ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಅವ್ಯವಹಾರ ನಡೆದಿಲ್ಲ

| Published : Jul 25 2024, 01:18 AM IST

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಚಿತ್ರದುರ್ಗ ಸಿಟಿ ಇನ್ ಸ್ಟಿಟ್ಯೂಟ್ ನ ನಿಕಟಪೂರ್ವ ಕಾರ್ಯದರ್ಶಿ ಬಿ.ಚಿತ್ರಲಿಂಗಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗದ ಪ್ರತಿಷ್ಠಿತ ಸಿಟಿ ಇನ್‌ಸ್ಟಿಟ್ಯೂಟ್ ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಲೆಕ್ಕ ಪತ್ರಗಳೆಲ್ಲವೂ ಪಾರದರ್ಶಕವಾಗಿವೆ. ಅಶಿಸ್ತಿನ ಕಾರಣಕ್ಕೆ ಸದಸ್ಯತ್ವದಿಂದ ವಜಾಗೊಂಡವರು, ಸಸ್ಪಂಡ್ ಆದವರ ವ್ಯರ್ಥ ಪ್ರಲಾಪ ಇದಾಗಿದ್ದು ವೈಯುಕ್ತಿಕ ಕಾರಣದಿಂದಾಗಿ ಸಂಸ್ಥೆಗೆ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ ಎಂದು ಇನ್‌ಸ್ಟಿಟ್ಯೂಟ್‌ನ ನಿಕಟಪೂರ್ವ ಕಾರ್ಯದರ್ಶಿ ಬಿ.ಚಿತ್ರಲಿಂಗಪ್ಪ ಹಾಗೂ ಖಜಾಂಚಿ ಅಜಿತ್ ಪ್ರಸಾದ್ ಜೈನ್ ಸ್ಪಷ್ಟಪಡಿಸಿದರು.

ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಜಾಂಚಿ ಅಜಿತ್ ಪ್ರಸಾದ್ ಜೈನ್, ಸಂಸ್ಥೆಯ ಲೆಕ್ಕ ಪತ್ರಗಳು ಪಾರದರ್ಶಕವಾಗಿದ್ದು ಯಾರಾದರೂ ಬಂದು ನೋಡಬಹುದು. ಹೊಸದಾಗಿ ನೀಡಿದ ಸದಸ್ಯತ್ವದ ಎಲ್ಲ ಮೊತ್ತವನ್ನು ಬ್ಯಾಂಕ್‌ಗೆ ಜಮೆ ಮಾಡಲಾಗಿದೆ. ಹಣ ದುರುಪಯೋಗವಾಗಿದೆ ಎಂದು ಕೆಲವರು ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅಗತ್ಯ ವಿದ್ದಲ್ಲಿ ಸಿಬಿಐಗೂ ಕೊಡಲಿ. ತನಿಖೆ ಎದುರಿಸಲು ಸಿದ್ದ ಎಂದರು.

ಮೂರು ವರ್ಷಗಳ ಹಿಂದೆ ತಾವು ಅಧಿಕಾರ ವಹಿಸಿಕೊಂಡಾಗ ಸಿಬ್ಬಂದಿಯ ಸಂಬಳ ಹಾಗೂ ದೈನಂದಿನ ಖರ್ಚು ವೆಚ್ಚಗಳಿಗೂ ಹಣವಿರಲ್ಲ. ಇದು ಸಂಸ್ಥೆ ಎಲ್ಲ ಸದಸ್ಯರಿಗೂ ತಿಳಿದಿದೆ. ಸಮಿತಿ ಅಂದಿನ ಉಪಾಧ್ಯಕ್ಷರು, ಸದಸ್ಯರಿಂದ ಬಡ್ಡಿ ರಹಿತ ಸಾಲ ಪಡೆದು ಸಂಸ್ಥೆ ನಡೆಸಿದ್ದೆವು. ಈಗ ಸಂಸ್ಥೆ ಲಾಭದಾಯಕವಾಗಿದ್ದು ಡಿಸಿಸಿ ಬ್ಯಾಂಕ್ ನಲ್ಲಿ ₹2 ಕೋಟಿ ಠೇವಣಿ ಇಡಲಾಗಿದೆ. ಸಿಬ್ಬಂದಿ ವೇತನಕ್ಕೂ, ನಿರ್ವಹಣೆಗೂ ಕೊರತೆಯಿಲ್ಲ. ಅಷ್ಟರ ಮಟ್ಟಿಗೆ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದಿದ್ದೇವೆ. ಸಂಸ್ಥೆ ಏಳಿಗೆ ಸಹಿಸದವರು, ಕಳೆದ ಚುನಾವಣೆಯಲ್ಲಿ ಪರಾಜಿತರಾದವರು ಅಪಪ್ರಚಾರದಲ್ಲಿ ನಿರತರಾಗಿದ್ದಾರೆ. ಸಂಸ್ಥೆಯ ಸದಸ್ಯರಿಗೆ ಇವರ ಬಗ್ಗೆ ಗೊತ್ತಿದೆ ಎಂದರು.

