ಸರ್ಕಾರಿ ವಾಹನಗಳಿಗೆ ಡೀಸೆಲ್‌ ಹಾಕಿಸಲೂ ಕಾಸಿಲ್ಲ

| Published : Mar 13 2025, 12:49 AM IST

ಸರ್ಕಾರಿ ವಾಹನಗಳಿಗೆ ಡೀಸೆಲ್‌ ಹಾಕಿಸಲೂ ಕಾಸಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ಸಂಸ್ಥೆ ಜಿಲ್ಲಾ ಪಂಚಾಯತ್ ವತಿಯಿಂದ 63 ಇಲಾಖೆಗಳಲ್ಲಿ ಪೂರ್ಣಗೊಂಡ ವಿವಿಧ ಕಾಮಗಾರಿಗಳ ಮೊತ್ತ 326 ಕೋಟಿ ರು.ಗೆ ಅನುಮೋದನೆ ನೀಡಲಾಗಿದ್ದರೂ ಖಜಾನೆಯಿಂದ ಪಾವತಿಯಾಗಿಲ್ಲ ಮತ್ತು ವಿವಿಧ ಇಲಾಖೆಯ ಅಧಿಕಾರಿ ನೌಕರರಿಗೆ ಸಂಬಳ ಪಾವತಿಯಾಗಿಲ್ಲ ಹಾಗೂ ಸರ್ಕಾರಿ ವಾಹನಗಳಿಗೆ ಡೀಸೆಲ್ ಹಾಕಲೂ ಸಹ ಹಣ ಬಿಡುಗಡೆಯಾಗಿಲ್ಲ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ದೂರಿದರು. ಬಿಲ್‌ಗಳ ಸುಮಾರು ೩೨೬ ಕೋಟಿ ಹಣ ಪಾವತಿ ಬಾಕಿ ಇದೆ. ೨೦೨೪-೨೫ನೇ ಸಾಲಿನ ಸ್ಥಳೀಯ ಸಂಸ್ಥೆ ಜಿಲ್ಲಾ ಪಂಚಾಯತ್ ವತಿಯಿಂದ ಅನುಮೋದನೆಗೆ ಬಿಡುಗಡೆಯಾದ ಅನುದಾನದ ಬಿಲ್ಲುಗಳು ಖಜಾನೆಯಿಂದ ಪಾವತಿಯಾಗಿಲ್ಲ ಮತ್ತು ವಿವಿಧ ಇಲಾಖೆಯ ಅಧಿಕಾರಿ ನೌಕರರಿಗೆ ಸಂಬಳ ಪಾವತಿಯಾಗಿಲ್ಲ ಹಾಗೂ ಸರ್ಕಾರಿ ಕಚೇರಿಯ ವಾಹನಕ್ಕೆ ಡೀಸೆಲ್ ಹಾಕಲೂ ಸಹ ಹಣ ಬಿಡುಗಡೆಯಾಗಿಲ್ಲ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಹಾಸನ

