ಸಾರಾಂಶ
ಬಿ.ಎಚ್.ಎಂ. ಅಮರನಾಥಶಾಸ್ತ್ರಿ
ಕನ್ನಡಪ್ರಭ ವಾರ್ತೆ ಕಂಪ್ಲಿತಾಲೂಕಿನ ಮೆಟ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪಾರಹಳ್ಳಿದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಮೊಬೈಲ್‌ನಲ್ಲಿ ಮಾತನಾಡಲು ಸೇರಿದಂತೆ ವಿವಿಧ ರೀತಿಯ ಆನ್‌ಲೈನ್ ಚಟುವಟಿಕೆಗಳಿಗೆ ಸಮಸ್ಯೆಯಾಗಿದ್ದು, ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಹಣ ವರ್ಗಾವಣೆ, ತರಗತಿಗಳು, ಉದ್ಯೋಗ, ಪರಸ್ಪರ ಮಾಹಿತಿ ವಿನಿಮಯ ಸೇರಿದಂತೆ ಅನೇಕ ಆನ್‌ಲೈನ್‌ನಿಂದಾಗುವ ಚಟುವಟಿಕೆಗಳಿಗೆ ನೆಟ್‌ವರ್ಕ್ ಅತ್ಯವಶ್ಯಕವಾಗಿದೆ. ಡಿಜಿಟಲ್ ತಂತ್ರಜ್ಞಾನದಲ್ಲಿ ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ಮುನ್ನುಗುತ್ತಿದೆಯಲ್ಲದೇ, ಇಡೀ ಜಗತ್ತು 5ಜಿ ನೆಟ್‌ವರ್ಕ್‌ನತ್ತ ದಾಪುಗಾಲು ಹಾಕುತ್ತಿರುವ ಇಂತಹ ಕಾಲಘಟ್ಟದಲ್ಲಿ ಉಪ್ಪಾರಹಳ್ಳಿ ಗ್ರಾಮದ ಯಾವ ಮೂಲೆಯಲ್ಲಿಯೂ ನೆಟ್‌ವರ್ಕ್ ದೊರೆಯುತ್ತಿಲ್ಲ.3 ಕಿಮೀ ಓಡಬೇಕು:
3 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಗ್ರಾಮಸ್ಥರು 3 ಕಿಮೀ ದೂರದ ಮೆಟ್ರಿ, ಚಿನ್ನಾಪುರ ಗ್ರಾಮಗಳಿಗೆ ತೆರಳಿ ಮೊಬೈಲ್‌ಗಳನ್ನು ಬಳಸಬೇಕಿದೆ. ಇದರಿಂದಾಗಿ ಯಾರಾದರೂ ಮೃತಪಟ್ಟರೆ ಅಥವಾ ಯಾವುದೇ ಶುಭ ಸಮಾರಂಭಗಳಿಗೆ ಇತರರಿಗೆ ಕರೆ ಮಾಡಿ ತಿಳಿಸಲು ಸಮಸ್ಯೆಯಾಗಿದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್, ಆನ್‌ಲೈನ್ ಮೂಲಕ ಹಣ ಪಾವತಿಸುವುದು ಸೇರಿದಂತೆ ಎಲ್ಲ ರೀತಿಯ ಆನ್‌ಲೈನ್ ವ್ಯವಹಾರಗಳಿಗೆ ಸಮಸ್ಯೆಯಾಗಿದೆ. ಇನ್ನು ಗ್ರಾಮಸ್ಥರು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆಯಲು 1 ಕಿಮೀ ದೂರದ ಕಾಲುವೆ ಬಳಿ ತೆರಳಿ ಹೆಬ್ಬೆರಳು ಗುರುತು ನೀಡಿ ಮತ್ತೆ ಮರಳಿ ಗ್ರಾಮಕ್ಕೆ ಬಂದು ಅಕ್ಕಿಯನ್ನು ಪಡೆಯುವಂತಹ ಸ್ಥಿತಿಯಿದೆ. ಗ್ರಾಮದಲ್ಲಿ ಹೆಣ್ಣುಮಕ್ಕಳು, ವಯಸ್ಕರು, ಅಂಗವಿಕಲರಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯದಲ್ಲಿ ಏರುಪೇರು ಉಂಟಾದರೆ ಅಥವಾ ಯಾವುದೇ ಅಗ್ನಿ ಅವಘಡಗಳು, ಅಹಿತಕರ ಘಟನೆಗಳು ಸಂಭವಿಸಿದಲ್ಲಿ ತುರ್ತು ಕರೆಗಳನ್ನು ಮಾಡಲು ಸಹ ಸಾಧ್ಯವಾಗದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ.ಬಗೆಹರಿಯದ ಸಮಸ್ಯೆ:ಉಪ್ಪಾರಹಳ್ಳಿ ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆಯಿದ್ದು, ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು, ಸಂಸದರ ಗಮನಕ್ಕೆ ತಂದಿದ್ದರೂ ಯಾವುದೇ ರೀತಿಯ ಪ್ರಯೋಜವಾಗಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಗ್ರಾಮಕ್ಕೆ ನೆಟ್‌ವರ್ಕ್ ಕಲ್ಪಿಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕೆನ್ನುವುದು ಸ್ಥಳಿಯರ ಒತ್ತಾಯ. ಮುತುವರ್ಜಿ ವಹಿಸಲಿ: ಶಾಸಕ ಜೆ.ಎನ್. ಗಣೇಶ್ ಅವರು ಗ್ರಾಮಕ್ಕೆ ನೆಟ್‌ವರ್ಕ್ ವ್ಯವಸ್ಥೆ ಕಲ್ಪಿಸುವಂತೆ ಖಾಸಗಿ ಸಂಸ್ಥೆಯೊಂದಕ್ಕೆ ಮನವಿ ಮಾಡಿದ್ದಲ್ಲದೇ ಬಿಎಸ್ಎನ್ಎಲ್ ಕಚೇರಿಗೂ ಪತ್ರ ಬರೆದಿದ್ದಾರೆ. ಕೂಡಲೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನೆಟ್‌ವರ್ಕ್ ವ್ಯವಸ್ಥೆ ಕಲ್ಪಿಸಲು ಮುತುವರ್ಜಿ ವಹಿಸಬೇಕು ಎಂದು ಮೆಟ್ರಿ ಗ್ರಾಪಂ ಸದಸ್ಯ ಎಚ್. ಕುಮಾರಸ್ವಾಮಿ ಆಗ್ರಹಿಸಿದರು.