ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಆರೋಗ್ಯ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಗಳಾಗಿದ್ದರೂ ಸಾಕಷ್ಟು ಮಂದಿಯಲ್ಲಿ ರಕ್ತದಾನ ಕುರಿತು ಇನ್ನೂ ಸಹ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ ಎಂದು ಸಂಸದ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.ನಗರ ಹೊರವಲಯದ ಸಿ.ವಿ. ವೆಂಕಟರಾಯಪ್ಪ ಶಿಕ್ಷಣ ಕೇಂದ್ರದಲ್ಲಿ ಬುಧವಾರ 29ನೇ ದತ್ತಿ ದಿನಾಚರಣೆ ಹಾಗೂ ಕೆ.ವಿ. ದತ್ತಿಗಳ ಸಂಸ್ಥಾಪಕ ಅಧ್ಯಕ್ಷ ಸಿ.ವಿ.ವೆಂಕಟರಾಯಪ್ಪರವರ 110ನೇ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿ ಆರೋಗ್ಯವಂತ ವ್ಯಕ್ತಿಯು ವರ್ಷದಲ್ಲಿ ಕನಿಷ್ಠ ಮೂರು ಬಾರಿ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ದೇಹದಲ್ಲಿ ಅನಗತ್ಯ ಶೇಖರಣೆಯಾಗುವ ಕೊಬ್ಬಿನಾಂಶ ಕಡಿಮೆಯಾಗಿ ಆರೋಗ್ಯವಂತರಾಗಿರುತ್ತಾರೆ. ರಕ್ತದಾನದಿಂದ ಮತ್ತೊಬ್ಬರ ಜೀವ ಉಳಿಸಿದ ಪುಣ್ಯ ರಕ್ತದಾನಿಗೆ ಸಿಗುತ್ತದೆ ಎಂದು ತಿಳಿಸಿದರು.ಕೆ.ವಿ. ದತ್ತಿಗಳ ಸಂಸ್ಥಾಪಕ ಅಧ್ಯಕ್ಷ ಹಾಗೂ ಶಿಕ್ಷಣ ಕ್ಷೇತ್ರದ ಭೀಷ್ಮರೆಂದೇ ಖ್ಯಾತರಾದ ಸಿ.ವಿ.ವೆಂಕಟ ರಾಯಪ್ಪರವರ 110ನೇ ಜಯಂತಿ ಪ್ರಯುಕ್ತ ಒಂದೇ ಶಿಬಿರದಲ್ಲಿ ಇಷ್ಟೊಂದು ಬೃಹತ್, ದಾಖಲೆ ಪ್ರಮಾಣದ ರಕ್ತ ದಾನ ನಡೆಯುತ್ತಿರುವುದು ಸಂತೋಷದಾಯಕ ವಿಷಯವಾಗಿದೆ. ರಚನಾತ್ಮಕ ಸಮಾಜ ಸೇವಾ ಕಾರ್ಯದ ರೂವಾರಿ ಕೆ.ವಿ. ನವೀನ್ ಕಿರಣ್ ಆಗಿದ್ದು ನನಗೆ ತುಂಬಾ ಸಂತೋಷದಾಯಕ ವಿಷಯವಾಗಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ರೆಡ್‌ಕ್ರಾಸ್ ಸೊಸೈಟಿ ಸೇರಿ ನಾನಾ ಸಂಘ- ಸಂಸ್ಥೆಗಳು ರಕ್ತದಾನ ಶಿಬಿರ ಏರ್ಪಡಿಸಿ ರಕ್ತದಾನ ಕುರಿತು ಹೆಚ್ಚು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ. ಇದರಿಂದ ಜಿಲ್ಲೆಯ ಬಹುತೇಕ ಮಂದಿ ರಕ್ತದಾನಕ್ಕೆ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ಈ ಹಿಂದೆ ವಿದ್ಯಾವಂತರೂ ಸಹ ರಕ್ತದಾನ ಎಂದರೆ ದೂರ ಉಳಿಯುತ್ತಿದ್ದರು. ರಕ್ತದಾನ ಕುರಿತು ಇದ್ದ ತಪ್ಪು ಕಲ್ಪನೆಗಳೇ ಇದಕ್ಕೆ ಕಾರಣ. ಇತ್ತೀಚಿನ ವರ್ಷಗಳಲ್ಲಿ ಗ್ರಾಪಂ ಮಟ್ಟದಲ್ಲೂ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದು, ರಕ್ತದಾನ ಶಿಭಿರದಲ್ಲಿ ಯುವ ಜನತೆ ಹೆಚ್ಚು ಪಾಲ್ಗೊಳ್ಳುತ್ತಿದ್ದಾರೆ. ಜಿಲ್ಲೆಯು ರಕ್ತ ಸಂಗ್ರಹಣೆಯಲ್ಲಿ ಉತ್ತಮ ಸ್ಥಾನದಲ್ಲಿದೆ. ಇದಕ್ಕೆಲ್ಲಾ ರೆಡ್‌ಕ್ರಾಸ್ ಸೊಸೈಟಿ, ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ತೋರಿದ ಆಸಕ್ತಿ, ಶ್ರಮವೇ ಕಾರಣ. ಇದೇ ಕಾಳಜಿ, ಉತ್ಸಾಹವನ್ನು ಮುಂದುವರಿಸಿಕೊಂಡು ಹೆಚ್ಚು ರಕ್ತದಾನ ಮಾಡುವ ಮೂಲಕ ನೀವೂ ಆರೋಗ್ಯ ಕಾಪಾಡಿಕೊಳ್ಳಿ, ಇತರರಿಗೆ ಜೀವದಾನ ಮಾಡಿ ಎಂದು ಯುವಜನತೆಗೆ ಮನವಿ ಮಾಡಿದರು.
