ಸಾರಾಂಶ
ಹಲವು ವರ್ಷಗಳ ಕಾಲ ಹೋರಾಟ ಮಾಡಿದರೂ ರಾಜ್ಯ ಸರ್ಕಾರ ಕ್ಯಾರೆ ಎನ್ನಲಿಲ್ಲ.
ಸುದ್ದಿಗೋಷ್ಠಿಯಲ್ಲಿ ಮಾದಿಗ ಸಮುದಾಯದ ಮುಖಂಡ ಹೊರಟ್ನಾಳ
ಕನ್ನಡಪ್ರಭ ವಾರ್ತೆ ಕೊಪ್ಪಳಈಗಾಗಲೇ ವರದಿ ಇದ್ದರೂ ಸಹ ಒಳ ಮೀಸಲಾತಿಯನ್ನು ಜಾರಿ ಮಾಡಲು ಮತ್ತೆ ಸಮಿತಿ ರಚನೆ ಮಾಡಿರುವುದು ಕಣ್ಣೊರೆಸುವ ತಂತ್ರವಾಗಿದ್ದು, ಇದನ್ನು ಕೈ ಬಿಟ್ಟು ಕೂಡಲೇ ಒಳಮೀಸಲಾತಿ ಜಾರಿ ಮಾಡುವಂತೆ ಮಾದಿಗ ಸಮುದಾಯದ ಮುಖಂಡ ಗಣೇಶ ಹೊರಟ್ನಾಳ ಆಗ್ರಹಿಸಿದ್ದಾರೆ.
ನಗರದ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಹಲವು ವರ್ಷಗಳ ಕಾಲ ಹೋರಾಟ ಮಾಡಿದರೂ ರಾಜ್ಯ ಸರ್ಕಾರ ಕ್ಯಾರೆ ಎನ್ನಲಿಲ್ಲ. ಈಗ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಜಾರಿ ಮಾಡುವುದನ್ನ ಬಿಟ್ಟು ಸಮಿತಿ ರಚನೆ ಮಾಡಿ, ಕಾಲದೂಡುವ ಕಾರ್ಯ ಮಾಡುತ್ತಿದೆ. ನಮ್ಮ ತಾಳ್ಮೆಗೂ ಮಿತಿ ಇದೆ. ವಿನಾಕಾರಣ ಸಮಯ ವಿಳಂಬ ಮಾಡುವುದು ಸರಿಯಲ್ಲ. ಈಗ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ, ಕಣ್ಣೊರೆಸುವ ತಂತ್ರ ಮಾಡಲಾಗುತ್ತಿದೆ. ಆದರೆ, ನಮಗೆ ಇದರಿಂದ ಪ್ರಯೋಜನ ಇಲ್ಲ ಕಿಡಿಕಾರಿದ್ದಾರೆ.
ಎಸ್ಸಿ 101 ಸಮುದಾಯಗಳಲ್ಲಿ ಮಾದಿಗ ಸಮುದಾಯ ಹೆಚ್ಚು ಇದ್ದು, ಈಗ ಕೆಲವೊಂದು ಜಾತಿಯ ಮನವೊಲಿಸಲು ಮುಂದೂಡುವ ತಂತ್ರ ಮಾಡಲಾಗುತ್ತದೆ. ಆದ್ದರಿಂದ ಇದನ್ನ ಕೈಬಿಟ್ಟು ಜಾರಿ ಮಾಡುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ನಾಗಲಿಂಗ ಮಾಳೆಕೊಪ್ಪ, ಮಂಜುನಾಥ ಮುಸ್ಲಾಪುರ, ಮರಿಸ್ವಾಮಿ ಬೇವೂರು, ಸುಭಾಷ ಕನಕಗಿರಿ, ದೇವರಾಜ ಹುಣಸಿಹಾಳ, ವಿನಾಯಕ ಕಿಡದಾಳ ಇದ್ದರು.