ಸ್ಥಳೀಯ ಸಂಸ್ಥೆ ಜಿಲ್ಲಾ ಪಂಚಾಯತ್ ವತಿಯಿಂದ 63 ಇಲಾಖೆಗಳಲ್ಲಿ ಪೂರ್ಣಗೊಂಡ ವಿವಿಧ ಕಾಮಗಾರಿಗಳ ಮೊತ್ತ 326 ಕೋಟಿ ರು.ಗೆ ಅನುಮೋದನೆ ನೀಡಲಾಗಿದ್ದರೂ ಖಜಾನೆಯಿಂದ ಪಾವತಿಯಾಗಿಲ್ಲ ಮತ್ತು ವಿವಿಧ ಇಲಾಖೆಯ ಅಧಿಕಾರಿ ನೌಕರರಿಗೆ ಸಂಬಳ ಪಾವತಿಯಾಗಿಲ್ಲ ಹಾಗೂ ಸರ್ಕಾರಿ ವಾಹನಗಳಿಗೆ ಡೀಸೆಲ್ ಹಾಕಲೂ ಸಹ ಹಣ ಬಿಡುಗಡೆಯಾಗಿಲ್ಲ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ದೂರಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿ, ಹಾಸನದ ಎಲ್ಲಾ ಇಲಾಖೆಯಲ್ಲೂ ಎರಡು ತಿಂಗಳಿಂದ ಬಿಲ್ ಆಗಿಲ್ಲ. ಖಜಾನೆಯನ್ನು ಲಾಕ್ ಮಾಡಲಾಗಿದೆ. ಮೂರು ತಿಂಗಳಿಂದ ಅಧಿಕಾರಿ ಸಿಬ್ಬಂದಿಗೆ ಸಂಬಳವೇ ಆಗಿಲ್ಲ. ಹಾಸನ ಜಿಲ್ಲೆ ಅನಾಥವಾಗಿದೆ. ಎಲ್ಲಾ ಕಡೆಯು ಖಜಾನೆ ಓಪನ್ ಆಗಿದೆ. ನಮ್ಮ ಜಿಲ್ಲೆಯಲ್ಲಿ ಮಾತ್ರ ಲಾಕ್ ಆಗಿದೆ. ಜಿಲ್ಲೆಯ. ೬೩ ಇಲಾಖೆಯ ಅನುದಾನ ಕೂಡ ಬಿಡುಗಡೆ ಆಗುತ್ತಿಲ್ಲ. ಬಿಲ್‌ಗಳ ಸುಮಾರು ೩೨೬ ಕೋಟಿ ಹಣ ಪಾವತಿ ಬಾಕಿ ಇದೆ. ೨೦೨೪-೨೫ನೇ ಸಾಲಿನ ಸ್ಥಳೀಯ ಸಂಸ್ಥೆ ಜಿಲ್ಲಾ ಪಂಚಾಯತ್ ವತಿಯಿಂದ ಅನುಮೋದನೆಗೆ ಬಿಡುಗಡೆಯಾದ ಅನುದಾನದ ಬಿಲ್ಲುಗಳು ಖಜಾನೆಯಿಂದ ಪಾವತಿಯಾಗಿಲ್ಲ ಮತ್ತು ವಿವಿಧ ಇಲಾಖೆಯ ಅಧಿಕಾರಿ ನೌಕರರಿಗೆ ಸಂಬಳ ಪಾವತಿಯಾಗಿಲ್ಲ ಹಾಗೂ ಸರ್ಕಾರಿ ಕಚೇರಿಯ ವಾಹನಕ್ಕೆ ಡೀಸೆಲ್ ಹಾಕಲೂ ಸಹ ಹಣ ಬಿಡುಗಡೆಯಾಗಿಲ್ಲ ಎಂದು ದೂರಿದರು.

ತೆರಿಗೆ ಹಣದಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷರಿಗೆ ವೇತನ:

ಸಾರ್ವಜನಿಕರ ತೆರಿಗೆ ಹಣ ಸುಮಾರು ೧೬ ಕೋಟಿ ಗ್ಯಾರಂಟಿ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ವೇತನ ಕೊಡಲು ಸರ್ಕಾರ ಖರ್ಚು ಮಾಡುತ್ತಿದೆ. ಇಂತಹ ದುರಾಡಳಿತ ಎಷ್ಟು ಸರಿ ಎಂದು ಪ್ರಶ್ನಿಸಿದ್ದು, ಕೆಲವರು ಬಜೆಟ್‌ನಲ್ಲಿ ಅದು, ಇದು ಕೊಟ್ಟಿದಾರೆ ಅಂತಾರೆ. ಅದರ ಬಗ್ಗೆ ಮಾತಾಡಲ್ಲ ಎಂದು ಹೆಸರು ಹೇಳದೆ ಸಂಸದ ಶ್ರೇಯಸ್ ವಿರುದ್ಧ ಟೀಕಿಸಿದರು. ಮೇಲ್ಸೇತುವೆಗೆ ಅನುದಾನ ತರುವಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಶ್ರಮವಿದೆ. ರಾಜ್ಯದ ಬಜೆಟ್‌ಗೂ ಮೊದಲೇ ಕಾಮಗಾರಿಗೆ ಹಣ ಕೊಡಬೇಕೆಂದು ಧ್ವನಿ ಎತ್ತಿದ ಪರಿಣಾಮ ಅನುದಾನ ಬಿಡುಗಡೆ ಆಗುತ್ತಿದೆ. ಹಾಸನದ ರೈಲ್ವೆ ಮೇಲ್ಸೇತುವೆಗೆ ಹಣ ನೀಡಿಲ್ಲ. ಬಜೆಟ್‌ನಲ್ಲಿ ಎಲ್ಲಿ ಪ್ರಸ್ತಾಪ ಆಗಿದೆ. ದೇವೇಗೌಡರು ಕೇಂದ್ರಕ್ಕೆ ಪತ್ರ ಬರೆದ ಮೇಲೆ ಹಣ ಬಿಡುಗಡೆಗೆ ಆದೇಶ ಆಗಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿಕೆಗೆ ಮಾಜಿ ಸಚಿವ ರೇವಣ್ಣ ಟಾಂಗ್ ಕೊಟ್ಟರು.

