ್ನು ತೆರೆಯಲಾಗಿದ್ದು, ಈ ಕಂಟ್ರೋಲ್ ರೂಮ್ ದೂರವಾಣಿಗೆ ಕರೆ ಮಾಡಬಹುದಾಗಿದೆ ಎಂದರು.

ಬ್ಯಾಡಗಿ ತಹಸೀಲ್ದಾರ್ ಕಚೇರಿ- 08375-228428, ಹಾನಗಲ್ ತಹಸೀಲ್ದಾರ್ ಕಚೇರಿ-08379-262241, ಹಾವೇರಿ ತಹಸೀಲ್ದಾರ್ ಕಚೇರಿ- 08375-232447, ರಾಣಿಬೆನ್ನೂರು ತಹಸೀಲ್ದಾರ್ ಕಚೇರಿ-08373- 260449, ಹಿರೇಕೆರೂರು ತಹಸೀಲ್ದಾರ್ ಕಚೇರಿ-08376-282231, ಸವಣೂರು ತಹಸೀಲ್ದಾರ್ ಕಚೇರಿ- 08378-241427, ಶಿಗ್ಗಾಂವಿ ತಹಸೀಲ್ದಾರ್ ಕಚೇರಿ-08378-225044 ಹಾಗೂ ರಟ್ಟಿಹಳ್ಳಿ ತಹಸೀಲ್ದಾರ್ ಕಚೇರಿ-08376-200147 ಸಂಪರ್ಕಿಸಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು.

ಸಿಲಿಂಡರ್ ವರ್ಗಾಯಿಸುವಂತಿಲ್ಲ: ಗೃಹಬಳಕ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಉಪಯೋಗಿಸಬಾರದು. ಅಲ್ಲದೇ ಅನಧಿಕೃತವಾಗಿ ಸಂಗ್ರಹಿಸಿ ಒಂದು ಸಿಲಿಂಡರ್‌ನಿಂದ ಮತ್ತೊಂದು ಸಿಲಿಂಡರ್‌ಗೆ ವರ್ಗಾಯಿಸುವುದು ಅಪರಾಧವಾಗಿರುತ್ತದೆ. ಸಿಲಿಂಡರ್‌ಗಳನ್ನು ಸಾಗಾಣಿಕೆ ಮಾಡುವ ವಾಹನಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುವಂತಹ ಪ್ರಕರಣಗಳು ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ.ಜೆ., ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಕ್ಷರ ದಾಸೋಹ ಅಧಿಕಾರಿಗಳು, ಜಿಲ್ಲೆಯ ಗ್ಯಾಸ್ ಏಜೆನ್ಸಿ ಮಾಲೀಕರು, ಎಚ್‌ಪಿಸಿ, ಡಿಪಿಸಿ, ಐಡಿಸಿ ಸೇಲ್ಸ್ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು ಹಾಗೂ ಜಿಲ್ಲೆಯ ತಹಸೀಲ್ದಾರ್‌ರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.