ಕೆ.ವಿ.ಟ್ರಸ್ಟ್ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ .ವಿ. ನವೀನ್ ಕಿರಣ್ ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠ ದಾನವಾಗಿದ್ದು, ಜೀವನ್ಮರಣ ಹೋರಾಟದಲ್ಲಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದಾನ ಮಾಡುವುದು ಶ್ರೇಷ್ಠವಾದದ್ದು, ಸಮಾಜದಲ್ಲಿನ ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಯಾವುದಾದರೂ ಒಂದು ರಚನಾತ್ಮಕವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಸಂಸ್ಥಾಪಕ ಅಧ್ಯಕ್ಷರಾದ ಸಿ.ವಿ. ವೆಂಕಟರಾಯಪ್ಪನವರ ಸಂದೇಶವಾಗಿದ್ದು, ಈ ನಿಟ್ಟಿನಲ್ಲಿ 1997 ರಿಂದ ನಿರಂತರವಾಗಿ ಪ್ರತಿ ವರ್ಷ ರಕ್ತದಾನ ಶಿಬಿರಗಳನ್ನು ಮಾಡಿಕೊಂಡು ಬರಲಾಗಿದೆ. ಈ ರಕ್ತದಾನ ಶಿಬಿರಕ್ಕೆ 18 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸಿದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಣೆಯ ಗುರಿ ಹೊಂದಲಾಗಿದೆ ಎಂದರು.ಕೆ.ವಿ.ದತ್ತಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಸಿಬ್ಬಂದಿ ವರ್ಗ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು, ಚಿಕ್ಕಬಳ್ಳಾಪುರದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಕೇಂದ್ರದ ಪತ್ರಕರ್ತರು, ಕೆ .ವಿ. ನವೀನ್ ಕಿರಣ್ ರವರ ಅಭಿಮಾನಿ ವೃಂದ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದರು.
ರಕ್ತ ನೀಡಿದ ಎಲ್ಲರಿಗೂ ರೆಡ್‌ಕ್ರಾಸ್ ಸೊಸೈಟಿಯಿಂದ ಅಭಿನಂದನಾ ಪತ್ರ ವಿತರಿಸಲಾಯಿತು. ರಕ್ತದಾನಿಗಳಿಗೆ ಸಂಘಟಕರು ಹಣ್ಣು, ತಂಪು ಪಾನೀಯ ನೀಡಿ ಉಪಚರಿಸಿದರು.ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ಜೆ.ನಾಗರಾಜ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಅಭಿಲಾಷ್, ಟ್ರಸ್ಟಿಗಳಾದ ಬಿ.ಮುನಿಯಪ್ಪ, ಸಿ.ವಿ.ನಿರ್ಮಲಾ ಪ್ರಭು, ದತ್ತಿ ಆಡಳಿತಾಧಿಕಾರಿ ಡಾ. ಸಾಯಿಪ್ರಭು, ಮ್ಯಾನೇಜರ್ ಲಕ್ಷ್ಮಣ ಸ್ವಾಮಿ. ದತ್ತಿ ಹಿತೈಷಿಗಳಾದ ಮಹೇಶ್, ವಿಜಯಲಕ್ಷ್ಮೀ, ಇಮ್ರಾನ್ ಖಾನ್, ಮರಳಕುಂಟೆ ಕೃಷ್ಣಮೂರ್ತಿ, ಗಿರೀಶ್ ಗರಿಗಿರೆಡ್ಡಿ, ರಕ್ತಾದಾನ ಶಿಬಿರದ ನಿರ್ವಹಣೆ ಮುಖ್ಯಸ್ಥ ಹಾಗೂ ಕೆ. ವಿ. ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್.ವೆಂಕಟೇಶ್. ಕೆವಿ ಮತ್ತು ಪಂಚಗಿರಿ ದತ್ತಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಎನ್.ವೆಂಕಟೇಶ್, ರೆಡ್ ಕ್ರಾಸ್ ನ ಎಂ.ಜಯರಾಂ, ಕೋಡಿರಂಗಪ್ಪ, ಬಿ.ಎನ್.ರವಿಕುಮಾರ್, ದತ್ತಿಗಳ ಕಾರ್ಯನಿರ್ವಹಿಸಲ್ಪಡುವ ಎಲ್ಲಾ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರು, ಅಧ್ಯಾಪಕರು, ಭೋದಕೇತರ ವರ್ಗ, ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್, ರೆಡ್‌ಕ್ರಾಸ್ ಸೊಸೈಟಿ ವೈದ್ಯರ ತಂಡ, ಸಿಬ್ಬಂದಿ ಬೃಹತ್ ಶಿಬಿರದಲ್ಲಿ ಹಾಜರಿದ್ದರು.