ಸರ್ಕಾರದ ಐದು ಗ್ಯಾರಂಟಿ ಜೊತೆಗೆ ಎಣ್ಣೆ ಭಾಗ್ಯ ಕೊಟ್ಟಿಲ್ಲವೇ! ಹೊಳೆನರಸೀಪುರ ತಾಲೂಕಿನಲ್ಲಿ ಈಗಾಗಲೇ ೩೬ ಎಣ್ಣೆ ಅಂಗಡಿ ಆಗಿದೆ. ಹಾಸನದ ರಿಂಗ್ ರೋಡಲ್ಲಿ ಬೇಕಾಬಿಟ್ಟಿ ಮದ್ಯದಂಗಡಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆ ಸಮರ್ಪಕ ಜಾರಿ ಮಾಡುವ ಬದಲು ಎಣ್ಣೆ, ಇಸ್ಪೀಟು, ಮಟ್ಕ ದಂಧೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ಜೀವನದಲ್ಲಿ ನಾಲ್ಕು ಎಣ್ಣೆ ಅಂಗಡಿ ಕೊಡಿಸಿಧ್ದೇನೆ. ೩೦ ವರ್ಷದ ರಾಜಕೀಯ ಜೀವನದಲ್ಲಿ ಇಷ್ಟೇ ಕೊಡಿಸಿರೋದು ಎಂದು ಕಳೆದ ಒಂದು ದಿನಗಳ ಹಿಂದೆ ಸಂಸದರು ಹೇಳಿಕೆ ನೀಡಿರುವುದಕ್ಕೆ ರೇವಣ್ಣ ಉತ್ತರ ನೀಡಿದ ರೀತಿಯಾಗಿತ್ತು.

ನನಗೆ ಬಜೆಟ್ ಪ್ರತಿ ಓದಲು ಬರುವುದಿಲ್ಲ. ಆದರೆ ಈ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಎಷ್ಟು ಅನುದಾನ ಮೀಸಲಿಟ್ಟಿದ್ದಾರೆ ತಿಳಿಸಬೇಕೆಂದರು. ನಗರಸಭೆಯನ್ನು ಮೇಲ್ದರ್ಜೆಗೆ ಏರಿಸುವ ಕುರಿತು ಹಿಂದೆ ಇದ್ದ ಸರ್ಕಾರದಿಂದಲೂ ಪ್ರಸ್ತಾಪ ಮಾಡಲಾಗಿದ್ದು, ಈ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿರುವುದಿಲ್ಲ. ಹೇಳಿಕೆ ನೀಡಿರುವ ಶ್ರೇಯಸ್ ಪಟೇಲ್ ಅವರು ಬಜೆಟ್ ಪ್ರತಿ ಓದಿ ತಿಳಿದುಕೊಂಡು ಮಾತನಾಡಲಿ. ಈ ರೀತಿ ಸುಳ್ಳು ಹೇಳಿಕೆ ನೀಡುವುದು ಬೇಡ ಎಂದು ಪರೋಕ್ಷವಾಗಿ ಸಂಸದರಿಗೆ ತಿರುಗೇಟು ನೀಡಿದರು.