ಹಿಂದೆಯೂ ಸಂಸ್ಥೆಯ ಸದಸ್ಯರಿಗೆ ಸೂಟ್‌ಕೇಸ್ ಉಡುಗೊರೆಯಾಗಿ ನೀಡಲಾಗಿದೆ. ಅದೇ ರೀತಿ ಈ ಬಾರಿಯೂ ಕೊಟೇಷನ್ ಕರೆದು ಕಡಿಮೆ ಕೊಟೇಷನ್ ನೀಡಿದವರಿಂದ ಸೂಟ್‌ಕೇಸ್ ಖರೀದಿ ಮಾಡಿದ್ದೇವೆ. ಅತ್ಯಂತ ಕಡಿಮೆ ಬೆಲೆಗೆ ಒಳ್ಳೆಯ ಕಂಪನಿಯಿಂದ ಖರೀದಿಸಿ ಕೊಟ್ಟಿದ್ದೇವೆ. ಎಲ್ಲ ಸದಸ್ಯರು ಖುಷಿಯಾಗಿದ್ದು, ಕೆಲವರು ಮಾತ್ರ ತಕಾರರು ಎತ್ತಿದ್ದಾರೆ. ಅವ್ಯವಹಾರವಾಗಿದೆ ಎಂದು ವೃಥಾ ಆರೋಪಿಸುತ್ತಿದ್ದಾರೆ. ಸೂಟ್ ಕೇಸ್ ವಿತರಿಸುವಾಗ ಸುಮ್ಮನಿದ್ದವರೂ ಈಗ ಏಕೆ ಕ್ಯಾತೆ ತೆಗೆಯುತ್ತಿದ್ದಾರೆಂದು ಪ್ರಶ್ನಿಸಿದರು.

ನಿಕಟಪೂರ್ವ ಖಜಾಂಚಿ ಬಿ.ಚಿತ್ರಲಿಂಗಪ್ಪ ಮಾತನಾಡಿ, ಕೋವಿಡ್ ಸಮಯದಲ್ಲಿ ಸಂಸ್ಥೆಯ ಬಾರ್‌ ಸೆಕ್ಷನ್ ಬೀಗ ಮುರಿದು ಅದರಲ್ಲಿನ ಮದ್ಯ ಕಳವು ಮಾಡಲಾಗಿತ್ತು. ಸಿಸಿ ಟಿವಿಯಲ್ಲಿ ಕೆಲ ಸದಸ್ಯರ ಚಿತ್ರಗಳು ಪತ್ತೆಯಾಗಿದ್ದವು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದು ಸಂಸ್ಥೆಯ ಜವಾಬ್ದಾರಿ ಸ್ಥಾನದಲ್ಲಿದ್ದವರು ಕಳ್ಳತನವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಿಜಲಿಂಗಪ್ಪ ಕಟ್ಟಿ ಬೆಳೆಸಿದ ಸಂಸ್ಥೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿದರು. ಅನೀತಿಯಿಂದ ಇದ್ದ ಮಂದಿಯೇ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ತಾವೇನು ಮಾಡಿಕೊಂಡು ಬಂದಿದ್ದೆವು ಎಂಬುದ ನೆನಪು ಮಾಡಿಕೊಳ್ಳಲಿ ಎಂದರು.

