ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಸಲ್ಲದು

| Published : Jun 16 2024, 01:49 AM IST

ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಸಲ್ಲದು
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಸರ್ಕಾರಿ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ಮಾಡಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.

ದೊಡ್ಡಬಳ್ಳಾಪುರ: ಸರ್ಕಾರಿ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ಮಾಡಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಹಾಗೂ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.

ಅಭಿವೃದ್ಧಿ ಪರ ಕಾರ್ಯಕ್ರಮಗಳಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಜನಸಾಮಾನ್ಯರಿಗೆ ಸೌಲಭ್ಯಗಳು ಪಾರದರ್ಶಕವಾಗಿ, ಜವಾಬ್ದಾರಿಯುತವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು. ಯಾವುದೇ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಾಗ ಜನಪ್ರತಿನಿಧಿಗಳ ಗಮನಕ್ಕೆ ತಂದು ಪ್ರತಿಯೊಬ್ಬರಿಗೂ ತಲುಪುವಂತೆ ಕೆಲಸ ಮಾಡಬೇಕು ಎಂದು ಹೇಳಿದರು.

ಪೋಡಿ ಮುಕ್ತ ಜಿಲ್ಲೆ ಗುರಿ:

ಜಿಲ್ಲೆಯನ್ನು ಪೋಡಿ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಸಮಸ್ಯೆ, ಸ್ಮಶಾನ ಸಂಪರ್ಕಿಸುವ ರಸ್ತೆ ಇಲ್ಲದಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ತಹಸೀಲ್ದಾರ್ ಹಾಗೂ ತಾಪಂ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆ ಹರಿಸಿಬೇಕು ಎಂದರು.

ಬಡವರಿಗೆ ಶೀಘ್ರ ನಿವೇಶನ:

ಬಡವರಿಗೆ ಮನೆ ಕಲ್ಪಿಸಲು, ನಿವೇಶನ ಹಂಚಲು ಕ್ರಮ ವಹಿಸಲಾಗುವುದು. ಈಗಾಗಲೇ ಜಿಲ್ಲೆಯ ಹಲವು ಭಾಗಗಳಲ್ಲಿ ನಿವೇಶನಕ್ಕಾಗಿ ಜಾಗ ಗುರ್ತಿಸಿಲಾಗಿದೆ. ಶೀಘ್ರವೇ ನಿವೇಶನಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

ಅರಣ್ಯ ವರ್ಧನೆಗೆ ಕ್ರಮ:

ಪ್ರತಿ ವರ್ಷ ಅರಣ್ಯ ಇಲಾಖೆಯವರು ಸಾವಿರಾರು ಸಸಿಗಳನ್ನು ನೆಡುತ್ತಾರೆ. ಆದರೆ ಅದನ್ನು ಪೋಷಿಸಿ ಬೆಳೆಸುವಲ್ಲಿ ಗಮನಹರಿಸುತ್ತಿಲ್ಲ. ಸಸಿಗಳನ್ನು ಎಲ್ಲೆಂದರಲ್ಲಿ ನೆಡಬಾರದು ಬದಲಾಗಿ, ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ ಜಮೀನುಗಳಲ್ಲಿ ಹಾಗೂ ಗ್ರಾಮ ಠಾಣಾಗಳಲ್ಲಿ ನೆಡಬೇಕು. ಸಸಿ ನೆಟ್ಟ ನಂತರ ಕನಿಷ್ಠ ಮೂರು ವರ್ಷಗಳವರೆಗೆ ಪೋಷಿಸಿ ಬೆಳೆಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯಪುರ ಪಟ್ಟಣದಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆಗೆ ಹೋಗಲು ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ, ಸುತ್ತಲು ಕಾಂಪೌಂಡ್ (ಬೇಲಿ) ಇಲ್ಲದಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಒಂದು ವಾರದೊಳಗೆ ರಸ್ತೆ ಸಂಪರ್ಕ ಕಲ್ಪಿಸಿ, ಶಾಲೆ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲು ಅಗತ್ಯ ಸಿದ್ಧತೆ ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯುತ್ ಸಮಸ್ಯೆ, ಭೂ ಸ್ವಾಧೀನ ಪರಿಹಾರ ಹಣ, ಘನತ್ಯಾಜ್ಯ ವಿಲೇವಾರಿ, ಹಕ್ಕುಪತ್ರ ವಿವರಣೆ, ನಿವೇಶನ ಹಂಚಿಕೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಕೂಲಂಕಶವಾಗಿ ಪರಿಶೀಲಿಸಿ, ಶೀಘ್ರ ಕ್ರಮವಹಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ್‌, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧ, ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ರಾಜಣ್ಣ, ಉಪಾಧ್ಯಕ್ಷ ನಾರಾಯಣಸ್ವಾಮಿ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್. ನಟರಾಜ್ ಸೇರಿದಂತೆ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.15ಕೆಡಿಬಿಪಿ1-

ಬೆಂ.ಗ್ರಾ. ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಪ್ರಗತಿ ಪರಿಶೀಲನಾ ಸಭೆ ನಡೆಸಿ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದರು.15ಕೆಡಿಬಿಪಿ2-

ಬೆಂ.ಗ್ರಾ. ಜಿಲ್ಲಾಡಳಿತ ಭವನದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.