ಸಾರಾಂಶ
ಸಿದ್ದಾಪುರ: ರಾಜ್ಯ ಇತಿಹಾಸದಲ್ಲಿ ರಾಮಕೃಷ್ಣ ಹೆಗಡೆ ಅವರಂಥ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ. ಅಧಿಕಾರ ಇರಲಿ, ಇಲ್ಲದಿರಲಿ, ಎಂದೂ ತತ್ವ, ಆದರ್ಶ, ಮೌಲ್ಯಗಳನ್ನು ಬಿಟ್ಟವರಲ್ಲ. ನನ್ನ ಬದುಕಿನ ಬೆಳವಣಿಗೆಯಲ್ಲಿ ಅವರ ಕೊಡುಗೆಯಿದೆ. ಯಾವತ್ತೂ ನನ್ನ ಹೃದಯದಲ್ಲಿರುವವರು ಹೆಗಡೆಯವರು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಪಟ್ಟಣದ ಶಿಕ್ಷಣ ಪ್ರಸಾರರಕ ಸಮಿತಿಯ ಆವಾರದಲ್ಲಿ ನಡೆದ ರಾಮಕೃಷ್ಣ ಹೆಗಡೆ ಚಿರಂತನ ಆಯೋಜಿಸಿದ ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಮತ್ತು ಚೇತನಾ ಕ್ರೆಡಿಟ್ ಕೋ ಆಪರೇಟಿವ್ ಸೌಹಾರ್ದ ಸೊಸೈಟಿ ಉದ್ಘಾಟಿಸಿ ಅವರು ಮಾತನಾಡಿ, ಈಗ ಮೌಲ್ಯ ಇಲ್ಲದೇ ಕೇವಲ ರಾಜಕಾರಣ ಉಳಿದುಕೊಂಡಿದೆ. ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾದವರು ಹೆಗಡೆಯವರು ಎಂದರು.
ಮುಖ್ಯಮಂತ್ರಿಯಾದವರು ಜನಸಾಮಾನ್ಯರೊಂದಿಗೆ ಹೇಗೆ ಸಂಬಂಧ ಹೊಂದಿರಬೇಕು ಎನ್ನುವುದಕ್ಕೆ ಸ್ಪಷ್ಟ ನಿದರ್ಶನ ಹೆಗಡೆಯವರು. ೪೫ ವರ್ಷ ನನ್ನ ರಾಜಕಾರಣದಲ್ಲಿ ಹೆಗಡೆಯವರಂತಹ ಮುತ್ಸದ್ಧಿ ರಾಜಕಾರಣಿಯನ್ನು ನಾನು ನೋಡಿಲ್ಲ. ಹೆಗಡೆಯವರು ಯಾವತ್ತೂ ಜಾತಿ ರಾಜಕಾರಣ ಮಾಡಿದವರಲ್ಲ. ರಾಮಕೃಷ್ಣ ಹೆಗಡೆ ನಿಧರಾಗಿದ್ದರೂ ಇಂದಿಗೂ ಜೀವಂತವಾಗಿದ್ದಾರೆ ಎಂದರು.ಮುಖ್ಯ ಅಭ್ಯಾಗತರಾಗಿ ಭಾಗಿಯಾದ ಮಾಜಿ ಸಚಿವ, ಹಾಲಿ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ರಾಜಕಾರಣ ಇಂದು ತೀರಾ ಕೆಳಮಟ್ಟಕ್ಕೆ ಇಳಿಯುತ್ತಿದೆ. ಮತದಾರರು ಸಹ ತಮ್ಮ ಮತಗಳ ಮಹತ್ವ ತಿಳಿದುಕೊಳ್ಳುತ್ತಿಲ್ಲ. ನಾವು ಪ್ರಜಾಪ್ರಭುತ್ವ ಎನ್ನುತ್ತೇವೆ. ಆದರೆ ನಿಜವಾದ ಪ್ರಜಾಭುತ್ವ ಇದೆಯೇ ಎಂಬ ಅನುಮಾನ ಕಾಡುತ್ತಿದೆ. ಮತ ಮಾರಾಟವಾಗದೇ ಉತ್ತಮ ಅಭ್ಯರ್ಥಿಯ ಆಯ್ಕೆ ಆದರೆ ಅದು ನಿಜವಾದ ಪ್ರಜಾಪ್ರಭುತ್ವವಾಗಿರುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರ ಕಂಡ ಸಜ್ಜನ, ನಿಷ್ಠಾವಂತ ರಾಜಕಾರಣಿ ರಾಮಕೃಷ್ಣ ಹೆಗಡೆ ಮುಖ್ಯವೆನ್ನಿಸುತ್ತಾರೆ. ಕೇವಲ ಆರೋಪ ಮಾತ್ರಕ್ಕೆ ರಾಜೀನಾಮೆ ನೀಡಿದ ವ್ಯತ್ವಿತ್ವ ಅವರದು. ಹೆಗಡೆಯವರು ಪ್ರಧಾನಿಯಾಗಲು ಉತ್ತಮ ವ್ಯಕ್ತಿಯಾಗಿದ್ದರು. ಸಮಾಜದ ಸೇವೆಗೆ ದೇಶ ಸೇವೆಗೆ ಹೆಗಡೆಯವರ ಆದರ್ಶಗಳೊಂದಿಗೆ ಮುಂದೆ ಬರಬೇಕು ಎಂದು ಯುವಕರಿಗೆ ಮನವಿ ಮಾಡುತ್ತಿದ್ದೇನೆ ಎಂದರು.