ಸಂಸ್ಥೆಯ ಹಣ ಖರ್ಚು ಮಾಡಲು ನಾವೇನು ಕಟ್ಟಡಗಳ ಕಟ್ಟಿಲ್ಲ, ಅನಾವಶ್ಯಕ ಖರೀದಿ ಮಾಡಿಲ್ಲ. ಹಿಂದೆ ಇದ್ದವರು ಕಟ್ಟಡ ನಿರ್ಮಾಣದಲ್ಲಿ ಏನೆಲ್ಲ ಮಾಡಿದ್ದರು ಎಂಬುದು ಸದಸ್ಯರಿಗೆ ಗೊತ್ತಿದೆ. ಆ ಕಾರಣಕ್ಕಾಗಿಯೇ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ಸಂಸ್ಥೆಯ ಯಾರು ಕೆಳಮಟ್ಟಕ್ಕೆ ಒಯ್ದಿದ್ದರು, ಉನ್ನತೀಕರಣ ಮಾಡಿದವರು ಯಾರು ಎಂಬುದು ನಾವು ನಡೆಸಿದ ಆರ್ಥಿಕ ವಹಿವಾಟು, ಬ್ಯಾಂಕ್ ನಲ್ಲಿರುವ ಠೇವಣಿ ಸಾಕ್ಷಿಯಾಗಿದೆ. ಸಿಬ್ಬಂದಿಗೆ ವೇತನ ಕೊಡಲು ಸಾಧ್ಯವಾಗದಷ್ಟರ ಮಟ್ಟಿಗೆ ಸಂಸ್ಥೆ ದಿವಾಳಿಯಾದಾಗ ಇವರೆಲ್ಲ ಏನು ಮಾಡುತ್ತಿದ್ದರೆಂದು ಪ್ರಶ್ನಿಸಿದರು.

ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀರಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸದಸ್ಯರು ಮಾಡಿದ ಗಂಭೀರ ಆರೋಪಗಳ ಆಧರಿಸಿ 10 ವರ್ಷಗಳ ಅವಧಿಯ ತನಿಖೆ ಮಾಡುವಂತೆ ನಿರ್ಣಯಿಸಲಾಗಿತ್ತು. ಅದನ್ನು ಮಾಡಲಾಗಿಲ್ಲ. ಯಾರು ಲೂಟಿಕೋರರು ಎಂಬುದ ಸದಸ್ಯರೇ ನಿರ್ಧರಿಸುತ್ತಾರೆ ಎಂದು ಚಿತ್ರಲಿಂಗಪ್ಪ ಹೇಳಿದರು. ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ಕರಿಯಪ್ಪು ಇದ್ದರು.

ಸದಸ್ಯತ್ವಕ್ಕೆ 1,62000 ಹಣ ಪಡೆದ ಆರೋಪ: ಸಂಸ್ಥೆಯ ಸದಸ್ಯತ್ವ ನೀಡುವಾಗ ಪ್ರತಿಯೊಬ್ಬರಿಂದ 1,62,000 ರು. ಪಡೆದಿದ್ದಾರೆ. 55 ಜನರಿಂದ ನಗದು ಪಡೆದಿರುವುದು ಕಾನೂನು ಬಾಹಿರ, ಅಕ್ರಮವೆಂದು ದೂರಿದ್ದಾರೆ. ಕೆಲವರು ತಮ್ಮದೇ ಆದ ಕಾರಣಕ್ಕೆ ನಗದು ನೀಡಿದ್ದಾರೆ. ಅದನ್ನು ಬ್ಯಾಂಕ್ ಗೆ ಜಮೆ ಮಾಡಲಾಗಿದೆ. ಸದಸ್ಯತ್ವದ ಹಣವನ್ನು ಪ್ರತ್ಯೇಕವಾಗಿ ಬ್ಯಾಂಕ್ ನಲ್ಲಿ ಇರಿಸಲಾಗಿದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ನಗದು ಪಡೆದಿದ್ದೇವೆ. ಅದಕ್ಕೆ ರಸೀದಿ ನೀಡಿ ಬ್ಯಾಂಕ್ ಗೆ ಜಮೆ ಮಾಡಿದ್ದೇವೆ. ಹಿಂದಿನ ಆಡಳಿತ ಮಂಡಳಿ ಕೂಡಾ ನಗದು ಪಡೆದು ಸದಸ್ಯತ್ವ ನೀಡಿತ್ತು. ಸಂಸ್ಥೆಯ ಬೈಲಾ ಪ್ರಕಾರ ಸದಸ್ಯರ ಸಂಖ್ಯೆ 1200 ಮೀರುವಂತಿಲ್ಲವೆಂದಿದೆ. ಅದನ್ನು ಪಾಲಿಸಲಾಗಿದ್ದು ಈಗಿನ ಒಟ್ಟು ಸಂಖ್ಯೆ ಸಾವಿರಕ್ಕಿಂತಲೂ ಕಡಿಮೆ ಇದೆ ಎಂದರು.