ಮುಖ್ಯ ಅಭ್ಯಾಗತರಾಗಿ ಭಾಗಿಯಾದ ಶಾಸಕ ಶಿವರಾಮ ಹೆಬ್ಬಾರ, ಸೊಸೈಟಿಯ ಆರ್ಥಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ, ನಾವು ರಾಜಕಾರಣದಲ್ಲಿ ಹೆಗಡೆಯವರ ಮೌಲ್ಯಗಳನ್ನು ಉಳಿಸಿಕೊಂಡಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಇದೆ. ಬಹಳ ಜನ ನಾಯಕರಾಗುತ್ತಾರೆ. ಆದರೆ ಯಾರು ಹೆಚ್ಚು ನಾಯಕರನ್ನು ಸಮಾಜಕ್ಕೆ ನೀಡುತ್ತಾರೋ ಅವರೇ ನಿಜವಾದ ನಾಯಕರಾಗುತ್ತಾರೆ. ಹೆಗಡೆಯವರ ಆದರ್ಶ ಮುಂದಿನ ಪೀಳಿಗೆಗೂ ಪರಿಚಯಿಸುವ ಕೆಲಸವಾಗುತ್ತಿರುವುದು ಶ್ಲಾಘನೀಯ. ಹೆಗಡೆಯವರ ಆದರ್ಶವನ್ನು ಜೀವಂತವಾಗಿ ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಏಕೈಕ ರಾಜಕಾರಣಿ ಬಸವರಾಜ ಹೊರಟ್ಟಿ ಎಂದರು.ರಾಮಕೃಷ್ಣ ಹೆಗಡೆ ಚಿರಂತನದ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹೆಗಡೆಯವರ ಅನುಯಾಯಿಗಳಾದ ಪಿ.ಎಸ್. ಭಟ್ಟ ಉಪ್ಪೋಣಿ, ಜಿ.ಎಂ. ಹೆಗಡೆ ಮುಳಖಂಡ, ಗೋಪಾಲಕೃಷ ಹೆಗಡೆ ಮುರೇಗಾರ, ಸಿ.ಕೆ. ಅಶೋಕ ಮೈನಳ್ಳಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಪ್ರಮೋದ ಹೆಗಡೆ ಯಲ್ಲಾಪುರ ಅಭಿನಂದನಾ ನುಡಿಗಳನ್ನಾಡಿದರು.
ಸಭೆಯಲ್ಲಿ ಸಾಮಾಜಿಕ ಧುರೀಣ ಕೆ. ಜಿ. ನಾಯ್ಕ ಹಣಜೀಬೈಲ್, ಶಿರಸಿ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿದರು. ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟಿಸರ, ಸ್ಥಳೀಯ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಉತ್ತರ ಕನ್ನಡ ಸಹಕಾರಿ ಯೂನಿಯನ್ ಅಧ್ಯಕ್ಷ ವಿ. ಎನ್. ಭಟ್ಟ ಅಳ್ಳಂಕಿ ಇದ್ದರು.ಚೇತನಾ ಸೊಸೈಟಿಯ ಉಪಾಧ್ಯಕ್ಷ ಶ್ರೀಪಾದ ರಾಯ್ಸದ ವಂದಿಸಿದರು.